ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,45,380ಕ್ಕೇರಿಕೆ : 4167 ಜನ ಬಲಿ!
ಕೊರೊನಾ ಲಾಕ್ ಡೌನ್ 4.0 ಹಂತ ಹಂತವಾಗಿ ಸಡಿಲಗೊಳ್ಳುತ್ತಿದ್ದಂತೆ, ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಏರಿಕೆಯಾಗುತ್ತಲೇ ಇದೆ.
ಹೌದು… ದಿನ ದಿಂದ ದಿನಕ್ಕೆ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ ದೇಶದಲ್ಲಿ ಕೊರೊನಾ ವೈರಸ್ ವೇಗವಾಗಿ ವ್ಯಾಪಿಸುತ್ತಿದ್ದು, 6,977 ಹೊಸ ಪ್ರಕರಣಗಳು ದಾಖಲಾಗಿದ್ದು, 154 ಮಂದಿಯನ್ನು ಬಲಿಯಾಗಿದ್ದರು. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,38,845, ಸಾವಿನ ಸಂಖ್ಯೆ 4021ಕ್ಕೆ ಏರಿಕೆಯಾಗಿತ್ತು. ಇವರಲ್ಲಿ 57720 ಮಂದಿ ಗುಣಮುಖರಾಗಿದ್ದರು.
ಆದರೆ ಇಂದು ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 1,45,380ಕ್ಕೇರಿದ್ದು ಅವರಲ್ಲಿ 80,722 ಸಕ್ರಿಯ ಕೇಸುಗಳು ಮತ್ತು 60 ಸಾವಿರದ 490 ಗುಣಮುಖ ಹೊಂದಿದ/ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಕೇಸುಗಳಾಗಿವೆ. ಇದುವರೆಗೆ ಕೊರೋನಾ ಸೋಂಕಿನಿಂದ ದೇಶದಲ್ಲಿ 4 ಸಾವಿರದ 167 ಸಾವು ಸಂಭವಿಸಿದೆ.ಕಳೆದ 24 ಗಂಟೆಗಳಲ್ಲಿ 146 ಮಂದಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, 6 ಸಾವಿರದ 535 ಹೊಸ ಕೇಸುಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಮಹಾರಾಷ್ಟ್ರದ ಬಳಿಕ ತಮಿಳುನಾಡು ನಂತರ ದೆಹಲಿ, ಗುಜರಾತ್, ಪಶ್ಚಿಮ ಬಂಗಾಳ, ಮತ್ತು ರಾಜಸ್ಥಾನ ಕ್ರಮವಾಗಿ ಸೋಂಕಿತರ ಸಂಖ್ಯೆಯಲ್ಲಿ ಸ್ಥಾನ ಪಡೆದುಕೊಂಡಿವೆ. ಎರಡು ತಿಂಗಳ ನಂತರ ದೇಶೀಯ ವಿಮಾನಗಳ ಹಾರಾಟ ಪ್ರಾರಂಭವಾಗಿದ್ದು ಈ ಮಧ್ಯೆ ಕೊರೋನಾ ಸೋಂಕಿತರ ಸಂಖ್ಯೆ ಕೂಡ ದೇಶದಲ್ಲಿ ಅಧಿಕವಾಗುತ್ತಿದೆ.

