ಮೋದಿಗೆ ಅನಿವಾಸಿ ಭಾರತೀಯರ ಮೇಲಿನ ಪ್ರೀತಿ; ದೇಶದ ಕಾರ್ಮಿಕರ ಮೇಲಿಲ್ಲವೇ!

ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ವಿದೇಶಗಳಲ್ಲಿ ನಿರಾಶ್ರಿತರಾಗಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಕಾರ್ಯಾಚರಣೆಯನ್ನು ಆರಂಭಿಸಿದೆ. ಮೊದಲ ಹಂತದ ಕಾರ್ಯಾಚರಣೆಯ ಭಾಗವಾಗಿ ಸರ್ಕಾರ ನೌಕಾಪಡೆಯ ಮೂರು ನೌಕೆಗಳನ್ನು ಯುಎಇ ಮತ್ತು ಮಾಲ್ಡೀವ್ಸ್  ದೇಶಗಳಿಗೆ ರವಾನಿಸಿದೆ.

ಮುಂಬೈ ಕರಾವಳಿಯಲ್ಲಿ ಲಂಗರು ಹಾಕಿದ್ದ ಐಎನ್ಎಸ್ ಜಲಾಶ್ವ, ಐಎನ್ಎಸ್ ಮಗರ್ ನೌಕೆಗಳನ್ನು ಮಾಲ್ಡೀವ್ಸ್ ಗೆ ಕಳುಸಿಸಲಾಗಿದ್ದು, ಐಎನ್ಎಸ್ ಶಾರ್ದೂಲ್ ನೌಕೆಯನ್ನುಯುಎಇಗೆ ಕಳುಹಿಸಲಾಗಿದೆ. ಮೇ7ರ ಹೊತ್ತಿಗೆ ಈ ಮೂರು ನೌಕೆಗಳು ಮಾಲ್ಡೀವ್ಸ ಮತ್ತು ಯುಎಇ ತಲುಪುವ  ಸಾಧ್ಯತೆ ಇದ್ದು, ಮೂರು ನೌಕೆಗಳು ಈ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ದೇಶಕ್ಕೆ ಕರೆತರಲಿವೆ.

ಜಗತ್ತಿನಾದ್ಯಂತ ಆರೋಗ್ಯ ಬಿಕ್ಕಟ್ಟು ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ವಿದೇಶಗಳಲ್ಲಿ ಸಿಕ್ಕಿಕೊಂಡಿರುವ ಭಾರತೀಯರನ್ನು ದೇಶಕ್ಕೆ ವಾಪಸ್‌ ಕರೆತರುವುದು ಸರ್ಕಾರದ ಶ್ಲಾಘನೀಯ ಕಾರ್ಯ. ಇಂತಹ ಕಾರ್ಯಾಚರಣೆಗಳ ಅಗತ್ಯ ಈ ಸಂದರ್ಭದಲ್ಲಿ ಹೆಚ್ಚಾಗಿಯೇ ಇದೆ. ಕೊರೊನಾ ಹಾವಳಿ ಹೆಚ್ಚಾಗುತ್ತಿದ್ದ ಸಂದರ್ಭದಲ್ಲಿ ಅಂದರೆ ಮಾರ್ಚ್‌  ಎರಡನೇ ಮತ್ತು ಮೂರನೇ ವಾರಗಳಲ್ಲಿ ಸರ್ಕಾರ ಇಂತಹ ಕಾರ್ಯಾಚರಣೆಗಳನ್ನು ಮಾಡಿದೆ. ಹಲವಾರು ವಿಶೇಷ ವಿಮಾನಗಳನ್ನು ನಿಯೋಜಿಸಿ, ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಿ ವಿದೇಶದಲ್ಲಿದ್ದ ಅನಿವಾಸಿ ಭಾರತೀಯರನ್ನು ಕರೆತಂದಿತ್ತು. ಅದೇ ಕೆಲಸವನ್ನು ಈಗ ನೌಕೆಗಳ ಮೂಲಕ ಮುಂದುವರೆಸಿದೆ. ಇದನ್ನು ಶ್ಲಾ‍ಘಿಸೋಣ.

ಆದರೆ, ಅನಿವಾಸಿಗರನ್ನು ಕರೆದರುವುದರಲ್ಲಿ ಭಾರತ ಸರ್ಕಾರಕ್ಕೆ (ಪ್ರಸ್ತುತ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಸರ್ಕಾರಕ್ಕೆ) ಇರುವ ಉತ್ಸುಕತೆ, ಕೌತುಕ ಇದೇ ದೇಶದಲ್ಲಿದ್ದು, ಈ ದೇಶದ ಅಭಿವೃದ್ಧಿಗೆ ಬುನಾದಿಯಾಗಿ ದುಡಿಯುತ್ತಿರುವ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಇಲ್ಲದಿರುವುದು ವಿಶಾಧನೀಯವಲ್ಲವೇ.

ಚೀನಾದಲ್ಲಿದ್ದ ಭಾರತೀಯರನ್ನು ಕರೆತರಲು 5.95 ಕೋಟಿ ಹಾಗೂ ಇಟಲಿ ಮತ್ತು ಜಪಾನ್‌ನಲ್ಲಿದ್ದ 450 ಭಾರತೀಯರನ್ನು ಕರೆತರಲು 04 ಕೋಟಿಗಳಷ್ಟು ಹಣ ಖರ್ಚು ಮಾಡಿದ ಸರ್ಕಾರ, ದೇಶದ ಕಾರ್ಮಿಕರು ತಮ್ಮೂರುಗಳಿಗೆ ಹಿಂದಿರುಗಿ ಹೋಗುವ ಸಂದರ್ಭದಲ್ಲಿ ಹಣ ವಸೂಲಿ ಮಾಡಲು ಆರಂಭಿಸಿತ್ತು. ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಮೇ 01 ರಂದು ಕಾರ್ಮಿಕರ ಪ್ರಯಾಣಕ್ಕೆ ಸಾಮಾನ್ಯ ದರಕ್ಕಿಂತ ಎರಡೂವರೆ ಪಟ್ಟು ಪ್ರಯಾಣದರವನ್ನು ಹೆಚ್ಚಸಿತ್ತು. ಅದೇ ರೀತಿಯಲ್ಲಿ ಇದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಂತರ ರಾಜ್ಯಗಳ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ತಲುಪಿಸಲು ವಿಶೇಷ ರೈಲು ಸೇವ ಆರಂಭಿಸಿ, ಒಬ್ಬ ಪ್ರಯಾಣಿಕನಿಗೆ 1,000 ರೂ ಟಿಕೆಟ್‌ ದರ ವಿಧಿಸಿತ್ತು.

ಇದೇ ಸಂದರ್ಭದಲ್ಲಿ, ಕರ್ನಾಟಕದ ಕಾಂಗ್ರೆಸ್‌ ಕೆಎಸ್‌ಆರ್‌ಟಿಸಿ 01 ಕೋಟಿಯನ್ನೂ, ರಾಷ್ಟೀಯ ಕಾಂಗ್ರೆಸ್‌ ಕಾರ್ಮಿಕರ ರೈಲು ಪ್ರಯಾಣದ ಅಷ್ಟೂ ಮೊತ್ತವನ್ನೂ ಭರಸುತ್ತೇವೆಂದು ಘೋಷಿಸಿತು. ಇದರಿಂದಾಗಿ ಕಾರ್ಮಿಕರ ವಿಚಾರ ರಾಜಕೀಯ ತಿರುವ ಪಡೆದುಕೊಂಡಿದ್ದರಿಂದಾಗಿ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಮಿಕರಿಗೆ ಉಚಿತ ಪ್ರಯಾಣವನ್ನು ಘೊಷಿಸಿದವು.

                     

ಈ ವೇಳೆಗಾಗಲೇ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿದ್ದ ಸಾವಿರಾರು ಕಾರ್ಮಿಕರು ಕಷ್ಟಪಟ್ಟು, ಸಾಲ ಮಾಡಿ ಭರಿಸಿ ಹಣಹೊಂದಿಸಿ ದುಪ್ಪಟ್ಟು ಪ್ರಯಾಣದರವನ್ನು ಭರಿಸಿ ತಮ್ಮೂರುಗಳಿಗೆ ಪ್ರಯಾಣ ಹೋಗಿದ್ದರು. ಹಣಭರಿಸುವುದಾಗಿ ಘೋಷಿಸಿದ ಕಾಂಗ್ರೆಸ್‌ಗೂ ಅದನ್ನು ಘೋಷಿಸಲು ಎರಡು ದಿನ ಬೇಕಾಯಿತು.

ಅಲ್ಲದೆ, ಬಿಜೆಪಿಯ ಬಿ.ಎಲ್‌. ಸಂತೋಷ್‌ ಅವರು ಸರ್ಕಾರ ರೈಲ್ವೇ ಪ್ರಯಾಣಕ್ಕೆ ಪ್ರಯಾಣದರ ನಿಗಧಿ ಮಾಡಿಯೇ ಇರಲಿಲ್ಲ ಎಂದು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. ಆದರೆ, ಅವರದ್ದೇ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕದಲ್ಲಿ ರೈಲು ಪ್ರಯಾಣದ ದರದ ಎಸ್‌ಎಂಎಸ್‌ಗಳು ಪ್ರಯಾಣಿಕರಿಗೆ ಬಂದಿರುವುದು ಅವರಿಗೇ ತಿಳಿದಿಲ್ಲವೋ ಏನೋ ಗೊತ್ತಿಲ್ಲ.

ಕಾರ್ಮಿಕರನ್ನು ಊರುಗಳಿಗೆ ಸೇರಿಸಲು ಮೀನಾಮೇಷ ಎಳಿಸಿದ್ದ ಸರ್ಕಾರ ಇಂದು ಮತ್ತೆ ವಿದೇಶಗಳಲ್ಲಿ ಉಳಿದಿರುವ ಅನಿವಾಸಿಗಳನ್ನು ಕರೆತರಲು ನೌಕಾಪಡೆಯ ನೌಕೆಗಳನ್ನು ಕಳಿಸುತ್ತಿದೆ. ಅದಕ್ಕೂ ಕೋಟ್ಯಾಂತರ ಹಣ ವೆಚ್ಚವಾಗಲಿದೆ. ಆದರೂ ವಿದೇಶದಲ್ಲಿನ್ನ ಭಾರತೀಯ ದೇಶಕ್ಕೆ ಮರಳಿ ಬರಬೇಕು. ಅವರನ್ನು ಕರೆತರುವ ಜವಾಬ್ದಾರಿ ಕೂಡ ಸರ್ಕಾರದ್ದೇ. ಆದರೆ, ಅಂತಹ ಕಾಳಜಿ ಇದೇ ದೇಶದಲ್ಲಿ ದುಡಿಯುತ್ತಿರುವ ಕಾರ್ಮಿಕರ ಮೇಲೂ ಇರಬೇಕಲ್ಲವೇ. ಮೋದಿಯವರು ಇನ್ನಾದರೂ ಕಾರ್ಮಿಕರ ಸಂಕಷ್ಟಕ್ಕೆ ಹೆಚ್ಚು ಸ್ಪಂದಿಸಲಿ, ಕಾರ್ಮಿಕರಿಗೆ ನೆರವಾಗಬೇಕು. ಅವರ ಬದುಕನ್ನು ಮತ್ತೆ ಕಟ್ಟಿಕೊಡಬೇಕು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights