ಲಾಕ್‌ಡೌನ್ ಸಂದರ್ಭದಲ್ಲಿ ಬಡವರು, ಕಾರ್ಮಿಕರ ಬದುಕು ಹೇಗಿದೆ: ಅಧ್ಯಯನ ಏನು ಹೇಳುತ್ತದೆ!

ಈವರೆಗಿನ ಹಲವು ಅಧ್ಯಯನಗಳು ತೋರಿಸಿ ಕೊಟ್ಟಿರುವಂತೆ, ಕೊರೊನಾ ಲಾಕ್‍ಡೌನ್ ಸಂದರ್ಭದಲ್ಲಿ ಜಗತ್ತಿನಾದ್ಯಂತ ಅತಿಹೆಚ್ಚು ಸಂಕಷ್ಟಕ್ಕೆ ಗುರಿಯಾದವರು ಶ್ರಮಿಕವರ್ಗ (ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಆರೋಗ್ಯ ಸಿಬ್ಬಂದಿಗಳನ್ನೂ ಒಳಗೊಂಡು). ಶ್ರಮಜೀವಿಗಳ ಮೇಲೆ ಧಿಡೀರನೆ ಎರಗಿದ ಲಾಕ್‍ಡೌನ್ ಪ್ರಹಾರವನ್ನು ತಡೆದುಕೊಳ್ಳುವ ಶಕ್ತಿಯಿಲ್ಲದೇ ಈ ಬಹುಸಂಖ್ಯಾತ ಕುಟುಂಬಗಳು ಅತ್ಯಂತ ಬಿಕ್ಕಟ್ಟಿನ ದಿನಗಳನ್ನು ದೂಡುತ್ತಿವೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ, ದೇಶಮಟ್ಟದಲ್ಲಿ ಹಲವು ಅಧ್ಯಯನಗಳು ನಡೆದಿವೆ. ಕರ್ನಾಟಕ ಜನಶಕ್ತಿಯು ಕರ್ನಾಟಕಕ್ಕೆ ಸೀಮಿತವಾಗಿ ಇಂತಹ ಒಂದು ಸಾಮಾಜಿಕ ಅಧ್ಯಯನವನ್ನು ನಡೆಸಿ, ವರದಿಯನ್ನು ಹೊರತಂದಿದೆ. ಇಂದಿನ ಸಂಕಷ್ಟದ ದಿನಗಳಲ್ಲಿ ಸಮಾಜದ ಬಹುಸಂಖ್ಯಾತರಾದ ಈ ಪ್ರಜೆಗಳ ನೋವನ್ನು ಒಂದಷ್ಟಾದರೂ ಕಡಿಮೆ ಮಾಡುವಂತಹ ಆಡಳಿತಾತ್ಮಕ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳುವಂತೆ ಮಾಡುವಲ್ಲಿ, ಇಂತಹ ತಳಮಟ್ಟದ ಅಧ್ಯಯನಗಳು ಮತ್ತು ಮಾಧ್ಯಮಗಳ ಪಾತ್ರ ಬಹಳ ಮಹತ್ವದ್ದಾಗಿದೆ. ಆದ್ದರಿಂದ ವಿವಿಧ ಜಿಲ್ಲೆಗಳ ಜನರ ಬಳಿ ಅವರ ಸಮಸ್ಯೆ ಹಾಗೂ ಅವರ ಸ್ಥಿತಿಗತಿಗಳ ಬಗ್ಗೆ ಕರ್ನಾಟಕ ಜನಶಕ್ತಿ ಸಂಘಟನೆಯು ಅಧ್ಯಯನ ನಡೆಸಿದ್ದು, ವರದಿಯನ್ನು ಬಿಡುಗಡೆ ಮಾಡಿದೆ.

 

ಅಧ್ಯಯನ ನಡೆಸಲಾದ ಜಿಲ್ಲೆಗಳು:

ಕೋಲಾರ, ಕೊಪ್ಪಳ, ಮಂಡ್ಯ, ಮೈಸೂರು, ರಾಯಚೂರು, ರಾಮನಗರ, ಉತ್ತರ ಕನ್ನಡ, ಕೊಡಗು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬೆಳಗಾವಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ.

ಅಧ್ಯಯನ ನಡೆಸಲಾದ ಜನವರ್ಗಗಳು:

ರೈತ ಕೂಲಿಗಳ, ಅಸಂಘಟಿತ ವಲಯದ ಕೂಲಿಗಳು, ರೈತರು, ಕಟ್ಟಡ ಕಾರ್ಮಿಕರು, ದರ್ಜಿಗಳು, ರೇಷ್ಮೆ ಕಸುಬಿನವರು, ಬಡಗಿಗಳು, ಗುತ್ತಿಗೆ ಕಾರ್ಮಿಕರು, ಸರ್ಕಾರಿ ನಿವೃತ್ತ ಅಧಿಕಾರಿಗಳು ಹಾಗೂ ನೌಕರರು, ಬೀದಿ ಬದಿಯ ವ್ಯಾಪಾರಿಗಳು, ಲೈಂಗಿಕ ಅಲ್ಪಸಂಖ್ಯಾತರು, ಬದುಕಿಗೋಸ್ಕರ ವೇಶ್ಯಾವೃತ್ತಿ ಮಡುವವರು, ದೇವದಾಸಿಯರು, ರೈಲುಗಳಲ್ಲಿ ವ್ಯಾಪಾರ ಮಾಡುವ ಮಹಿಳೆಯರು, ಅಂಗವಿಕಲರು-ಇಷ್ಟು ಬಗೆಯ ವೃತ್ತಿಗಳಲ್ಲಿ ತೊಡಗಿದ್ದ ಸುಮಾರು 153 ಮಂದಿಯನ್ನು ಅಧ್ಯಯನ ಮಾಡಲಾಗಿದೆ.

ಎಲ್ಲಾ ಶ್ರಮಜೀವಿಗಳಿಗೆ ಆಹಾರ-ಆರೋಗ್ಯ-ಉದ್ಯೋಗದ ಭದ್ರತೆ ನೀಡುವುದು ಸರ್ಕಾರಕ್ಕೆ ಸಾಧ್ಯ ಮತ್ತು ಅದು ಜವಾಬ್ದಾರಿಯಾಗಿದ್ದು, ಸಮೀಕ್ಷೆಯ ಆಧಾರದಲ್ಲಿ ಕೆಲವು ಹಕ್ಕೊತ್ತಾಯಗಳನ್ನು ಸಂಘಟನೆಯು ಸರ್ಕಾರದ ಮುಂದಿಟ್ಟಿದೆ. ಹಕ್ಕೊತ್ತಾಯಗಳು ಹೀಗಿವೆ:

  1. ರಾಜ್ಯದ ಪ್ರತಿಯೊಂದು ಶ್ರಮಜೀವಿ ಕುಟುಂಬಕ್ಕೆ ಮೇನಿಂದ ಆರಂಭಿಸಿ ಸಂಪೂರ್ಣ ಲಾಕ್‌ಡೌನ್ ತೆರೆದ ನಂತರದ 3 ತಿಂಗಳ ಕಾಲ ಆಹಾರ ಕಿಟ್ ಉಚಿತವಾಗಿ ನೀಡಬೇಕು. ವ್ಯಕ್ತಿಯೊಬ್ಬರಿಗೆ 10 ಕೆ.ಜಿ ಅಕ್ಕಿ ಮತ್ತು ಇತರೆ ಬೇಳೆಕಾಳುಗಳು, ಎಣ್ಣೆ, ಉಪ್ಪು, ಸಂಬಾರು ಪದಾರ್ಥಗಳು ಸೇರಿದಂತೆ ಕುಟುಂಬದ ಆಹಾರ ಅಗತ್ಯಗಳೆಲ್ಲವನ್ನೂ ಅದು ಒಳಗೊಂಡಿರಬೇಕು. ಪೌಷ್ಟಿಕಾಂಶ ಕೊರತೆಯಿಂದ ಸೋಂಕು ಬೇಗ ಬರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ತಮಿಳುನಾಡು ಮತ್ತು ಕೇರಳ ಸರ್ಕಾರಗಳ ಮಾದರಿಯನ್ನು ಎಲ್ಲೆಡೆ ಅನುಷ್ಠಾನಕ್ಕೆ ತರಬೇಕು.
  2. ದುಡಿಯುವ ಜನರ ಕುಟುಂಬಗಳಿಗೆ ನೇರ ವರ್ಗಾವಣೆಯ ಮೂಲಕ ತಿಂಗಳಿಗೆ 7,000₹ ರೂ.ನಂತೆ ಮುಂದಿನ 3 ತಿಂಗಳು ಸಹಾಯ ಧನ ನೀಡಬೇಕು. ಅಲೆಮಾರಿ, ಬುಡಕಟ್ಟು ಜನರು ಸೇರಿದಂತೆ ಬಿಪಿಎಲ್ ಕಾರ್ಡು, ಜನಧನ್ ಅಕೌಂಟುಗಳಿಲ್ಲದ ಯಾರೂ ಇದರಿಂದ ಹೊರಗುಳಿಯದಂತೆ ವ್ಯವಸ್ಥೆ ಆಗಬೇಕು. ದೆಹಲಿ ರಾಜ್ಯ ಸರ್ಕಾರದ ಮಾದರಿಯನ್ನು ಇನ್ನೂ ವಿಸ್ತಾರಗೊಳಿಸಬೇಕು.
  3. ತಾಲೂಕು ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ಕೇತ್ರವನ್ನು ಬಲಪಡಿಸುವುದು ಈ ಸಂದರ್ಭದ ತುರ್ತು ಅಗತ್ಯಗಳಲ್ಲೊಂದಾಗಿದೆ. ವೆಂಟಿಲೇಟರ್, ಆಕ್ಸಿಜನ್, ಡಯಾಲಿಸಿಸ್, ಶಸ್ತçಚಿಕಿತ್ಸೆ ಲಭ್ಯವಿರುವ ಸುಸಜ್ಜಿತ ಘಟಕಗಳು ಪ್ರತಿ ತಾಲೂಕಿನಲ್ಲಿ ಏರ್ಪಾಡಾಗಬೇಕು. ಅಗತ್ಯಬಿದ್ದರೆ ಖಾಸಗಿ ವಲಯದ ಆಸ್ಪತ್ರೆಗಳನ್ನು ಸೂಕ್ತ ಪ್ರಕ್ರಿಯೆಯ ಮೂಲಕ ಸರ್ಕಾರದ ವಶಕ್ಕೆ ಪಡೆಯಬೇಕು. ಆರೋಗ್ಯ ವ್ಯವಸ್ಥೆಯ ತುರ್ತು ಸುಧಾರಣೆ ತಕ್ಷಣದಲ್ಲಿ, ಅಲ್ಪಕಾಲದಲ್ಲಿ ಮತ್ತು ದೀರ್ಘಾವಧಿಯಲ್ಲಿ ದೊಡ್ಡ ಡಿವಿಡೆಂಡ್ ನೀಡುತ್ತದೆ.
  4. ರೈತರು ಬೆಳೆದಿರುವ ಎಲ್ಲಾ ರೀತಿಯ ಬೆಳೆಗಳನ್ನು ಬೆಂಬಲ ಬೆಲೆಯಡಿ ಕೊಂಡುಕೊAಡು ಎಲ್ಲಾ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ತಲುಪಿಸಬೇಕು. ರೈತರು ಸರಕುಗಳನ್ನು ಮಾರುಕಟ್ಟೆಗೆ ಒಯ್ಯುವಾಗ ಹೈವೇಗಳಲ್ಲಿ ಟೋಲ್‌ಗಳನ್ನು ಈಗಿಂದೀಗಲೇ ರದ್ದುಗೊಳಿಸಬೇಕು.
  5. ಮುಂಗಾರು ಮಳೆಗಾಲ ಆರಂಭವಾಗಿದ್ದು ಎಲ್ಲಾ ರೈತರಿಗೆ ಬೆಳೆ ಬೆಳೆಯಲು ಆಯಾ ಪ್ರದೇಶಕ್ಕೆ ಅನುಗುಣವಾಗಿ ಬಿತ್ತನೆ ಬೀಜ, ರಸಗೊಬ್ಬರಗಳ ಪೂರೈಕೆಗೆ ಯಾವುದೇ ತೊಂದರೆಯಿಲ್ಲದಂತೆ ನೋಡಿಕೊಳ್ಳಬೇಕು. 5 ಎಕರೆಯವರೆಗಿನ ವ್ಯವಸಾಯಕ್ಕೆ ಹಿಂದಿನ ಸುಸ್ತಿಗಳು ಏನೇ ಇದ್ದರೂ, ಕಾಗದ ಪತ್ರಗಳು ಅನುಭೋಗದಾರರ ಬಳಿ ಇರದಿದ್ದರೂ ಶೂನ್ಯ ಬಡ್ಡಿಯ ಸಾಲದ ವ್ಯವಸ್ಥೆ ಮಾಡಬೇಕು.
  6. ಕೊರೋನ ಕಾರಣದಿಂದ ಉದ್ಯೋಗ ಕಳೆದುಕೊಂಡಿರುವ ಎಲ್ಲಾ ಕಾರ್ಮಿಕರಿಗೆ ಲಾಕ್‌ಡೌನ್ ಕಾಲದ ವೇತನವನ್ನು ಖಾತ್ರಿಪಡಿಸಬೇಕು. ಈ ಸಂದರ್ಭದ ದುರುಪಯೋಗ ಮಾಡಿಕೊಳ್ಳಲು ಉದ್ದಿಮೆದಾರರಿಗೆ ಅವಕಾಶ ನೀಡಬಾರದು.
  7. ಕರೋನ ಕಾರಣದಿಂದ ನಷ್ಟ ಹೊಂದಿರುವ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳ ಮತ್ತು ಗುಡಿ ಕೈಗಾರಿಕೆಗಳಿಗೆ ಸಹಾಯ ಧನ ಘೋಷಿಸಿ ಪೋಷಿಸಬೇಕು.
  8. ಕೊರೋನ ದುಸ್ಥಿತಿಯ ದುರುಪಯೋಗ ಮಾಡಿಕೊಳ್ಳಲು ಹೊರಟಿರುವ ಕಾರ್ಪೋರೇಟ್ ಉದ್ದಿಮೆದಾರರು ಕೆಲಸದ ಅವಧಿಯನ್ನು 8 ಗಂಟೆಯಿಂದ ಹೆಚ್ಚಿಸಲು ಮಾಡುತ್ತಿರುವ ಹುನ್ನಾರದ ಜೊತೆಗೆ ಜನರಿಂದ ಆಯ್ಕೆಯಾದ ಸರ್ಕಾರವು ಶಾಮೀಲಾಗಬಾರದು.
  9. ಆರ್ಥಿಕತೆಯ ಅಭಿವೃದ್ಧಿಗೆ ಮತ್ತು ಹೊಸ ಉದ್ಯೋಗ ಸೃಷ್ಟಿಸಲು ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು. ಸ್ಥಳೀಯ ಬೆಳೆಗಳ ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಆಧರಿಸಿ ಸ್ಥಳೀಯ ಉದ್ಯೋಗ ಸೃಷ್ಟಿಯ ಎಲ್ಲಾ ಸಾಧ್ಯತೆಗಳನ್ನೂ ಪರಿಶೀಲಿಸಿ ಉತ್ತೇಜನ ನೀಡಬೇಕು.
  10. ನರೇಗಾ ಕೆಲಸದ ಕನಿಷ್ಠ ಕೂಲಿಯನ್ನು 300 ರೂ.ಗಳಿಗೆ ಹೆಚ್ಚಿಸಬೇಕು. ವರ್ಷಕ್ಕೆ 200 ದಿನಗಳಿಗೆ ಹೆಚ್ಚಿಸಬೇಕು. ಕುಟುಂಬಕ್ಕೆ ಒಬ್ಬರು ಎಂಬ ಸೀಲಿಂಗ್ ತೆಗೆಯಬೇಕು. ಒರಿಸ್ಸಾ ಸರ್ಕಾರ ಮಾಡುತ್ತಿರುವ ರೀತಿಯಲ್ಲಿ ನಗರ ಪ್ರದೇಶಕ್ಕೆ ವಿಸ್ತರಿಸಬೇಕು.
  11. ಗ್ರಾಮೀಣ ಉದ್ಯೋಗ ಖಾತರಿಯ ಮಾದರಿಯಲ್ಲೇ(ನರೇಗಾ) ನಗರ ಉದ್ಯೋಗ ಖಾತರಿ ಯೋಜನೆ ಜಾರಿಮಾಡಬೇಕು.
  12. ಶ್ರಮಜೀವಿಗಳ ಕುಟುಂಬಗಳಿಗೆ ಶಾಪವಾಗಿರುವ ಹೆಂಡಸಾರಾಯಿಯಿಂದ ಈ ಅವಧಿಯಲ್ಲಿ ತಾತ್ಕಾಲಿಕ ಬಿಡುಗಡೆ ಸಿಕ್ಕಿತ್ತು. ಅದೇ ರೀತಿ ಲಾಕ್‍ಡೌನ್ ತೆರವುಗೊಳಿಸಿದ ನಂತರವೂ ಮದ್ಯನಿಷೇಧ ಮುಂದುವರೆಯಬೇಕು.
  13. ದುಡಿಯುವ ವರ್ಗದ ಕುಟುಂಬದ ಮಕ್ಕಳಿಗೆ ತೊಂದರೆಯಾಗದಂತೆ ಸರ್ಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳೆರಡರಲ್ಲೂ ಶುಲ್ಕ ವಿನಾಯಿತಿ ಘೋಷಿಸಬೇಕು. ಅನಿವಾರ್ಯ ಸಂದರ್ಭದಲ್ಲಿ ಶ್ರಮಿಕರ ಕುಟುಂಬದ ಮಕ್ಕಳ ಶಿಕ್ಷಣ ಮತ್ತು ಶುಲ್ಕಕ್ಕೆ ಸರ್ಕಾರ ವಿದ್ಯಾರ್ಥಿ ವೇತನ ನೀಡಬೇಕು.

ಇದನ್ನು ಜಾರಿಗೊಳಿಸಲು ಎಷ್ಟು ವೆಚ್ಚವಾಗುತ್ತದೆ? ಮೊದಲು ಪ್ರತಿಯೊಬ್ಬ ವ್ಯಕ್ತಿಗೆ 10 ಕೆಜಿ ಅಕ್ಕಿ/ಗೋಧಿಯನ್ನು ಸಾರ್ವತ್ರಿಕವಾಗಿ ವಿತರಿಸುವುದರ ಕುರಿತು ಪರಿಗಣಿಸೋಣ. ಶೇಕಡಾ 80% ಪ್ರಮಾಣದ ಜನಸಂಖ್ಯೆ ಇದರ ಅವಶ್ಯಕತೆ ಇದೆ. 100 ಕೋಟಿ ಜನಸಂಖ್ಯೆಗೆ ಆರು ತಿಂಗಳು ಕಾಲ ವಿತರಿಸಲು 62.4 ಮಿಲಿಯನ್ ಟನ್ ಅಕ್ಕಿ/ಗೋಧಿ ಬೇಕಾಗುತ್ತದೆ. ಇದು ಗರಿಷ್ಟ ಲೆಕ್ಕಾಚಾರ. ವಾಸ್ತವದಲ್ಲಿ ಇದಕ್ಕಿಂತ ಕಡಿಮೆ ಬೇಕಾಗುತ್ತದೆ. ಸದ್ಯಕ್ಕೆ ಭಾರತೀಯ ಆಹಾರ ನಿಗಮ (ಎಫ್ ಸಿಐ) ವು 77 ಮಿಲಿಯನ್ ಟನ್ ಆಹಾರ ದಾನ್ಯದ ಸಂಗ್ರಹವನ್ನು ಹೊಂದಿದೆ. ಮಾಮೂಲಿಯಾಗಿ 24 ಟನ್ ನ್ನು ಹೆಚ್ಚುವರಿಯಾಗಿ ಸಂಗ್ರಹಿಸಿ ಶೇಖರಿಸಿಡಲಾಗುತ್ತದೆ. ಮೇ ತಿಂಗಳಲ್ಲಿ ಆರಂಬವಾಗುವ ರಾಬಿ ಕೊಯ್ಲಿನಿಂದ 40 ಮಿಲಿಯನ್ ಟನ್ ಆಹಾರ ದಾನ್ಯ ದೊರಕುತ್ತದೆ. ಇದೆಲ್ಲವನ್ನೂ ಸೇರಿಸಿದರೆ ಎಫ್ ಸಿಐ ಬಳಿ 117 ಟನ್ ಆಹಾರ ದಾನ್ಯದ ಸಂಗ್ರಹವಿರುತ್ತದೆ. ಇದರಿಂದ 62.4 ಮಿಲಿಯನ್ ಟನ್ ದಾನ್ಯವನ್ನು ವಿತರಿಸಿದರೂ ಸಹ ಎಫ್ ಸಿಐ ಬಳಿ ಇನ್ನೂ 54.5 ಮಿಲಿಯನ್ ಟನ್ ಆಹಾರ ಮಿಕ್ಕಿರುತ್ತದೆ” ಎಂದು ಅಧ್ಯಯನ ಸಮಿತಿ ತಿಳಿಸಿದೆ.

ಈ ವರದಿಯು ಮುಂದಿಟ್ಟಿರುವ ಅಂಕಿ-ಅಂಶಗಳನ್ನು ಗಮನಿಸಿದಾಗ ಕರ್ನಾಟಕ ಜನಶಕ್ತಿಯು ಅಧ್ಯಯನದ ಫಲಿತವಾಗಿ ಮುಂದಿಟ್ಟಿರುವ ಹಕ್ಕೊತ್ತಾಯಗಳು ಸಂಪೂರ್ಣವಾಗಿ ಕಾರ್ಯಸಾಧುವಾದವು ಮತ್ತು ನ್ಯಾಯೋಚಿತವಾದುವು ಎಂದು ಸಮಿತಿ ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights