ಕುಡಿದ ಅಮಲಿನಲ್ಲಿ ಹಾವನ್ನೇ ಕಚ್ಚಿ ತಿಂದ ಭೂಪ : ವಿಡಿಯೋ ವೈರಲ್!
ಕೊರೊನಾ ಲಾಕ್ ಡೌನ್ ನಿಂದಾಗಿ ಮದ್ಯ ಸಿಗದೇ ಆತ್ಮಹತ್ಯೆಗೆ ಮುಂದಾಗುತ್ತಿದ್ದ ಜನ ಮದ್ಯ ಸಿಗಲಾರಂಭಿಸುತ್ತಿದ್ದಂತೆ ಕಂಠಪೂರ್ತಿ ಕುಡಿದು ಮೈಮೇಲೆ ಪ್ರಜ್ಞೆ ಇಲ್ಲದಂತೆ ವರ್ತಿಸುತ್ತಿರುವುದು ಸಾಕಷ್ಟು ವರದಿಯಾಗುತ್ತಿವೆ. ಇದಕ್ಕೆ ಮತ್ತೊಂದು ಭಯಾನ ಸಾಕ್ಷಿ ಎಂದರೆ ಕೋಲಾರದಲ್ಲಿ ಮದ್ಯವ್ಯಸನಿಯೊಬ್ಬ ಕುಡಿದ ಅಮಲಿನಲ್ಲಿ ಹಾವನ್ನೇ ಕಚ್ಚಿ ತಿಂದ ಘಟನೆ ನಡೆದಿದೆ.
ಹೌದು… ಆಶ್ವರ್ಯ ಅನಿಸಿದ್ರೂ ಇದು ನಿಜ. ಲಾಕ್ ಡೌನ್ ಹಿನ್ನಲೆ ಎಣ್ಣೆ ಸಿಗದೆ ಕಂಗಾಲಾಗಿದ್ದ ಮದ್ಯಪ್ರಿಯರು ನೆನ್ನೆಯಿಂದ ಸಖತ್ ಜೋಷ್ ನಲ್ಲಿದ್ದಾರೆ. ಕುಡಿದ ಅಮಲಿನಲ್ಲಿ ರಸ್ತೆ ಮೇಲೆ ಮಲಗುವುದು, ಮೈಮೇಲಿನ ಬಟ್ಟೆ ಕಳಚುವುದು, ಜಗಳವಾಡುವುದು, ದೇವರ ಮುಂದೆ ಮದ್ಯವನ್ನಿಟ್ಟು ಪೂಜೆ ಮಾಡುವುದು ಹೀಗೆ ಹೇಳ್ತಾ ಹೋದ್ರೆ ಒಂದಾ..? ಎರಡಾ..? ಆದರೆ ಇಲ್ಲೊಬ್ಬ ಆಸಾಮಿ ಕುಡಿದ ಅಮಲಿನಲ್ಲಿ ಕೇರೆ ಹಾವನ್ನೇ ಕಚ್ಚಿ ತಿಂದಿದ್ದಾನೆ. ಈ ವಿಡಿಯೋ ಇದೀಗ ರಾಜ್ಯಾದ್ಯಂತ ಸಾಕಷ್ಟು ವೈರಲ್ ಆಗುತ್ತಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮುಷ್ಟೂರಿನಲ್ಲಿ ಘಟನೆ ನಡೆದಿದ್ದು ಗ್ರಾಮದಲ್ಲಿ ಕುಮಾರ್ ಎಂಬ ವ್ಯಕ್ತಿ ಕುಡಿದ ನಶೆಯಲ್ಲಿ ಹಾವನ್ನು ಕಚ್ಚಿ ಕೊಂದಿರುವ ವಿಡಿಯೊ ಭಾರೀ ವೈರಲ್ ಆಗುತ್ತಿದೆ. ಸಾರಾಯಿ ನಶೆಯಲ್ಲಿ ತೇಲಿದ ಕುಮಾರ್ ಎಂಬ ವ್ಯಕ್ತಿ ಬಾಯಲ್ಲಿ ಮದ್ಯದ ಬಾಟಲ್ ಹಿಡಿದುಕೊಂಡು ಗ್ರಾಮದ ಸುತ್ತಾ ಒಡಾಡಿದ್ದಾನೆ. ಈ ವೇಳೆ ರಸ್ತೆ ಬದಿಯಲ್ಲಿ ಹಾವು ಹೋಗುತ್ತಿರುವಾಗ ಅದನ್ನು ಹಿಡಿದು ಮೈಮೇಲೆ ಹಾರದಂತೆ ಹಾಕಿಕೊಂಡಿದ್ದಾನೆ.
ನಂತರ ಹಾವನ್ನ ಬಾಯಿಂದ ಕಚ್ಚಿ ಮಾಂಸವನ್ನ ಕಡಿದು ಬಿಸಾಡಿ ನಂತರ ಹಾವನ್ನ ನೆತ್ತಿಗೆ ಸುತ್ತುಹಾಕಿಕೊಂಡು ಊರಿನ ತುಂಬಾ ಭಾರೀ ಅವಾಂತರ ಸೃಷ್ಟಿಸಿದ್ದಾನೆ. ಆದರೆ, ಈ ವಿಡಿಯೊ ವೈರಲ್ ಆಗಿರುವ ಮಾಹಿತಿ ತಿಳಿದ ಕುಮಾರ್ ನಿನ್ನೆ ಮದ್ಯಾಹ್ನದ ನಂತರ ಹೊರಗೆ ಬಾರದೆ ಮನೆಯಲ್ಲೇ ಅವಿತು ಕುಳಿತಿದ್ದಾನೆ ಎನ್ನಲಾಗಿದೆ.

