ಉಪ್ಪು ಸತ್ಯಾಗ್ರಹಕ್ಕೆ 90: ದಂಡಿ ಸತ್ಯಾಗ್ರಹದಲ್ಲಿ ಮುಂಚೂಣಿಯಲ್ಲಿದ್ದ ಒಬ್ಬನೇ ಕನ್ನಡಿಗ ಯಾರು ಗೊತ್ತೇ?

ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಂಡಿ ಉಪ್ಪು ಸತ್ಯಾಗ್ರಹ ಮಹತ್ವದ ಘಟ್ಟ. ಭಾರತ ಸ್ವಾತಂತ್ರ್ಯ ಚಳವಳಿಯ ತಾತ್ವಿಕ ತಳಹದಿಗಳು ಅಹಿಂಸೆ ಮತ್ತು ಭ್ರಷ್ಟ ಪ್ರಭುತ್ವದ ವಿರುದ್ಧ ಅಸಹಕಾರ ಎಂಬ ಅಸ್ತ್ರಗಳು ಮುಂಚೂಣಿಗೆ ಬಂದದ್ದು ಉಪ್ಪು ಸತ್ಯಾಗ್ರಹದ ಸಮಯದಲ್ಲಿಯೇ! ಅಂದಿನ ಬ್ರಿಟಿಶ್ ಸರ್ಕಾರ ಉಪ್ಪಿಗೆ ಹಾಕುತ್ತಿದ್ದ ತೆರಿಗೆಯನ್ನು ವಿರೋಧಿಸಿ ನಡೆದ ಸತ್ಯಾಗ್ರಹಕ್ಕೆ ಮಹಾತ್ಮ ಗಾಂಧಿ ಅವರ ನೇತೃತ್ವದ ಈ ಚಳವಳಿಗೆ ದೇಶದ ವಿವಿಧೆಡೆಗಳಿಂದ ಆಯ್ದ 79 ಜನ, ಸಾಬರಮತಿ ಆಶ್ರಮದಿಂದ, ಗುಜರಾತಿನ ಸಮುದ್ರ ತೀರದ ಗ್ರಾಮ ದಂಡಿಗೆ ಪಾದಯಾತ್ರೆ ಮಾಡುತ್ತಾರೆ. ಮಾರ್ಚ್ 12, 1930 ರಂದು ಪ್ರಾರಂಭವಾಗುವ ಈ ಯಾತ್ರೆ 24 ದಿನಗಳ ಕಾಲ 240 ಮೈಲಿ ಕ್ರಮಿಸಿ, ಏಪ್ರಿಲ್ ಆರು 1930 ರಂದು ಬ್ರಿಟಿಶರ ಕರ ನಿಯಮ ಮುರಿದು, ಉಪ್ಪು ತಯಾರಿಸುವ ಮೂಲಕ ರಾಷ್ಟ್ರಾದ್ಯಂತ ಭ್ರಷ್ಟ ಸರ್ಕಾರದ ವಿರುದ್ಧ ಕಾನೂನುಗಳನ್ನು ಉಲ್ಲಂಘಿಸುವ ಅಸಹಕಾರ ಚಳವಳಿಗೆ ಸಂಕೇತವಾಗುತ್ತದೆ.

“ಅಮರನಾಥ ಅಥವಾ ಬದ್ರಿ-ಕೇದಾರಗಳಿಗೆ ಹೋಗುವ ಯಾವುದೇ ಪವಿತ್ರ ಯಾತ್ರೆಗೂ ಇದು ಕಮ್ಮಿಯಲ್ಲ” ಎಂದು ಗಾಂಧಿಯವರೇ ಬಣ್ಣಿಸಿಕೊಳ್ಳುವ ಚಳವಳಿ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಬಹಳವಾಗಿ ವರದಿಯಾಗುತ್ತದೆ. ಈ ಯಾತ್ರೆ ನಡೆಯುವ ದಾರಿಯಲ್ಲಿ ಸಾವಿರಾರು ಜನ ಚಳವಳಿಗೆ ಜತೆಗೂಡುತ್ತಾರೆ. ಚಳವಳಿ ಪ್ರಾರಂಭವಾಗುವ ಮುಂಚಿನ ದಿನ ಗಾಂಧಿ ಅವರು ನೀಡುವ ಭಾಷಣಕ್ಕೆ 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರಂತೆ. ಸತ್ಯ ಅಹಿಂಸೆಗಳು ನಮ್ಮ ದಾರಿಯಾಗಬೇಕು ಎಂದು ಕರೆ ಕೊಡುವ ಗಾಂಧಿ, ಈ ಚಳವಳಿಯ ನಡುವೆ ತಮ್ಮನ್ನು ಬಂಧಿಸಿದರೆ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತವಾಗಿ ಮಾತನಾಡುತ್ತಾರೆ. ಸರ್ಕಾರಿ ಕೆಲಸಗಳಿಗೆ ರಾಜೀನಾಮೆ ನೀಡಲು ಕರೆ ಕೊಡುವುದರಿಂದ ಹಿಡಿದು, ಕರ ನಿರಾಕರಣೆ, ವಿದೇಶಿ ವಸ್ತುಗಳ ಬಳಕೆಯನ್ನು ತಿರಸ್ಕರಿಸುವಂತೆ ಗಾಂಧಿ ಹೇಳುತ್ತಾರೆ. “ಭಾರತ ಸರ್ಕಾರದ ಅತಿ ದೊಡ್ಡ ಕೆಡುಕಿನ ವ್ಯವಸ್ಥೆ ಬಗ್ಗೆ ತಿಳಿದವರು ಆ ವ್ಯವಸ್ಥೆ ಬಗ್ಗೆ ನಿಷ್ಠೆಯನ್ನು ಬಿಡುವುದು ಮತ್ತು ಆ ನಿಷ್ಠೆಯನ್ನು ಬಿಡುವಂತೆ ಮುಕ್ತವಾಗಿ ಮತ್ತು ಕ್ರಿಯಾಶೀಲಾವಾಗಿ ಬೋಧನೆ ಮಾಡುವುದು ಕರ್ತವ್ಯ. ಭ್ರಷ್ಟ ಪ್ರಭುತ್ವಕ್ಕೆ ನಿಷ್ಠೆ ತೋರುವುದು ಪಾಪ ಮತ್ತು ನಿಷ್ಠೆ ತೊರೆಯುವುದು ಉದಾತ್ತ ಗುಣ” ಎಂದು ಭಾಷಣ ಮಾಡುತ್ತಾರೆ.

ನಂತರ ಮೇ ನಡುವಿನಲ್ಲಿ ಗಾಂಧಿಯವರನ್ನು ಬಂಧಿಸಲಾಗುತ್ತದೆ. ದೇಶದಾದ್ಯಂತ ಈ ಅಸಹಕಾರ ಚಳವಳಿ ಚುರುಕು ಪಡೆದುಕೊಂಡು ಅರವತ್ತು ಸಾವಿರಕ್ಕೂ ಹೆಚ್ಚು ಜನ ಜೈಲು ಸೇರುತ್ತಾರೆ. ನಂತರ ಗಾಂಧಿಯವರನ್ನು ಬಿಡುಗಡೆ ಮಾಡಿ ಎರಡನೇ ದುಂಡು ಮೇಜಿನ ಸಭೆಗೆ ಸಂಧಾನಕ್ಕೆ ಕರೆಯಲಾಗುತ್ತದೆ. ಇಷ್ಟೆಲ್ಲಾ ಪ್ರಮುಖ ಬೆಳೆವಣಿಗೆಗಳಿಗೆ ಕಾರಣವಾಗುವ ದಂಡಿ ಸತ್ಯಾಗ್ರಹವನ್ನು ಮುನ್ನಡೆಸಲು ಗಾಂಧಿಯವರ ಜೊತೆಗೆ ದೇಶದ ಹಲವೆಡೆಯಿಂದ 79 ಜನರನ್ನು ಗಾಂಧಿಯವರೇ ಆಯ್ಕೆ ಮಾಡಿರುತ್ತಾರೆ. ಈ ಚಲವಳಿಯ ಭಾಗವಾಗಲು ಕೋರಿ ಬಂದ ಸಾವಿರಾರು ಅರ್ಜಿಗಳಲ್ಲಿ, ಈ ಸತ್ಯಾಗ್ರಹ ಪ್ರಾರಂಭಿಸಲು ಆಯ್ಕೆಯಾದ 79 ಚಳವಳಿಕಾರರಲ್ಲಿ ಕರ್ನಾಟಕದ ಮೈಲಾರ ಮಹದೇವ ಒಬ್ಬರು.

ಧಾರವಾಡ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ  1911 ಜೂನ್ ಎಂಟರಂದು ಜನಿಸಿದ ಮಹದೇವ ಕಿರು ವಯಸ್ಸಿನಲ್ಲೇ ಗಾಂಧಿ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮಿಕಿದವರು. ತಂದೆ ಮೈಲಾರ ಮಾರ್ತಾಂಡಪ್ಪ ಮತ್ತು ತಾಯಿ ಬಸಮ್ಮ.

ಗಾಂಧಿ ಅವರ ದಂಡಿ ಸತ್ಯಾಗ್ರಹದ ಪ್ರಾರಂಭದ 79 ಜನ ಸಹ ಚಳವಳಿಕಾರರಲ್ಲಿ ಒಬ್ಬರಾಗಿ ಆಯ್ಕೆಗೊಂಡಾಗ ಮಹದೇವ ಅವರಿಗೆ ಕೇವಲ 18 ವರ್ಷ. ಅಲ್ಲಿನಿಂದ ಗಾಂಧಿ ಅವರ ಸತ್ಯ ಮತ್ತು ಅಸಹಕಾರ ಚಳವಳಿಯ ಮಾರ್ಗವನ್ನು ಮೈಗೂಡಿಸಿಕೊಂಡ ಮಹದೇವ ಅವರು ದಂಡಿ ಸತ್ಯಾಗ್ರಹದಿಂದ ಹಿಂದಿರುಗಿ ಹೊಸರಿತ್ತಿ ಗ್ರಾಮವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿಸಿಕೊಂಡರು.

ಹೊಸರಿತ್ತಿ ಗ್ರಾಮದಲ್ಲಿ ಸ್ಥಾಪನೆಗೊಂಡಿದ್ದ ಗಾಂಧಿ ಆಶ್ರಮ ಖಾದಿ ಉತ್ಪಾದನೆಯ ಪ್ರಮುಖ ಕೇಂದ್ರವಾಗಿತ್ತು. ಮಹದೇವ ಅವರ ಪತ್ನಿ ಸಿದ್ಧಮ್ಮ ಮತ್ತು ಅವರ ಕಿರಿಯ ಸಹೋದರ ಲಿಂಗಣ್ಣ ಕೂಡ ಗಾಂಧಿ ಆಶ್ರಮವಾಸಿಗಳಾಗಿ ಅಲ್ಲಿ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು.

ಮುಂದೆ ಗಾಂಧಿಯವರು ಕರೆಕೊಟ್ಟ ಎಲ್ಲ ಚಳವಳಿಗಳಲ್ಲಿಯೂ ಮೈಲಾರ ಮಹದೇವ ಭಾಗವಹಿಸುತ್ತಿದ್ದರಲ್ಲದೆ ಗ್ರಾಮಸ್ಥರನ್ನು ಚಳವಳಿಗೆ ಕರೆತರಲು ಸ್ಪೂರ್ಥಿಯಾಗಿದ್ದರು. 1937ರಲ್ಲಿ ಹೊಸರತ್ತಿ ನೆರೆಯ ಕೊರಡೂರು ಗ್ರಾಮದಲ್ಲಿ ಗ್ರಾಮ ಸೇವಾಶ್ರಮವನ್ನು ಸ್ಥಾಪಿಸಿ ಖಾದಿ ಉತ್ಪಾದನೆಯಲ್ಲಿ ತೊಡಗಿಸಿಕೊಂಡರು. ಗ್ರಾಮಸ್ಥರು ಸ್ವಾವಲಂಬಿಗಳಾಗುವುದರ ಬಗ್ಗೆ ಮಾರ್ಗದರ್ಶನದಲ್ಲಿ ನಿರತರಾದರು.

ಆಗಸ್ಟ್ 8 1942 ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ದಿನ. ಭಾರತ ಬಿಟ್ಟು ತೊಲಗಿ ಚಳವಳಿಗೆ ಕರೆ ಕೊಡುವ ಗಾಂಧೀಜಿ ತಮ್ಮ ಪ್ರಮುಖ ಭಾಷಣದಲ್ಲಿ “ಮಾಡು ಇಲ್ಲವೆ ಮಡಿ” ಎಂಬ ಕರೆ ಕೊಟ್ಟರು. ಈ ಸಮಯದಲ್ಲಿ ಗಾಂಧಿ, ನೆಹರೂ ಸೇರಿದಂತೆ ಸ್ವಾತಂತ್ರ್ಯ ಚಳುವಳಿಯ ಮುಂಚೂಣಿ ನಾಯಕರನ್ನೆಲ್ಲ ಬ್ರಿಟಿಶರು ಬಂಧಿಸಿದರು.

ಅಂದಿನಿಂದ ಮಹದೇವ ಅವರು ಭೂಗತವಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಪಡೆಯನ್ನು ಕಟ್ಟಲು ಮುಂದಾದರು. 50 ಜನಗಳನ್ನು ಒಳಗೊಂಡಿದ್ದ ಪಡೆಗೆ “ಕಬೀರ್” ಎಂಬ ಹೆಸರನ್ನು ಇಟ್ಟಿದ್ದರಂತೆ. ಬ್ರಿಟಿಶರ ವಿರುದ್ಧ ಕುಪಿತಗೊಂಡ ಈ ಯುವಕರ ಪಡೆ ಹಾವೇರಿ, ಸವಣೂರು, ಬ್ಯಾಡಗಿ, ಹಿರೇಕೆರೂರು, ಹರಪನಹಳ್ಳಿ ಮುಂತಾದ ಕಡೆಗಳಲ್ಲಿ ಬಂಡೆದ್ದರು. ಬ್ರಿಟಿಶ್ ಸರ್ಕಾರಕ್ಕೆ ಸೇರಿದ ರೈಲ್ವೇ ಸ್ಟೇಶನ್ನುಗಳ ಮೇಲೆ ದಾಳಿ ಮಾಡಲಾಯಿತು. ಮೈಲಾರ ಮಹದೇವರ ಕರೆಗೆ ಓಗೊಟ್ಟು ಕೋಗನೂರು, ಹಾಲಗಿ, ಹೊಸರತ್ತಿ, ನೆಗಳೂರು, ಕಲ್ಲದೇವರು ಮೊದಲಾದ ಗ್ರಾಮಗಳಲ್ಲಿ ಎಲ್ಲ ವರ್ಗದ ತರುಣ ತರುಣಿಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಮಾರುವೇಷದಲ್ಲಿದ್ದ ಮಹದೇವಪ್ಪ ಬ್ರಿಟಿಷರಿಗೆ ತಲೆನೋವಾಗಿ ಪರಿಣಮಿಸಿದ್ದರು. ಮಹದೇವಪ್ಪನವರನ್ನು ಹಿಡುಕೊಟ್ಟವರಿಗೆ ಬ್ರಿಟಿಶ್ ಸರ್ಕಾರ ದೊಡ್ಡ ನಗದು ಬಹುಮಾನವನ್ನು ಘೋಷಿಸಿತು.

ಬ್ರಿಟಿಶರು ಅಕ್ರಮವಾಗಿ ಲೂಟಿ ಮಾಡುತ್ತಿದ್ದ ಕಂದಾಯ ಹಣವನ್ನು, ಹೊಸರಟ್ಟಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಕಸಿಯಲು ಮಹದೇವಪ್ಪ ತಮ್ಮ ಪಡೆಯೊಂದಿಗೆ ಏಪ್ರಿಲ್ 1, 1943ರ ನಸುಕಿನಲ್ಲಿ ಕಾರ್ಯಪ್ರವೃತ್ತಿಯಾದಾಗ ಬ್ರಿಟಿಶರ ಗುಂಡೇಟಿಗೆ ಬಲಿಯಾದರು. ಹಿಂಸೆಯ ಪ್ರತಿರೋಧ ತೋರಲು ಅವಕಾಶ ಇದ್ದರೂ, ಗಾಂಧಿವಾದಿಯಾಗಿದ್ದ ಅವರು ಅದಕ್ಕೆ ಅವಕಾಶ ನೀಡದೆ ಅಸುನೀಗಿದರು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.  ಅವರ ಜತೆಗಿದ್ದ ವೀರಯ್ಯ ಹಿರೇಮಠ ಮತ್ತು ತಿರಕಪ್ಪ ಮಡಿವಾಳರ ಕೂಡ ಗುಂಡೇಟಿಗೆ ಬಲಿಯಾದರು. ಮರಣ ಹೊಂದಿದಾಗ ಮದೇವಪ್ಪನವರಿಗೆ 32 ವರ್ಷ.

ಮೈಲಾರ ಮಹದೇವ ಅವರ ಸ್ಮರಣಾರ್ಥ 2018ರಲ್ಲಿ ಕೇಂದ್ರ ಸರ್ಕಾರ ಅಂಚೆ ಚೀಟಿ ಬಿಡುಗಡೆ ಮಾಡಿ ಗೌರವಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights