FACT CHECK | ಬ್ರಾಹ್ಮಣ ಹೆಣ್ಣುಮಕ್ಕಳನ್ನು ವಂಚಿಸಲು ಮುಸ್ಲಿಂ ಯುವಕನೊಬ್ಬ Brahmin_Unity ಎಂಬ ಫೇಸ್‌ಬುಕ್ ಪೇಜ್ ತೆರೆದಿದ್ದು ನಿಜವೇ?
ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೊವನ್ನು ಹಂಚಿಕೊಂಡು, ‘‘ರಾಜಸ್ಥಾನದ ಜುನೈದ್ ಅನ್ಸಾರಿ ಎಂಬ ಯುವಕ ಫೇಸ್‌ಬುಕ್‌ನಲ್ಲಿ #Brahmin_Unity ಎಂಬ ಗುಂಪನ್ನು ರಚಿಸಿ ಅದರ ಅಡ್ಮಿನ್ ಆಗಿ ಮುಂದುವರೆದನು. ಈ ಗುಂಪಿಗೆ ಬ್ರಾಹ್ಮಣ ಸಮುದಾಯದ ಹುಡುಗಿಯರನ್ನು ಮಾತ್ರ ಸೇರಿಸುವುದು ಅವನ ವಿಧಾನವಾಗಿತ್ತು. ಇದರ ವಿರುದ್ಧ ಹಿಂದೂ ಯುವಕರು ಪೊಲೀಸರಿಂದ ಸಹಾಯ ಕೋರಿದ್ದರೂ, ರಾಜಸ್ಥಾನ ಪೊಲೀಸರು ಸಹಕರಿಸಲಿಲ್ಲ. ಕೊನೆಗೆ, ಹಿಂದೂ ಯುವಕರೇ ಜುನೈದ್‌ನನ್ನು ನಿಭಾಯಿಸಿದರು.’’ ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಫೋಟೊವೊಂದು ವೈರಲ್ ಆಗುತ್ತಿದ್ದು, ವ್ಯಕ್ತಿಯೊಬ್ಬನನ್ನು ಗುಂಪೊಂದು ಹೊಡೆಯುತ್ತಿರುವುದನ್ನು ಕಾಣಬಹುದು. ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಬಳಕೆದಾರರು ಈ ಘಟನೆ ರಾಜಸ್ಥಾನದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ರಾಜಸ್ಥಾನದಲ್ಲಿ, ಜುನೈದ್ ಅನ್ಸಾರಿ ಎಂಬ ವ್ಯಕ್ತಿ ಬ್ರಾಹ್ಮಣ ಹುಡುಗಿಯರನ್ನು ಬಲೆಗೆ ಬೀಳಿಸಲು ಫೇಸ್‌ಬುಕ್‌ನಲ್ಲಿ ಒಂದು ಗುಂಪನ್ನು ರಚಿಸಿದ್ದ. ನಂತರ ಆತನನ್ನು ಹಿಂದೂಗಳನ್ನು ಥಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯನ್ನು ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಳ್ಳುತ್ತಿದ್ದು, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ವೈರಲ್ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜಸ್‌ಲ್ಲಿ ಸರ್ಚ್ ಮಾಡಿದಾಗ, ಡಿಸೆಂಬರ್ 5, 2023 ರಂದು NDTV ಹಂಚಿಕೊಂಡ ವರದಿಯಲ್ಲಿ ಇದೇ ರೀತಿಯ ದೃಶ್ಯ ಕಂಡುಬಂದಿದೆ. ಡಿಸೆಂಬರ್ 3 ರಂದು ಗ್ರೇಟರ್ ನೋಯ್ಡಾದ ವಸತಿ ಸಂಕೀರ್ಣದಲ್ಲಿ ಕಾಲೇಜು ವಿದ್ಯಾರ್ಥಿಗಳ ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು ಎಂದು ವರದಿ ಹೇಳುತ್ತದೆ.

ದೆಹಲಿ NCR ನಲ್ಲಿರುವ ಖಾಸಗಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಗ್ರೇಟರ್ ನೋಯ್ಡಾದ ಸೂಪರ್‌ಟೆಕ್ ಸಾರ್ ವಸತಿ ಕಟ್ಟಡದ ಬಳಿ ಘರ್ಷಣೆ ನಡೆಸಿದರು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವಿನ ವಾಗ್ವಾದದ ಮುಂದುವರಿಕೆಯೇ ಈ ಘರ್ಷಣೆ ಎಂದು ಪೊಲೀಸರು ಹೇಳಿದ್ದರು. ಘಟನೆಯಲ್ಲಿ ಐದು ಜನರನ್ನು ಬಂಧಿಸಲಾಗಿದೆ ಎಂದು ಸುದ್ದಿಯಲ್ಲಿ ಹೇಳಲಾಗಿದೆ.
ಭಾಸ್ಕರ್.ಕಾಮ್ ಡಿಸೆಂಬರ್ 5, 2023 ರಂದು ವೈರಲ್ ಫೋಟೋದೊಂದಿಗೆ ವರದಿ ಪ್ರಕಟಿಸಿದ್ದು, ಘಟನೆಯು ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ ಎಂದು ಹೇಳಿದೆ. ಪೊಲೀಸರನ್ನು ಉಲ್ಲೇಖಿಸಿ, ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವಿನ ವಿವಾದದ ನಂತರ, ಹಲವಾರು ಜನರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಈ ಗಲಾಟೆಯಲ್ಲಿ ಜುನೈದ್ ಅನ್ಸಾರಿ ಎಂಬ ಹೆಸರಿನ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ಪರಿಶೀಲಿಸಿದಾಗ, ಡಿಸೆಂಬರ್ 6, 2023 ರಂದು ಟೈಮ್ಸ್ ಆಫ್ ಇಂಡಿಯಾ ವರದಿಯು ಬಂಧಿತರ ವಿವರಗಳನ್ನು ಒಳಗೊಂಡಿದೆ. ಬಂಧಿತ ವಿದ್ಯಾರ್ಥಿಗಳು ವೇದಾಂತ್ ದೇಡಾ, ಆರ್ಯನ್ ಅರೋರಾ, ಓಜಸ್ ಮಿಶ್ರಾ, ನಿತೀಶ್ ಭಟ್ಟಿ ಮತ್ತು ಸುಶಾಂತ್ ಭದಾನ. ಕಾಲೇಜಿನಲ್ಲಿ ಶಾಂತನು ಮತ್ತು ಶಿವಂ ನಡುವೆ ಹುಡುಗಿಯೊಬ್ಬಳ ವಿಷಯಕ್ಕೆ ನಡೆದ ವಾಗ್ವಾದದಿಂದ ಘರ್ಷಣೆ ಉಂಟಾಗಿದೆ ಎಂದು ವರದಿ ಹೇಳುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ, ಎರಡು ವರ್ಷಗಳ ಹಿಂದೆ, ಗ್ರೇಟರ್ ನೋಯ್ಡಾದಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಜಗಳ ನಡೆದ ಘಟನೆಯ ಫೋಟೋವನ್ನು ಸದ್ಯ ರಾಜಸ್ಥಾನದ ಹೆಸರಿನಲ್ಲಿ ಕೋಮು ವೈಷಮ್ಯದ ಹೇಳಿಕೆಯೊಂದಿಗೆ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನ್ಯೂಸ್ ಮೀಟರ್
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಬಾಂಗ್ಲಾ ವಲಸಿಗರಿಂದ ಅಸ್ಸಾಂ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆದಿದೆಯೇ?

