ಬೈಲಾ ಉಲ್ಲಂಘನೆ: 40 ಅಂತಸ್ತುಗಳ ಅವಳಿ ಕಟ್ಟಡ ನೆಲಸಮಗೊಳಿಸಲು ಸುಪ್ರೀಂ ಆದೇಶ!

ಕಟ್ಟಡಗಳಿಗೆ ಸಂಬಂಧಿಸಿದ ಬೈಲಾಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಸೂಪರ್‌ಟೆಕ್‌ ಲಿಮಿಟೆಡ್‌ ನಿರ್ಮಿಸಿರುವ 40 ಅಂತಸ್ತುಗಳ ಅವಳಿ ಅಪಾರ್ಟ್‌ಮೆಂಟ್‌ಗಳನ್ನು ನೆಲಸಮಗೊಳಿಸಲು ಸುಪ್ರೀಂಕೋರ್ಟ್‌ ಆದೇಶಿಸಿದೆ.

ಈ ಅಪಾರ್ಟ್‌ಮೆಂಟ್‌ಗಳಲ್ಲಿ ಮನೆಗಳನ್ನು ಖರೀದಿಸಿರುವವರಿಗೆ, ಮನೆ ಬುಕಿಂಗ್‌ ವೇಳೆ ಅವರು ಪಾವತಿಸಿದ್ದ ಮೊತ್ತವನ್ನು ವಾರ್ಷಿಕ ಶೇ.12 ರಷ್ಟು ಬಡ್ಡಿಯೊಂದಿಗೆ ಮರುಪಾವತಿಸಬೇಕು. ಈ ಕಟ್ಟಡಗಳ ನಿರ್ಮಾಣದಿಂದ ಕಿರುಕುಳ ಅನುಭವಿಸಿರುವ ರೆಸಿಡೆಂಟ್ಸ್ ವೆಲ್‌ಫೇರ್‌ ಅಸೋಸಿಯೇಶನ್‌ಗೆ ₹ 2 ಕೋಟಿ ಪಾವತಿಸಬೇಕು. ಮೂರು ತಿಂಗಳ ಒಳಗಾಗಿ ಕಟ್ಟಡಗಳನ್ನು ನೆಲಸಮಗೊಳಿಸಬೇಕು ಎಂದು ಸುಪ್ರೀಂ ಹೇಳಿದೆ.

ಈ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ಅಲಹಾಬಾದ್ ಹೈಕೋರ್ಟ್‌ 2014ರ ಏಪ್ರಿಲ್‌ 11ರಂದು ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಎಂ.ಆರ್‌.ಶಾ ಅವರಿರುವ ನ್ಯಾಯಪೀಠ, ಅಲಹಾಬಾದ್‌ ಹೈಕೋರ್ಟ್‌ನ ತೀರ್ಪನ್ನು ಎತ್ತಿಹಿಡಿದಿದೆ. ಅಲ್ಲದೆ, ಈ ತೀರ್ಪಿನಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಸೂಕ್ತ ಏಜೆನ್ಸಿ ಹಾಗೂ ನೋಯ್ಡಾ ಪ್ರಾಧಿಕಾರದ ಮೇಲ್ವಿಚಾರಣೆಯಲ್ಲಿ ಕಟ್ಟಡಗಳ ನೆಲಸಮ ಕಾರ್ಯ ನಡೆಯಬೇಕು. ಈ ಕಾರ್ಯಕ್ಕೆ ತಗುಲುವ ಎಲ್ಲ ವೆಚ್ಚವನ್ನು ಸೂಪರ್‌ಟೆಕ್‌ ಕಂಪನಿಯೇ ಭರಿಸಬೇಕು ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.

ದೇಶದ ಮಹಾನಗರಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇಂಥ ನಿರ್ಮಾಣಗಳಲ್ಲಿ ಸಂಬಂಧಿಸಿದ ಪ್ರಾಧಿಕಾರಗಳು ಸಹ ಶಾಮೀಲಾಗಿರುವುದು ಕಂಡುಬಂದಿದೆ. ಇಂಥ ವಿಷಯಗಳಲ್ಲಿ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದೂ ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: ಜೆಡಿಎಸ್‌ ಮುಳುಗುತ್ತಿರುವ ಪಕ್ಷ; ಅವರೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ: ಅರುಣ್‌ ಸಿಂಗ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights