ಮೇಣದಬತ್ತಿ “ವಿಜ್ಞಾನ”ವನ್ನು ಖಂಡಿಸಿದ ವೈಜ್ಞಾನಿಕ ಸಮುದಾಯ; ಮುಂಬತ್ತಿ ಬೆಳಕಿಗೆ ವೈರಸ್ ಸಾಯುವುದು ಮೂಢನಂಬಿಕೆ

ಪ್ರಧಾನಿ ನರೇಂದ್ರ ಮೋದಿ ಅವರ ಮೇಣದಬತ್ತಿ ಮತ್ತು ದೀಪಗಳನ್ನು ಹಚ್ಚಿ ಎನ್ನುವ ಕರೆ ಜನರನ್ನು ಕೊರೊನವೈರಸ್ ನಿಂದ ರಕ್ಷಿಸುತ್ತದೆ ಎಂದು ಹೇಳಿದ್ದ ಹೃದಯತಜ್ಞರೊಬ್ಬರ ವಿಡಿಯೋವನ್ನು ಕೇಂದ್ರ ಸರ್ಕಾರ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ನಂತರ ಅದನ್ನು ಡಿಲೀಟ್ ಮಾಡಿತ್ತು.

“ಡಾ. ಕೆ ಕೆ ಅಗರ್ವಾಲ್, ಪದ್ಮ ಪ್ರಶಸ್ತಿ ವಿಜೇತ ಮತ್ತು ಭಾರತೀಯ ವೈದ್ಯಕೀಯ ಮಂಡಳಿಯ ಮಾಜಿ ಅಧ್ಯಕ್ಷ, ಪ್ರಧಾನಿ ನರೇಂದ್ರ ಮೋದಿ ಅವರು ಎಪ್ರಿಲ್ 5 ರಾತ್ರಿ ಒಂಬತ್ತು ಘಂಟೆಗೆ  ಮುಂಬತ್ತಿ/ ದೀಪ/ಟಾರ್ಚ್ ಬೆಳಕನ್ನು ಬಿಡುವುದಕ್ಕೆ ಕೋರಿರುವುದರೆ ಹಿಂದಿನ ವಿಜ್ಞಾನವನ್ನು ವಿವರಿಸಿದ್ದಾರೆ” ಎಂದು ಭಾರತ ಸರ್ಕಾರದ ಟ್ವಿಟ್ಟರ್ ಹ್ಯಾಂಡಲ್ ಬರೆದು, ಆ ಹೃದಯತಜ್ಞರ ವಿಡಿಯೋ ಸಂದೆಶವನ್ನು ಹಂಚಿಕೊಂದಿತ್ತು.

ಅಗರ್ವಾಲ್ ತಮ್ಮ ಸಂದೇಶದಲ್ಲಿ “ಒಂಭತ್ತು ನಿಮಿಷಗಳ ಕಾಲ ಮುಂಬತ್ತಿ ಹಚ್ಚಿ ಧೃಢತೆಯಿಂದ ಪ್ರಾರ್ಥನೆ ಮಾಡುವಂತೆ ಪ್ರಧಾನಿಯವರು ಕರೆ ಕೊಟ್ಟಿರುವುದು ಯೋಗ ವಸಿಷ್ಠದ ಆರನೇ ಅಧ್ಯಾಯದ ಪ್ರಕಾರ ಇದೆ. ಇದು ಸಾಮುದಾಯಿಕ ಪ್ರಜ್ಞೆಯ ಅಂಶ. 5% ಜನ ಯೋಚನೆ ಮಾಡುವುದನ್ನು 95% ಜನ ಮಾಡುತ್ತಾರೆ ಎಂಬ ತತ್ವ ಇದು.

“ರಿತಂಬರ ಪ್ರಾಗ್ಯ ಮತ್ತು ಕ್ವಾಂಟಮ್ ಲಕ್ಷಣಗಳ ಪ್ರಕಾರ ಸಾಮುದಾಯಿಕ ಪ್ರಜ್ಞೆ ಏಸ್-2 ರಿಸೆಪ್ಟರ್ ಗಳನ್ನು ಗುನಮುಖಪಡಿಸುವ ಶಕ್ತಿ ಹೊಂದಿದೆ. ಏಸ್-2 ರಿಸೆಪ್ಟರ್ ಗಳಲ್ಲಿ ಕೊರೊನ ವೈರಸ್ ಕೂಡಿಕೊಳ್ಳಬಾರದು ಎಂದು ನಾವು ಒಟ್ಟಾಗಿ ನಂಬಿದರೆ, ಸಾಮುದಾಯಿಕ ಪ್ರಜ್ಞೆ ಅದಕ್ಕೆ ಅವಕಾಶ ಮಾಡಿಕೊಡುತ್ತದೆ” ಎಂದು ಹೇಳಿದ್ದರು.

ಈ ಟ್ವೀಟ್ ನನ್ನು ಸರ್ಕಾರ ಕೂಡಲೇ ತೆಗೆದುಹಾಕಿತ್ತಾದರೂ ಅಷ್ಟರಲ್ಲಿ ಅದನ್ನು ಸಾಕಷ್ಟು ಜನ ನೋಡಿದ್ದರು.

ಇಂತಹ ಅವೈಜ್ಞಾನಿಕ ಸಂದೇಶಗಳ ಬಗ್ಗೆ ಅರಿವು ಮೂಡಿಸಲು ಹಲವು ವಿಜ್ಞಾನಿಗಳು ಈಗ ಒಟ್ಟಾಗಿದ್ದಾರೆ. ಇದಕ್ಕಾಗಿ ಅವರು ಒಂದು ಅಂತರ್ಜಾಲ ತಾಣವನ್ನೂ ಸಿದ್ಧಪಡಿಸಿದ್ದಾರೆ. “ಅಗರ್ವಾಲ್ ಅವರು ವಿಜ್ಞಾನದ ಹೆಸರು ಹೇಳಿ ಅವರು ಆಡಿರುವುದಕ್ಕೆ ಸಮರ್ಥನೆಯಾಗಿ ತೋರಿಸಿಕೊಳ್ಳಲು ಪ್ರಯತ್ನಿಸಿದ್ದಾರೆ — ಆದರೆ ಅವರು ಹೇಳಿರುವುದರಲ್ಲಿ ಯಾವುದೇ ಅರ್ಥ ಇಲ್ಲ” ಎಂದು ಈ ವಿಜ್ಞಾನಿಗಳ ಒಕ್ಕೂಟದ ಭಾಗವಾಗಿರುವ ಚನ್ನೈನ ಗಣಿತ ವಿಜ್ಞಾನಗಳ ಸಂಸ್ಥೆಯ ಕಂಪ್ಯೂಟರ್ ವಿಜ್ಞಾನದ ಪ್ರೊಫೆಸರ್ ಆರ್ ರಾಮಾನುಜನ್ ಹೇಳಿದ್ದಾರೆ.

IndSciCov ಎಂದು ಕರೆದುಕೊಂಡಿರುವ ಈ ವಿಜ್ಞಾನಿಗಳ ಒಕ್ಕೂಟ ಶುಕ್ರವಾರ ಸರಣಿ ಟ್ವೀಟ್ ಮಾಡಿ, ಮುಂಬತ್ತಿ ಹಚ್ಚುವುದನ್ನು ವಿಜ್ಞಾನ ಎಂದು ಹೇಳುವ ಪೋಸ್ಟ್ ಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದೆ. “ವೈರಸ್ ಗಳು ಕೋಶಗಳ ಜೊತೆಗೆ, ದೇಹದ ಟಿಶ್ಯೂಗಳ ಜೊತೆಗೆ ರಾಸಾಯನಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತವೆ. ಇದು ಭೌತಿಕ ಮತ್ತು ರಾಸಾಯನಿಕ ಮಟ್ಟದಲ್ಲಿ ನಡೆಯುತ್ತದೆ. ಕಿರುಚುವುದರಿಂದ, ಹಾಡುವುದರಿಂದ ಅಥವಾ ಬೆಳಕು ಮೂಡಿಸುವುದರಿಂದ ಈ ಕ್ರಿಯೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಕ್ಕೆ ಸಾಕ್ಷ್ಯ ಇಲ್ಲ” ಎಂದು ಈ ಒಕ್ಕೂಟ ಹೇಳಿದೆ.

“ಈ ಸಮಯಕ್ಕೆ ಬೇಕಾಗಿರುವುದು ಸಾಮಾಜಿಕ ಬೆಂಬಲ ಮತ್ತು ಸಾಮರಸ್ಯ ಅದೇ ಸಮಯದಲ್ಲಿ ಒಬ್ಬರಿಗೊಬ್ಬರು ಅಂತರವನ್ನು ಕಾಯ್ದುಕೊಳ್ಳಬೇಕು. ಖಾಯಿಲೆ, ವಲಸೆ ಕಾರ್ಮಿಕರನ್ನು ಮತ್ತು ಬಡವರಿಗೆ ಉಂಟಾಗಿರುವ ಸಾಮಜಿಕ-ಆರ್ಥಿಕ ತೊಂದರೆಗಳನ್ನೂ ನಿರ್ಲಕ್ಷ್ಯ ಮಾಡದೆ ಪರಿಹಾರ ಕಂಡುಹಿಡಿಯಲು ಕ್ರಮಬದ್ಧವಾದ ಸಾಮಾಜಿಕ ಚಿಂತನೆ ಮತ್ತು ತೊಡಗಿಸಿಕೊಳ್ಳುವುದು ಅವಶ್ಯಕವಿದೆ” ಎಂದು ಕೂಡ ಅವರು ಹೇಳಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights