ರೈತರ ಸುಸ್ತಿ ಸಾಲ ವಸೂಲಿಗೆ ಸರ್ಕಾರ ಆದೇಶ – ರೈತರನ್ನು ಮುಗಿಸಲು ಹೊರಟಿದೆ ಎಂದು ಖರ್ಗೆ ಕಿಡಿ

ರೈತರ ಸುಸ್ತಿ ಸಾಲ ವಸೂಲಿಗೆ ರಾಜ್ಯ ಸರ್ಕಾರ ಖಡಕ್ ಆದೇಶ ನೀಡಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ, ರೈತ ಮುಖಂಡ ಮಾರುತಿ ಮಾನ್ಪಡೆ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆರೆ-ಬರದಿಂದ ರೈತರು ಸಂಕಷ್ಟಕ್ಕೆ ಗುರಿಯಾದ ವೇಳೆ ಸಾಲ ವಸೂಲಿ ಆದೇಶ ಮಾಡಿ ಗಾಯದ ಮೇಲೆ ಬರೆ ಎಳೀತಿದೆ. ಇದೊಂದು ಅಮಾನವೀಯ ಸರ್ಕಾರ ಎಂದು ಮುಖಂಡರು ಕಿಡಿಕಾರಿದ್ದಾರೆ.

ರೈತರ ಸುಸ್ತಿ ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರ ನೀಡಿರೋ ಆದೇಶದ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಖರ್ಗೆ, ರಾಜ್ಯ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ. ಬೊಕ್ಕಸದಲ್ಲಿ ದುಡ್ಡಿಲ್ಲವೆಂದು ಸಾಲ ವಸೂಲಾತಿಗೆ ಆದೇಶ ನೀಡಿದೆ. ಚುನಾವಣೆ ಮತ್ತು ಉಪ ಚುನಾವಣೆ ಬಂದಾಗ ಮಾತ್ರ ಬಿಜೆಪಿಗೆ ರೈತರ ನೆನಪಾಗುತ್ತೆ. ಚುನಾವಣೆ ಮುಗೀತಿದ್ದಂತೆ ರೈತರ ನೆನಪೇ ಹೋಗುತ್ತೆ. ನೆರೆ, ಬರದಿಂದ ತತ್ತರಿಸಿರುವಾಗ ಗಾಯದ ಮೇಲೆ ಬರೆ ಎಳೆಯೋ ಕೆಲಸ ಮಾಡಿದೆ. ಬಿಜೆಪಿ ಸರ್ಕಾರ ಎಲ್ಲವನ್ನೂ ಮುಗಿಸಲು ಹೊರಟಿದೆ. ಸಾರ್ವಜನಿಕ ವಲಯ ಸೇರಿದಂತೆ ಎಲ್ಲದರ ಮೇಲೂ ನಂಬಿಕೆಯಿಲ್ಲ. ರೈತ ವಿರೋಧಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡೋದನ್ನು ನಿಲ್ಲಿಸಬೇಕೆಂದು ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

ಅಪರೇಷನ್ ಕಮಲಕ್ಕೆ ಬಿಜೆಪಿ ಹತ್ರ ದುಡ್ಡಿರುತ್ತೆ – ಪ್ರಿಯಾಂಕ್ ಕಿಡಿ
ಬಿಜೆಪಿ ಅಪರೇಷನ್ ಕಮಲಕ್ಕೆ ಧಾರಾಳವಾಗಿ ಹಣ ಖರ್ಚು ಮಾಡುತ್ತೆ. ಆದರೆ ರೈತರಿಂದ ಸುಸ್ತಿ ಸಾಲ ವಸೂಲಿಗೆ ಮುಂದಾಗುತ್ತೆ ಎಂದು ಮಾಜಿ ಸಚಿವ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಸರ್ಕಾರದ ಆದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರ ಎಷ್ಟರಮಟ್ಟಿಗೆ ರೈತ ವಿರೋಧಿ ಅನ್ನೋದು ಇದರಿಂದ ಗೊತ್ತಾಗುತ್ತೆ. ಯಡಿಯೂರಪ್ಪ ಹೆಗಲ ಮೇಲೆ ಹಸಿರು ಶಾಲು ಹಾಕ್ತಾರೆ. ಆದ್ರೆ ರೈತ ವಿರೋಧಿಯಾಗಿಯೇ ವರ್ತಿಸ್ತಾರೆ ಎಂದು ಆರೋಪಿಸಿದರು.
ಒಂದು ಕಡೆ ಬರ, ಮತ್ತೊಂದು ಕಡೆ ನೆರೆಯಿಂದ ರೈತ ಸಂಕಷ್ಟಕ್ಕೆ ಗುರಿಯಾಗಿದ್ದಾನೆ. ಗಾಯದ ಮೇಲೆ ಬರೆ ಎಳೆಯೋ ರೀತಿಯಲ್ಲಿ ಸಾಲ ವಸೂಲಿಗೆ ಆದೇಶ ನೀಡಲಾಗಿದೆ. ಅಪರೇಶನ್ ಕಮಲ ಮಾಡಿ ಶಾಸಕರ ಖರೀದಿಗೆ ಇವರ ಬಳಿ ಹಣವಿರುತ್ತೆ. ಆದರೆ ರೈತರಿಗೆ ನೆರವಾಗಲು ಹಣವಿಲ್ಲ. ತೀವ್ರ ತೊಂದರೆಗೆ ಸಿಲುಕಿರೋ ರೈತನೆ ನೆರವಿಗೋ ಬರೋದು ಬಿಟ್ಟು, ಸಾಲ ವಸೂಲಾತಿಗೆ ಇಳಿದಿದೆ. ಇದೊಂದು ಮಾನವೀಯತೆಯೇ ಇಲ್ಲದ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರದ ಜಪ್ತಿಗೆ ಮರು ಜಪ್ತಿಯಿಂದ ಉತ್ತರ ಕೊಡ್ತೇವೆ – ಮಾನ್ಪಡೆ ಎಚ್ಚರಿಕೆ
ರೈತರ ಸುಸ್ತಿ ಸಾಲ ವಸೂಲಿಗೆ ರಾಜ್ಯ ಸರ್ಕಾರ ಆದೇಶಿಸಿರುವುದಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಕಿಡಿಕಾರಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಮಾನ್ಪಡೆ, ಬಿಜೆಪಿಯಿಂದ ರೈತ ದ್ರೋಹಿ ಕೆಲಸ ನಡೆದಿದೆ ಎಂದು ಕಿಡಿ ಕಾರಿದರು. ಚುನಾವಣೆ ಪೂರ್ವದಲ್ಲಿ 1 ಲಕ್ಷ ರೂಪಾಯಿವರೆಗೆ ಸಾಲ ಮನ್ನಾ ಮಾಡೋದಾಗಿ ಹೇಳಿತ್ತು. ಸಾಲ ಮನ್ನಾ ಅಂತೂ ಮಾಡಿಲ್ಲ. ಈಗ ರೈತರಿಂದ ಒತ್ತಾಯಪೂರ್ವಕವಾಗಿ ಸಾಲ ವಸೂಲಿ ಮಾಡಲು ಹೊರಟಿದೆ. ಶ್ರೀಮಂತರು ಸಾಲ ತೆಗೆದುಕೊಂಡು ವಾಪಸ್ ಕಟ್ಟದೇ ಇದ್ದರೂ ಸುಮ್ಮನಿದೆ. ಆದರೆ ಅನ್ನದಾತನ ಮನೆ ಒಡೆಯಲು ಬಿಜೆಪಿ ಮುಂದಾಗಿದೆ.

ಈ ವರ್ಷ ನೆರೆ ಮತ್ತು ಬರದಿಂದ ರೈತರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಗಾಯದ ಮೇಲೆ ಬರೆ ಎಳೆದಂತೆ ಸಾಲ ವಸೂಲಿಗೆ ಸರ್ಕಾರ ಆದೇಶಿಸಿದೆ. ಕೂಡಲೇ ಆದೇಶವನ್ನು ಹಿಂಪಡೆಯಬೇಕು. ಟ್ರ್ಯಾಕ್ಟರ್ ಮತ್ತಿತರ ಆಸ್ತಿ ಜಪ್ತಿಗೆ ನಾವು ಬಿಡೋದಿಲ್ಲ. ಹಾಗೊಂದು ವೇಳೆ ಮಾಡಿದರೆ ಮರು ಜಪ್ತಿಗೆ ನಾವು ಬ್ಯಾಂಕ್ ಗಳಿಗೆ ನುಗ್ಗುತ್ತೇವೆ. ಎಲ್ಲ ರೈತ ಸಂಘಟನೆಗಳು ಒಕ್ಕೂಡಿ ರಾಜ್ಯಾದ್ಯಂತ ಹೋರಾಟ ಆರಂಭಿಸ್ತೇವೆ ಎಂದು ಮಾನ್ಪಡೆ ಎಚ್ಚರಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights