ಒತ್ತಡಕ್ಕೆ ಮಣಿದ ಸರ್ಕಾರ: ನಾಳೆಯಿಂದ ರೈಲುಗಳ ಪುನರಾರಾಂಭ
ಬಿಲ್ಡರ್ಗಳ ಹಿತಾಸಕ್ತಿ ಕಾಪಾಡಲು ಏಕಾಏಕಿ ಅಂತರಾಜ್ಯಗಳಿಗೆ ಹೊರಡಬೇಕಿದ್ದ ಕಾರ್ಮಿಕರ ರೈಲು ಸೇವೆಗಳನ್ನು ರದ್ದುಗೊಳಿಸಿದ್ದ ಕರ್ನಾಟಕ ಸರ್ಕಾರ ಕಾರ್ಮಿಕರ ಮತ್ತು ಸಾರ್ವಜನಿಕರ ಒತ್ತಡಕ್ಕೆ ಮಣಿದು ನಾಳೆಯಿಂದ ಮತ್ತೆ ರೈಲು ಸೇವೆ ಆರಂಭಿಸಿದೆ.
ಮುಖ್ಯಮಂತ್ರಿ ಯಡಿಯೂರಪ್ಪನವರು ಅಧಿಕಾರಗಳಿಗೆ ಈ ಸೂಚನೆ ನೀಡಿದ್ದು ಶುಕ್ರವಾರದಿಂದ ಮೇ 15ರವರೆಗೆ ಒಂದು ವಾರಗಳ ಕಾಲ ಪ್ರತಿದಿನ ರೈಲುಗಳು ಹೊರಡಲಿವೆ. ಜಾರ್ಖಂಡ್, ಉತ್ತರ ಪ್ರದೇಶ, ಮಣಿಪುರ, ತ್ರಿಪುರ, ಪಶ್ಚಿಮ ಬಂಗಾಳ, ಒಡಿಸ್ಸಾ, ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳಿಗೆ ಪ್ರತಿದಿನ ಎರಡು ವಿಶೇಷ ರೈಲುಗಳು ಹೊರಡಲಿವೆ ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.


ಸೋಮವಾರ ಆರಂಭವಾಗಿದ್ದ ರೈಲುಸೇವೆಗಳು ಮಂಗಳವಾರ ರಾತ್ರಿಗೆ ಕೊನೆಗೊಂಡಿದ್ದವು. ಅಂದು ಬುಧವಾರ ಬೆಂಗಳೂರಿನಿಂದ ಧಾನ್ಪುರ ಮತ್ತು ಬಿಹಾರಕ್ಕೆ ಹೊರಡಬೇಕಿದ್ದ ರೈಲುಗಳ ಸಂಚಾರವನ್ನು ರದ್ದುಗೊಳಿಸುವಂತೆ ಆದೇಶಿಸಿ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಸುತ್ತೋಲೆ ಹೊರಡಿಸಿದ್ದರು.

