FACT CHECK : ರಸ್ತೆಯ ಡಿವೈಡರ್‌ಗೆ ಅಳವಡಿಸಿರುವ ಕಬ್ಬಿಣದ ಬೇಲಿಯ ನಟ್ ಮತ್ತು ಬೋಲ್ಟ್‌ ಅನ್ನು ಮುಸ್ಲಿಮರು ಕದಿಯುತ್ತಿದ್ದಾರೆ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೆ

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ರಸ್ತೆಯ ಕಬ್ಬಿಣದ ಬೇಲಿಯ ನಟ್ ಮತ್ತು ಬೋಲ್ಟ್‌ಗಳನ್ನು ಕೆಲವು ಮಕ್ಕಳು ಬಿಚ್ಚುತ್ತಿರುವ ದೃಶ್ಯವನ್ನಿಟ್ಟುಕೊಂಡು ದೇಶದ ಪ್ರಗತಿಗೆ ಅಡ್ಡಿಪಡಿಸುವ ‘ಜಿಹಾದಿ ಕೃತ್ಯ’ ಎಂಬ ಕೋಮು ದ್ವೇಷದ ಹಣೆಪಟ್ಟಿ ಹಚ್ಚಲಾಗುತ್ತಿದೆ. ಈ ರೀತಿ ಮಾಡುತ್ತಿರುವವರು ಮುಸ್ಲಿಮರು ಎಂದು ಹೇಳಲಾಗುತ್ತಿದೆ.

ವೈರಲ್ ಪೋಸ್ಟ್‌ನಲ್ಲಿ ?

ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟ್ಟರ್) ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಈ ವೀಡಿಯೊದಲ್ಲಿ, ಮಕ್ಕಳು ನಟ್ ಬಿಚ್ಚುತ್ತಿರುವುದನ್ನು ಕಾಣಬಹುದು. ಏಪ್ರಿಲ್ 14 ರಂದು ಪ್ರಧಾನಿ ಮೋದಿಯವರು ಉದ್ಘಾಟಿಸಿದ ‘ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ’ನಲ್ಲಿ ಉದ್ಘಾಟನೆಯಾದ ಒಂದು ವಾರದಲ್ಲೇ ಇಂತಹ ಕಳ್ಳತನ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ವೀಡಿಯೊದಲ್ಲಿರುವ ಮಕ್ಕಳನ್ನು ‘ಶಾಂತಿಪ್ರಿಯ ಕುಡಿಗಳು’ ಎಂದು ಸಂಬೋಧಿಸಿ ಕೋಮು ಬಣ್ಣ ಬಳಿಯಲಾಗಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ಫೋಟೊದ ಕೀ ಫ್ರೇಮ್‌ಗಳನ್ನು ಹಾಕಿ ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಜೂನ್ 12, 2025 ರಂದು ಬಿಹಾರದ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಎಕ್ಸ್ ಪೋಸ್ಟ್​ನಲ್ಲಿ ಇದೇ ವೈರಲ್ ವಿಡಿಯೋವನ್ನು ಹಂಚಿಕೊಂಡಿರುವುದು ಲಭ್ಯವಾಗಿದೆ.

ವಾಸ್ತವವಾಗಿ ಈ ಘಟನೆ ನಡೆದಿದ್ದು ಬಿಹಾರದ ಪಾಟ್ನಾದಲ್ಲಿ. ಜೂನ್ 11, 2025 ರಂದು ಬಿಹಾರದ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಉದ್ಘಾಟನೆಯಾಗಿತ್ತು. ಉದ್ಘಾಟನೆಯ ಮರುದಿನವೇ ಕೆಲವು ಹುಡುಗರು ಅಲ್ಲಿನ ನಟ್-ಬೋಲ್ಟ್‌ಗಳನ್ನು ಬಿಚ್ಚುತ್ತಿರುವುದು ವರದಿಯಾಗಿತ್ತು.

ಈ ವೀಡಿಯೊ ಚಿತ್ರೀಕರಿಸಿದ ಶುಭಂ ಕುಮಾರ್ ಅವರು ನ್ಯೂಸ್ 18 ಹಿಂದಿ ಜೊತೆ ಮಾತನಾಡಿ, “ಜೂನ್ 12 ರ ಬೆಳಿಗ್ಗೆ ನಾನು ಮತ್ತು ನನ್ನ ಸಹೋದರ ಹೋಗುವಾಗ ಮಕ್ಕಳು ಬೋಲ್ಟ್ ಸಡಿಲಿಸುತ್ತಿರುವುದನ್ನು ಕಂಡು ಗದರಿಸಿದೆವು, ಆಗ ಅವರು ಓಡಿಹೋದರು” ಎಂದು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯ ನಂತರ ಆಡಳಿತ ಮಂಡಳಿಯು ಎಲ್ಲಾ ನಟ್‌ಗಳನ್ನು ವೆಲ್ಡಿಂಗ್ ಮಾಡಿಸಿ ಭದ್ರಪಡಿಸಿತ್ತು.

ಇದು ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಅಲ್ಲ, ಬದಲಿಗೆ ಬಿಹಾರದ ಪಾಟ್ನಾದಲ್ಲಿರುವ ಡಬಲ್ ಡೆಕ್ಕರ್ ಫ್ಲೈಓವರ್. ಇದು ಇತ್ತೀಚಿನ ಏಪ್ರಿಲ್ 2026 ರ ವೀಡಿಯೊ ಅಲ್ಲ, ಬದಲಿಗೆ ಜೂನ್ 2025 ರಲ್ಲಿ ನಡೆದ ಹಳೆಯ ಘಟನೆ. ಮಕ್ಕಳು ನಟ್ ಬಿಚ್ಚುತ್ತಿದ್ದ ಈ ಹಳೆಯ ಘಟನೆಗೂ ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ‘ಜಿಹಾದಿ’ ಹಣೆಪಟ್ಟಿಗೂ ಸಂಬಂಧವಿಲ್ಲ. ಇದು ಸ್ಥಳೀಯ ಮಟ್ಟದ ಪುಂಡಾಟಿಕೆಯಾಗಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಬಿಹಾರದ ಪಾಟ್ನಾದಲ್ಲಿರುವ ಡಬಲ್ ಡೆಕ್ಕರ್ ಫ್ಲೈಓವರ್ ನಲ್ಲಿ ಮಕ್ಕಳು ನಟ್ ಬಿಚ್ಚುತ್ತಿದ್ದ ಈ ಹಳೆಯ ವಿಡಿಯೋವನ್ನು, ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನು ಓದಿರಿ : FACT CHECK : ಬಿಜೆಪಿ ರ್‍ಯಾಲಿಯ ಟ್ರಾಫಿಕ್ ವಿರುದ್ಧ ಕಿಡಿಕಾರಿದ ಮಹಿಳೆಯ ಮೇಲೆ FIR ದಾಖಲಾಗಿದೆಯೇ?


ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights