ಆರ್‌‌ಸಿಇಪಿ ಒಪ್ಪಂದದಲ್ಲಿ ಮತ್ತೆ ಭಾಗವಹಿಸುತ್ತ ಮೋದಿ ಸರ್ಕಾರ??

2019ನೇ ವರ್ಷದ ನವೆಂಬರ್ ತಿಂಗಳಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (RCEP) ಮಾತುಕತೆಗಳಿಂದ ಹಿಂದೆ ಸರಿದಿದ್ದ ಭಾರತ ಇದೀಗ RCEP ಸದಸ್ಯ ರಾಷ್ಟ್ರಗಳು ಕಳುಹಿಸಿರುವ ಹೊಸ ಪ್ರಸ್ತಾಪವನ್ನು ಪರಿಗಣಿಸುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಏಪ್ರಿಲ್ 20 ರಿಂದ 24ರವರೆಗೆ ಜರುಗಿದ RCEP ಸಧಸ್ಯ ರಾಷ್ಟ್ರಗಳ ವ್ಯಾಪಾರ ಸಮಾಲೋಚನಾ ಸಮಿತಿಯು ತನ್ನ ಸಭೆಯಲ್ಲಿ ನಿರ್ಧಾರವಾದ ಬಳಿಕ ಭಾರತವನ್ನು ಒಪ್ಪಂದದೆಡಿಗಿನ ಮಾತುಕತೆಗೆ ಮತ್ತೆ ಮರಳಿ ಕರೆತರುವ ನಿಟ್ಟಿನಲ್ಲಿ ಭಾರತ ಸರ್ಕಾರಕ್ಕೆ ಪತ್ರವನ್ನು ರವಾನಿಸಿದೆ.

ಪ್ರಸ್ತಾಪಿತ RCEP ಒಪ್ಪಂದವನ್ನು ಅಂತಿಮಗೊಳಿಸಲು ಪ್ರಯತ್ನಿಸುತ್ತಿರುವ ಭಾರತ ಹೊರತುಪಡಿಸಿದ ಹದಿನೈದು ಸದಸ್ಯ ದೇಶಗಳು (ದಕ್ಷಿಣ ಪೂರ್ವ ಏಷ್ಯಾದ 10 ರಾಷ್ಟ್ರಗಳು (ಆಸಿಯಾನ್) ಅಂದರೆ ಚೀನಾ, ಆಸ್ಪ್ರೇಲಿಯಾ, ನ್ಯೂಜಿಲೆಂಡ್, ಜಪಾನ್ ಮತ್ತು ದಕ್ಷಿಣ ಕೊರಿಯಾ ಸೇರಿದಂತೆ 15 ರಾಷ್ಟ್ರಗಳು) ಭಾರತದ ಮುಂದೆ ಮಾರುಕಟ್ಟೆ ತೆರೆಯುವ (ಮಾರ್ಕೆಟ್ ಆಕ್ಸೆಸ್) ಕುರಿತ ನಿಯಮಾವಳಿಗಳನ್ನು ಮರುಪರಿಶೀಲಿಸುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾವೆ ಮತ್ತು ಈ ಬಗ್ಗೆ ಮೇ 15 ರೊಳಗೆ ಭಾರತಕ್ಕೆ ಪ್ರತಿಕ್ರಿಯಿಸಲು ಕೇಳಿಕೊಂಡಿವೆ ಎಂದು ಇಂಡಿಯಾ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಒಂದು ವೇಳೆ ಭಾರತವು ಒಪ್ಪಂದದ ಕುರಿತ ಮಾತುಕತೆಗೆ ಮರಳದ್ದಿದ್ದರು ಕೂಡ ಈ 15 ದೇಶಗಳು 2020 ರ ನವೆಂಬರ್-ಡಿಸೆಂಬರ್ ವೇಳೆಗೆ ಸದರಿ ಒಪ್ಪಂದವನ್ನು ಅಂತಿಮಗೊಳಿಸಲು ನಿರ್ಧರಿಸಿವೆ.

ಈಗಾಗಲೇ ಭಾರತವು ಚೀನಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಹೊರತುಪಡಿಸಿ ಇತರೆ ಎಲ್ಲಾ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ.

ಈಗ ಹೊಸದಾಗಿ ನೀಡಿರುವ ಪ್ರಸ್ತಾಪವು ಭಾರತದ ಆದ್ಯತೆಯಂತೆ ಮಾರುಕಟ್ಟೆಗಳಿಗೆ ಪ್ರವೇಶ ಸಂಬಂಧದ ಸುಂಕಗಳನ್ನು ನಿರ್ಧರಿಸುವ ವಿಚಾರಗಳಲ್ಲಿ 2014ರ ಮೂಲ ದರಗಳ ಬದಲಾಗಿ “ಮೋಸ್ಟ ಫೆವರ್ಡ್ ನೇಷನ್- ಎಮ್ಎಫ್ಎನ್”(most favoured nation- ಪರಸ್ಪರ ವ್ಯಾಪಾರಗಳಲ್ಲಿ ಮೊದಲ ಆದ್ಯತೆ ಹೊಂದಿದ ರಾಷ್ಟ್ರ) ಸುಂಕ ದರಗಳನ್ನು ಬಳಸುವ ಮತ್ತು ಆಮದುಗಳ ಹೆಚ್ಚಳದ ವಿರುದ್ಧ ಸುರಕ್ಷತಾ ಕಾರ್ಯವಿಧಾನ ಬಳಸುವ ನಿಟ್ಟಿನಲ್ಲಿ ಭಾರತದ ಬೇಡಿಕೆಗಳನ್ವಯ ಮನ್ನಣ್ಣೆ ನೀಡಿವೆ.

ಆದರೂ ಉಳಿದ 15 ದೇಶಗಳು ಮಾರ್ಕೆಟ್ ಆಕ್ಸೆಸ್ ಮತ್ತು ಸುರಕ್ಷತಾ ಕಾರ್ಯವಿಧಾನ ಎರಡನ್ನೂ ಕೆಲವು ನಿರ್ದಿಷ್ಟ ವಸ್ತುಗಳಿಗೆ ಸೀಮಿತ ಮಾಡ ಬಯಸುತ್ತಿವೆ; ಹಾಗೂ ಮೂರನೇ ಆರ್ಸಿಇಪಿ ದೇಶದ ಮೂಲಕ ಚೀನೀ ಉತ್ಪನ್ನಗಳು ಪ್ರವೇಶಿಸುವುದನ್ನು ನಿಲ್ಲಿಸುವ ಗುರಿಯಿಂದ ಭಾರತ ಬೇಡಿಕೆಯಿಟ್ಟಿದ್ದ ರೂಲ್ಸ್ ಆಫ್ ಆರಿಜಿನ್ (ಸರಕು ತಯಾರಾಗುವ ಮೂಲ ನೆಲೆ) ಕುರಿತ ನಿಯಮಗಳನ್ನು ಎಲ್ಲಾ 15 ದೇಶಗಳು ಕಡೆಗಣಿಸಿರುವುದು ಕಂಡು ಬರುತ್ತಿದೆ ಎಂದು ತಜ್ಞರು ಹೇಳಿದ್ದಾರೆ.

ಇತರೆ ದೇಶಗಳು ಸದ್ಯಕ್ಕೆ ಭಾರತಕ್ಕೆ ಕಳಿಸಿರುವ ಪ್ರಸ್ತಾಪದಲ್ಲಿ ಉಲ್ಲೇಖಿಸಿರುವಂತೆ “ಭಾರತದ ಆದ್ಯತೆಯಂತೆ ನವೀಕರಿಸಿದ ಮಾರುಕಟ್ಟೆ ಪ್ರವೇಶದ ಸಂಬಂಧಿತವಾಗಿ ಸೀಮಿತ ಸಂಖ್ಯೆಯ ಅತಿಮುಖ್ಯ ಉತ್ಪನ್ನಗಳ ಮೇಲೆ 2019 ಎಮ್ಎಫ್ಎನ್ ಸುಂಕಗಳನ್ನು ಬಳಸಿಕೊಂಡು ಭಾರತ ಆರ್ಸಿಇಪಿ ದೇಶಗಳೊಂದಿಗೆ ದ್ವಿಪಕ್ಷೀಯವಾಗಿ ಮಾತುಕತೆ ನಡೆಸುವುದನ್ನು ನಾವು ಸ್ವಾಗತಿಸುತ್ತೇವೆ …ಮಾರ್ಕೆಟ್ ಆಕ್ಸೆಸ್ (ಮಾರುಕಟ್ಟೆ ಪ್ರವೇಶ) ಕುರಿತಾದ ವಿಚಾರಗಳನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಬಗೆಹರಿಸಬಹುದು ಮತ್ತು ಅದು ಸಮತೋಲನದಲ್ಲಿ ಉಳಿಯುತ್ತದೆ ಎನ್ನುವ ತಿಳುವಳಿಕೆಯ ಮೇಲೆ ಈ ಪ್ರಸ್ತಾಪವನ್ನು ಮುಂದಿಡುತ್ತಿದ್ದೇವೆ, ಭಾರತದ ಟ್ಯಾರಿಫ್ ರಿಸ್ಟ್ರೀಕ್ಷನ್ಸ್ (ಸುಂಕ ಬದ್ಧತೆಗಳು) ಎಲ್ಲರಿಗೂ ಸ್ವೀಕಾರಾರ್ಹವಾಗಿರುತ್ತದೆ ” ಎಂದು ತಿಳಿಸಿವೆ.

ಆರ್ಸಿಇಪಿ ರಾಷ್ಟ್ರಗಳೊಂದಿಗಿನ ಭಾರತದ ವ್ಯಾಪಾರ ಕೊರತೆಯು US $ 105 ಬಿಲಿಯನ್ ಇದೆ. ಭಾರತದ ಒಟ್ಟು ವ್ಯಾಪಾರ ಕೊರತೆಯಲ್ಲಿ ಚೀನಾದ ಪಾಲು ಶೇಕಡಾ 50 ರಷ್ಟಿದೆ. ಚೀನಾದಿಂದ ತಯಾರಿಸಿದ ಸರಕುಗಳು ಹಾಗು ನ್ಯೂಜಿಲೆಂಡಿನ ಡೈರಿ ಉತ್ಪನ್ನಗಳು ಭಾರತದ ಮಾರುಕಟ್ಟೆ ಪ್ರವೇಶ ಮಾಡಿದರೆ ಪರಿಸ್ಥಿತಿ ಮಾರಾಕವಾಗಲಿದೆ ಎನ್ನುವ ಅಳಲು ಭಾರತಕ್ಕಿದೆ. ಈ ಕಾರಣಗಳಿಂದ ನವೆಂಬರ್ 2019 ರಲ್ಲಿ ಬ್ಯಾಂಕಾಕ್ನಲ್ಲಿ ನಡೆದ ಸಭೆಯಲ್ಲಿ ಭಾರತವು ಆರ್ಸಿಇಪಿ ಮಾತುಕತೆಯಿಂದ ಹಿಂದೆ ಸರಿದಿತ್ತು.

ಫೆಬ್ರವರಿ 1, 2020 ರಂದು, ಭಾರತವು ತನ್ನ 2020-21ರ ರಾಷ್ಟ್ರೀಯ ಆಯ-ವ್ಯಯ ಮಂಡನೆಯ ಭಾಗವಾಗಿ ಆಮದು ಸರಕುಗಳ ಮೇಲೆ ಗಮನ ಸೆಳೆಯುವಷ್ಟು ಸುಂಕವನ್ನು ಹೆಚ್ಚಿಸಿದೆ, ಇದು ಪ್ರಧಾನಿ ನರೇಂದ್ರ ಮೋದಿಯವರು “ಮೇಕ್ ಇನ್ ಇಂಡಿಯಾ” ಕಾರ್ಯಕ್ರಮವನ್ನು ಉತ್ತೇಜಿಸಲು ಮಾಡಿದ್ದೆನ್ನುವ ವರದಿಗಳಿವೆ. ಭಾರತ ಘೋಷಿಸಿರುವ ಈ ಸುಂಕ ಹೆಚ್ಚಳವು ಆರ್ಸಿಇಪಿ ದೇಶಗಳಿಗೆ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಷ್ಟವಾಗುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ .

ದೇಶದ ವ್ಯಾಪಾರಿಗಳು ಹಾಗೂ ಸ್ಥಳೀಯ ಕೈಗಾರಿಕಾ ಗುಂಪುಗಳ ವಿರೋಧದ ಜೊತೆಗೆ, ಭಾರತೀಯ ನಾಗರಿಕ ಸಮಾಜದಿಂದ, ವಿಶೇಷವಾಗಿ ಮಹಿಳೆಯರು, ಸಣ್ಣ ರೈತರು ಮತ್ತು ಗ್ರಾಮೀಣ ಸಮುದಾಯಗಳಿಂದ ಆರ್ಸಿಇಪಿಗೆ ವ್ಯಾಪಕವಾದ ವಿರೋಧವಿದೆ.

ಇವರೆಲ್ಲ ಸರಕುಗಳ ಮೇಲಿನ ಸುಂಕದ ಹೊರತಾಗಿ ಎದುರಾಗುವ ಇತರೆ ಸಂಕಷ್ಟಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ಬೀಜಗಳು ಮತ್ತು ಸಸ್ಯಗಳ ಪೇಟೆಂಟ್, ಔಷಧಿಗಳ ಮೇಲಿನ ಹೆಚ್ಚಿದ ಏಕಸ್ವಾಮ್ಯ, ಇ-ಕಾಮರ್ಸ್ ಅನಿಯಂತ್ರಣ, ಸಾರ್ವಜನಿಕ ಸೇವೆಗಳ ಖಾಸಗೀಕರಣ ಮತ್ತು ಹೂಡಿಕೆದಾರ-ರಾಜ್ಯ ವಿವಾದ ಇತ್ಯರ್ಥದ ಕುರಿತು ಈಗಾಗಲೇ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಜೀವನಕ್ಕಾಗಿ ಕೃಷಿಯನ್ನು ಅವಲಂಭಿಸಿರುವ ರೈತಾಪಿ ವರ್ಗ ಅತೀವ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

“ಭಾರತವು RCEP ಸದಸ್ಯರಿಂದ ಪತ್ರವೊಂದನ್ನು ಸ್ವೀಕರಿಸಿದ್ದು, ಅದರಲ್ಲಿ ಭಾರತವನ್ನು ಮಾತುಕತೆಗಳಿಗೆ ಮರಳಿ ಸೇರಲು ಕೋರಿದ್ದು ಹಾಗೂ ಈ ಹಿಂದೆ ಉದ್ಬವಿಸಿದ್ದ ಹಲವು ಆತಂಕಗಳನ್ನು ಬಗೆಹರಿಸುವ ಸಲುವಾಗಿ ಕೆಲವು ಷರತ್ತುಗಳಿಗೆ ಬದ್ಧವಾಗಿರುವೆವು ಎಂದು RCEP ಸಧಸ್ಯರು ತಿಳಿಸಿದ್ದಾರೆ. ವಾಣಿಜ್ಯ ಸಚಿವಾಲಯ ಮತ್ತು ವಿದೇಶಾಂಗ ಸಚಿವಾಲಯವು ಇದೀಗ, ಪತ್ರವನ್ನು ಪರಿಶೀಲಿಸುತ್ತಿದೆ ಹಾಗೂ ಭಾರತದ ಮುಂದಿನ ಕ್ರಮ ಏನು ಎನ್ನುವುದನ್ನು ಚರ್ಚಿಸುತ್ತಿವೆ ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.”

ಆದರೆ ಸದ್ಯಕ್ಕೆ ತಲೆದೋರಿರುವ ಆರ್ಥಿಕ ಸಮಸ್ಯೆಗಳ ಕಾರಣ ಸರಕಾರ ಮಾತುಕತೆಗಳಿಗೆ ಮರಳುವುದಿಲ್ಲ ಎನ್ನುವ ಆಶಯವಿದ್ದು ಈ ನಡುವೆ ಯುಎಸ್ ಜೊತೆಗೆ ಕೂಡ ವ್ಯಾಪಾರ ಮಾತುಕತೆಗಳನ್ನು ಭಾರತ ನಡೆಸುತ್ತಿರುವ ಸುದ್ದಿಗಳಿವೆ.

ಪ್ರಜಾಪ್ರಭುತ್ವ ದೇಶದಲ್ಲಿ ಸರಕಾರ ನೀತಿ-ನಿರ್ಧಾರಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬರುತ್ತದೆಯೇ ಎಂದು ಕಾದು ನೋಡುವ ಸಮಯ ಇದು, ಭಾರತ ಸರಕಾರ ಆರ್ ಸಿ ಇ ಪಿ ಒಪ್ಪಂದದ ಮಾತುಕತೆಗಳಿಗೆ ಮರಳಿದ್ದೇ ಆದರೆ ಕಳೆದ ನವೆಂಬರಿನಲ್ಲಿ ನಡೆದ ಸಮಗ್ರ ಆರ್ಥಿಕ ಸಹಭಾಗಿತ್ವ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಾರದು ಎಂದು ಆಗ್ರಹಿಸಿ ದೇಶಾದ್ಯಂತ ರೈತರು ಬೀದಿಗಿಳಿದು ನಡೆಸಿದ ಹೋರಾಟಗಳು ಮತ್ತೆ ಮರುಕಳಿಸುವುದು ನಿಶ್ಚಿತವಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights