ಕೊರೊನಾ ಸೋಂಕಿತರಿರುವ ರಾಜ್ಯಗಳಿಂದ ಬರುವ ಪ್ರಯಾಣಿಕರ ಬಗ್ಗೆ ಇರಲಿ ಎಚ್ಚರ…!

ಕೊರೊನಾ ಸೋಂಕಿನಿಂದ ಜನ ವಿಶ್ವಾದ್ಯಂತ ಭಯಭೀತರಾಗಿದ್ದಾರೆ. ಜನ ಈ ಮಟ್ಟಿಗೆ ಹೆದರಲು ಕಾರಣ ವೈರಸ್ ತಮ್ಮನ್ನ ಆವರಿಸಿದರೆ ಇದಕ್ಕೆ ಚಿಕಿತ್ಸೆ ಇಲ್ಲ ಎನ್ನುವುದಕ್ಕೆ. ಇದರ ಜೊತೆಗೆ ಮತ್ತೊಂದು ಮುಖ್ಯವಾದ ಕಾರಣವೂ ಇದೆ. ವಿಜ್ಞಾನಿಗಳ ಪ್ರಕಾರ ಸೋಂಕು ಅತೀ ಹೆಚ್ಚಾಗಿ ಹರಡಿ ಪರಿಣಾಮವನ್ನುಂಟು ಮಾಡುವುದು ರೋಗನಿರೋಧಕ ಶಕ್ತಿ ಇಲ್ಲದವರಿಗೆ. ಹೀಗಾಗಿ ಎಗ್ಗಿಲ್ಲದೇ ಹರಡಿಕೊಳ್ಳುವ ಈ ಸೋಂಕಿನಿಂದ ತಪ್ಪಿಸಿಕೊಳ್ಳುವುದಿರಲಿ ಒಂದು ವೇಳೆ ಹೆಚ್ಚು ಜನರಿಗೆ ಸೋಂಕು ತಗುಲಿದರೆ ನಮ್ಮ ರಾಜ್ಯ ಸರ್ಕಾರ ಅದೆಷ್ಟು ಜನರಿಗೆ ಆಸ್ಪತ್ರೆಗೆ ಸೇರಿಸಿಕೊಂಡು ಪ್ರಾಣ ಉಳಿಸಿಕೊಳ್ಳುವ ಮಟ್ಟಿಗೆ ಚಿಕಿತ್ಸೆ ನೀಡಬಲ್ಲದು? ಎನ್ನುವುದೇ ಮತ್ತೊಂದು ಆತಂಕವಾಗಿದೆ. ಚಿಕಿತ್ಸೆ ಕೊಡುವುದಿರಲಿ ಸೋಂಕು ಹರಡದಂತೆ ಸರ್ಕಾರ ಏನೆಲ್ಲಾ ಕ್ರಮಗಳನ್ನ ಕೈಗೊಂಡಿದೆ..? ಅನ್ನೋದನ್ನ ನೋಡುತ್ತಾ ಹೋದರೆ ಜನ ಮತ್ತಷ್ಟು ಭಯಭೀತರಾಗುವುದು ಖಚಿತ.

ರಾಜ್ಯ ಸರ್ಕಾರ ಮೊನ್ನೆಯಷ್ಟೇ ಒಂದುವಾರದವರೆಗೂ ಸಭೆ, ಸಮಾರಂಭಗಳು, ಕಾರ್ಯಕ್ರಮಗಳು, ಜಾತ್ರೆ, ಮೊಹೋತ್ಸವ, ಮದುವೆ, ಸಿನಿಮಾ, ಮಾಲ್ ಇಂತೆಲ್ಲಾ ಜನ ಸೇರುವ ಪ್ರದೇಶಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ. ಆದರೆ ಒಂದು ವಾರದಲ್ಲಿ ಕೊರೊನಾ ಹೊಡೆದೋಡಿಸಲು ಸಾಧ್ಯನಾ..? ಒಂದು ವಾರದ ಬಳಿಕ ಜನ ಧೈರ್ಯವಾಗಿ ಓಡಾಡಬಹುದಾ…? ಇದ್ಯಾವುದಕ್ಕೂ ನಮ್ಮ ಬಳಿ ಉತ್ತರವೇ ಇಲ್ಲ. ಯಾವ ರಾಜಕಾರಣಿಗಳನ್ನೇ ಕೇಳಿದರೂ ಪರಿಸ್ಥಿತಿ ನೋಡಿ ಹೇಳುವುದಾಗಿ ಹೇಳುತ್ತಾರೆ. ಇದೆಲ್ಲಾ ಒಂದು ಕಡೆ ಇರಲಿ, ಸಾರ್ವಜನಿಕರು ಒಂದೆಡೆ ಗುಂಪು ಗುಂಪಾಗಿ ಸೇರುವುದನ್ನ ತಡೆದರೆ ಕೊರೊನಾ ಹರಡಲು ಸಾಧ್ಯನಾ…? ಇಂಥಹ ಪ್ರಶ್ನೆಗಳಿಗೆ ಯಾರ ಬಳಿ ಉತ್ತರವಿಲ್ಲ.

ಅಷ್ಟಕ್ಕೂ ಆರೋಗ್ಯ ಸಚಿವ ಶ್ರೀರಾಮುಲು ಅವರು ಹೇಳುವ ಪ್ರಕಾರ ಎಲ್ಲಾ ಆಸ್ಪತ್ರೆಗಳಲ್ಲಿ ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವಾರ್ಡ್ ಗಳನ್ನ ಮಾಡಲಾಗಿದೆ. ಈಗಾಗಲೇ ಗುಲ್ಬರ್ಗದ ಕಲ್ಬುರ್ಗಿಯ ಓರ್ವ ವೃದ್ಧ ಕೊರೊನಾದಿಂದ ಮೃತ ಪಟ್ಟಿದ್ದಾನೆ. ಈತನ ಕುಟುಂಬಸ್ಥರಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಹೀಗೆ ರಾಜ್ಯದಲ್ಲಿ ಒಟ್ಟು 7 ಕೊರೊನಾ ಸೋಂಕಿತರು ಕಾಣಿಸಿಕೊಂಡಿದ್ದಾರೆ. ಆದರಿಲ್ಲಿ ಸೋಂಕಿತರ ಕುಟುಂಬಸ್ಥರಿಗೆ ಅಕ್ಕ-ಪಕ್ಕದ ಮನೆಯವರಿಗೆ, ಸ್ನೇಹಿತರಿಗೆ ಹಾಗೂ ಸೋಂಕಿತರು ಓಡಾಡಿದ ಸ್ಥಳಗಳಲ್ಲಿ ಮಾತ್ರ ತಪಾಸಣೆ ಮಾಡಲಾಗುತ್ತಿದೆ ಹೊರತಾಗಿ ಬೇರೆ ಎಲ್ಲೂ ತಪಾಸಣೆ ಅಷ್ಟಾಗಿ ಮಾಡುತ್ತಿಲ್ಲ.

ರಾಜ್ಯದ ಬಹತೇಕ ರೈಲ್ವೇ ನಿಲ್ದಾಣಗಳಲ್ಲಿ ಹಾಗೂ ಬಸ್ ನಿಲ್ದಾಣಗಳಲ್ಲಿ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಓಡಾಡುವಂತಹ ಪ್ರಯಾಣಿಕರ ಮೂಲಕ ಸೋಂಕು ಹರಡುವ ಭೀತಿಯಲ್ಲಿ ಜನ ಮನೆಗಳನ್ನು ಬಿಟ್ಟು ಹೊರಬರುತ್ತಿಲ್ಲ. ಆದರೆ ಈ ಬಗ್ಗೆ ಸರ್ಕಾರ ನೆರೆ ರಾಜ್ಯಗಳಿಂದ ಬರುವ ಪ್ರಯಾಣಿಕ ಬಗ್ಗೆ ಕ್ಯಾರೆ ಎನ್ನುತ್ತಿಲ್ಲ. ಜನ ತಾವಾಗೇ ಸೋಂಕು ಲಕ್ಷಣಗಳು ಕಂಡು ಬಂದರೆ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಬಸ್, ರೈಲಿನಲ್ಲಿ ಸ್ವಚ್ಚತಾ ಕಾರ್ಯ ನಡೆಯುತ್ತಿದೆ ಹೊರತು, ಸೋಂಕಿತರು ಕಂಡು ಬಂದ ರಾಜ್ಯಗಳಿಂದ ಬರುವ ಪ್ರಯಾಣಿಕರ ತಪಾಸಣೆಯಾಗುತ್ತಿಲ್ಲ.

ನೆರೆ ರಾಜ್ಯ ಮಹಾರಾಷ್ಟ್ರದಲ್ಲಿ ಒಟ್ಟು 31 ಕೊರೊನಾ ಸೋಂಕಿತರು ದೃಢಪಟ್ಟಿದ್ದಾರೆ. ಇಲ್ಲಿಗೆ ನಮ್ಮ ರಾಜ್ಯದಿಂದಲೂ ಜನ ಪ್ರಯಾಣ ಬೆಳಸುತ್ತಾರೆ. ಕೇವಲ ಇದೊಂದೇ ರಾಜ್ಯವಲ್ಲ ಬೇರೆ ಬೇರೆ ರಾಜ್ಯದಿಂದಲೂ ಸಾವಿರಾರು ಪ್ರಯಾಣಿಕರು ನಮ್ಮ ರಾಜ್ಯಕ್ಕೆ ಪ್ರತಿನಿತ್ಯ ಓಡಾಡುತ್ತಾರೆ.

ಭಾರತದಲ್ಲಿ 110 ಜನರಿಗೆ ಸೋಂಕು ತಗುಲಿದ್ದು ಈ ಪೈಕಿ 93 ಜನ ಭಾರತೀಯರಾಗಿದ್ದರೆ ಇನ್ನೂ 17 ಜನ ವಿದೇಶಿಯರು ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ 32, ಕೇರಳದಲ್ಲಿ 22, ಹರಿಯಾಣದಲ್ಲಿ 14, ಉತ್ತರ ಪ್ರದೇಶದಲ್ಲಿ 13, ದೆಹಲಿಯಲ್ಲಿ 7, ಲಡಾಖ್ ನಲ್ಲಿ 3, ರಾಜಸ್ಥಾನದಲ್ಲಿ 4, ಕರ್ನಾಟಕದಲ್ಲಿ 7, ತೆಲಂಗಾಣದಲ್ಲಿ 3, ಜಮ್ಮು-ಕಾಶ್ಮೀರದಲ್ಲಿ 2, ಉತ್ತರಾಖಂಡ್, ಆಂಧ್ರ ಪ್ರದೇಶ, ತಮಿಳುನಾಡು, ಪಂಜಾಬ್ ನಲ್ಲಿ ತಲಾ ಒಬ್ಬರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.ವಿಶ್ವಾದ್ಯಂತ ಕೊರೋನಾಗೆ 6,515 ಜನರು ಬಲಿಯಾಗಿದ್ದಾರೆ.

ಸೋಂಕಿತರಿರುವ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಹಲವಾರು ಜನ ಪ್ರಯಾಣಿಕರು ನಾನಾ ಕಾರಣಗಳಿಗಾಗಿ ರೈಲ್ವೇ, ಬಸ್, ಪ್ರತ್ಯೇಕ ವಾಹನಗಳ ಮೂಲಕ ಆಗಮಿಸುತ್ತಾರೆ. ಇಂತಹ ಜನರನ್ನು ತಪಾಸಣೆ ಮಾಡುವಲ್ಲಿ ನಮ್ಮ ಸರ್ಕಾರ ಗಮನ ಹರಿಸುತ್ತಿಲ್ಲ. ಸೋಂಕಿನ ಮೂಲ ಹಾಗೂ ಎಲ್ಲಿಂದ ಹರಡಲು ಸಾಧ್ಯತೆಯ ಬಗ್ಗೆ ಯೋಚಿಸುವ ಬದಲಿಗೆ ಈಗಾಗಲೇ ಸೋಂಕು ಕಂಡುಬಂದವರ ಸುತ್ತಮುತ್ತಲಿನ ಸ್ಥಳಗಳ ಜಾಡು ಹಿಡಿದು ಹೊರಟಿದೆ. ಇದರ ಬದಲಿಗೆ ಇನ್ಯಾವ ಅನ್ಯ ಮಾರ್ಗದಿಂದ ಸೋಂಕು ಹರಡುವ ಸಾಧ್ಯತೆ ಇದೆ ಎನ್ನುವ ಬಗ್ಗೆ ನಮ್ಮ ರಾಜ್ಯ ಸರ್ಕಾರ ಯೋಚನೆ ಮಾಡಬೇಕಿದೆ. ಆ ಬಗ್ಗೆ ತಪಾಸಣೆ ನಡೆಸಬೇಕಿದೆ. ವಿಮಾನ ನಿಲ್ದಾಣದಲ್ಲಿ ಆದಂತೆ ರಾಜ್ಯದ ರೈಲ್ವೇ, ಬಸ್ ನಿಲ್ದಾಣದಲ್ಲಿ, ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ಮಾಡಬೇಕಿದೆ. ಹೀಗಾದಲ್ಲಿ ಮಾತ್ರ ಕೊರೊನಾ ಸೋಂಕು ಕೊಂಚ ಮಟ್ಟಿಗೆ ತಡೆಯಲು ಸಾಧ್ಯ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights