ಏಕಾಏಕಿ ನೀರು ನುಗ್ಗಿ ಒಡೆದ ಕಾಲುವೆ : ಕಿಡಿಗೇಡಿಗಳ ಕೃತ್ಯಕ್ಕೆ ಹಾಳಾದ ರೈತನ ಬದುಕು…!
ಆ ಜಿಲ್ಲೆಯ ರೈತರ ಹಣೆಬರಹವೇ ಸರಿಯಾಗಿಲ್ಲ. ಒಂದೆಡೆ ಅತಿವೃಷ್ಟಿ, ಪ್ರವಾಹ ಅವ್ರನ್ನು ಕಾಡಿದ್ರೆ, ಮತ್ತೊಂದೆಡೆ ಬರ ಅವ್ರನ್ನು ಆವರಿಸಿತ್ತು. ಇದನ್ನೆಲ್ಲಾ ಗೆದ್ದು ಅಷ್ಟೋ ಇಷ್ಟು ಬೆಳೆಯನ್ನು ಕಷ್ಟಪಟ್ಟು ಬೆಳೆದಿದ್ದ. ರೈತರಿಗೀಗ ಕಿಡಿಕೇಡಿಗಳ ಕಾಟ ಆರಂಭವಾಗಿದೆ. ಕೆರೆಯ ಕೋಡಿಗೆ ಇದ್ದ ಗೇಟನ್ನು ಕಿಡಿಗೇಡಿಗಳು ಹಾಳು ಮಾಡಿದ ಪರಿಣಾಮ ರೈತರ ಹೊಲದಲ್ಲಿನ ಕಾಲುವೆಗಳು ಒಡೆದು ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇದ್ರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಅಂತ ಅನ್ನದಾತ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.
ಹೌದು.. ಈ ಘಟನೆ ನಡೆದಿರೋದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಜಂತ್ಲಿ ಗ್ರಾಮದಲ್ಲಿ. ಗ್ರಾಮದಲ್ಲಿರೋ ಕೆರೆಯ ಕೋಡಿ ಹರಿಯುವ ಸ್ಥಳದಲ್ಲಿನ ಗೇಟನ್ನು ಕಿಡಿಗೇಡಿಗಳು ತಗೆದಿದ್ದಾರೆ. ಕೆರೆ ತುಂಬಿದ್ದರಿಂದ ಗೇಟ್ ತೆಗೆದ ಕೂಡಲೇ ಕೆರೆಯಲ್ಲಿನ ನೀರು ರಭಸವಾಗಿ ರೈತರ ಹೊಳಗಳ ಕಾಲುವೆಗಳಿಗೆ ನುಗ್ಗಿದೆ. ಯಾವಾಗ ಕಾಲುವೆಗಳಿಗೆ ಏಕಾಏಕಿ ನೀರು ನುಗ್ಗಿತೋ ಕೂಡಲೇ ಕಾಲುವೆ ನೀರಿನ ಒತ್ತಡ ತಾಳದೇ ಒಡೆದಿದೆ. ಇದ್ರಿಂದ ಕಾಲುವೆ ಹಾದುಹೋಗಿರೋ ರೈತರ ನೂರಾರು ಎಕರೆ ಪ್ರದೇಶಗಳ ಹೊಲಗಳಲ್ಲಿ ಬೆಳೆದಿದ್ದ ಶೇಂಗಾ, ಗೋವಿನ ಜೋಳ, ಹತ್ತಿ, ಕಡಲೇ ನೀರು ಪಾಲಾಗಿದೆ. ಇನ್ನೇನು ಕೆಲ ದಿನಗಳಲ್ಲಿ ಮಾರುಕಟ್ಟೆಗೆ ಈ ಬೆಳೆಗಳನ್ನು ತೆಗದುಕೊಂಡೋಗಿ ಮಾರಾಟ ಮಾಡಬೇಕು ಎಂದುಕೊಂಡಿದ್ದ ಅನ್ನದಾತನ ಕನಸು ನುಚ್ಚುನೂರಾಗಿದೆ. ಇನ್ನು ಇಷ್ಟೆಲ್ಲಾ ಆದ್ರೂ ಸಬ ಈ ಕೆರೆ ಮತ್ತು ಕಾಲುವೆ ನಿರ್ವಹಣೆ ಮಾಡೋ ಸಿಂಗಟಾಲೂರು ಏತ ನೀರಾವರಿ ಯೋಜನೆಯ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಇತ್ತ ಸುಳಿದಿಲ್ಲ. ಪದೇ ಪದೇ ಹೀಗಾದ್ರೆ ಏನ್ಮಾಡೋದು ಅಂತ ಅನ್ನದಾತ ಪ್ರಶ್ನೆ ಮಾಡ್ತಿದ್ದಾನೆ.
ಒಂದೆಡೆ ಬರ ನೆರೆ ಅರಿವೃಷ್ಟಿ ಮಳೆಯಿಂದ ಅದೇಗೋ ಪಾರಾಗಿ, ಅಷ್ಟೋ ಇಷ್ಟೋ ಬೆಳೆಗಳನ್ನು ಅನ್ನದಾತ ಬೆಳೆದಿದ್ದ. ಈ ಬಾರಿ ಬೆಳೆಗಳಿಗೂ ಒಳ್ಳೆ ಬೆಲೆ ಬಂದಿದೆ. ಇಷ್ಟು ವರ್ಷದ ನಷ್ಟವನ್ನು ಈ ಬಾರಿಯಾದ್ರೂ ಪಡೆಯೋಣ ಅಂತ ತಿಳಿದುಕೊಂಡಿದ್ದ ರೈತನ ಕನಸೀಗ ನುಚ್ಚು ನೂರಾಗಿದೆ. ಕಿಡಿಗೇಡಿಗಳ ಕೃತ್ಯಕ್ಕೆ ನೀರು ನುಗ್ಗಿದ ತಮ್ಮ ಜಮೀನುಗಳನ್ನು ನೋಡ್ತಾ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ ಅಂತ ಯೋಚಿಸ್ತಿದ್ದಾನೆ ಅನ್ನದಾತ. ಈ ಕೃತ್ಯವೆಸಗಿರೋರು ಗ್ರಾಮಸ್ಥರೇ ಆಗಿದ್ದು, ಈ ಹಿಂದೆಯೂ ಬೇರೆ ಬೇರೆ ರೀತಿಯಾಗಿ ಒಬ್ಬಲ್ಲ ಒಬ್ಬ ರೈತನಿಗೆ ಅವರು ತೊಂದರೆ ಕೊಡ್ತಾ ಬಂದಿದ್ದಾರೆ. ಈಗಲೂ ಸಹ ಅವರೇ ಈ ಕಿಡಿಗೇಡಿ ಕೃತ್ಯವೆಸಗಿದ್ದಾರೆ. ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎನ್ನೋದು ರೈತರ ಆಗ್ರಹವಾಗಿದೆ.
ಏನೇ ಆಗ್ಲಿ ಜಗತ್ತಿಗೆ ಅನ್ನಕೊಡೋ ಅನ್ನದಾತನ ಸ್ಥಿತಿಯಿಂದು ಒಂದಲ್ಲಾ ಒಂದು ಬಗೆಯಲ್ಲಿ ತೊಂದರೆಗೊಳಗಾಗ್ತಿದೆ. ಒಂದೆಡೆ ಸಾಲಬಾಧೆಯಾದ್ರೆ ಮತ್ತೊಂದು ಪ್ರಾಕೃತಿಕ ವಿಕೋಪಗಳು ಆತನನ್ನು ಕಿತ್ತು ತಿನ್ನುತ್ತಿವೆ. ಈಗ ಆಗಿರೋ ಕಿಡಿಗೇಡಿಗಳ ಕೃತ್ಯಕ್ಕೆ ಕಾರಣರು ಯಾರೆಂದು ಕಂಡುಹಿಡಿದು ಶಿಕ್ಷೆ ಕೊಡಿಸೋ ಮೂಲಕವಾದ್ರೂ ಗದಗ ಜಿಲ್ಲಾಡಳಿತ ರೈತರ ಪರವಾಗಿ ನಿಲ್ಲಬೇಕಾಗಿದೆ..

