ಸೀತೆಯ ವನವಾಸ ಮುಗಿದರೂ ಮುಗಿಯುತ್ತಿಲ್ಲ ಬಡಜನರ ವನವಾಸ; ಸೂರಿಗಾಗಿ ಕಾದುಕುಳಿತವರ ಗೋಳು ತೀರುತ್ತಿಲ್ಲ

ಬಡಜನರಿಗಿಂದು ಸುವರ್ಣಾವಕಾಶ, ಕೈಗೆಟುವ ದರದಲ್ಲಿ ಮನೆಗಳು ಲಭ್ಯ, ಮೊದಲು ಬಂದವರಿಗೆ ಆದ್ಯತೆ, ಇಂದೇ ಅರ್ಜಿ ಅಲ್ಲಿಸಿ ಎಂಬಂತೆ ಜಾಹಿರಾತು ರೀತಿಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರ ಕೈಗೆಟುಕುವ ದರದಲ್ಲಿ ಗೃಹ ನಿರ್ಮಾಣ ಯೋಜನೆಯನ್ನು 2006ರಲ್ಲಿ ಘೋಷಿಸಿತ್ತು.

ಅಂದಿನ ಮೈತ್ರಿ ಸರ್ಕಾರ ನೀಡಿದ ಭರವಸೆ ಫಲಿಸುವುದು. ಒಂದು ಸೂರು ಕಟ್ಟಿಕೊಳ್ಳಲು ಕನಸು ಕಂಡಿದ್ದ ನಮ್ಮ ಕನಸು ಈ ಮೂಲಕ ನನಸಾಗುವುದು. ಅಂತೂ ನಾವೂ ನಮ್ಮದೂ ಅಂತ ಒಂದು ಮನೆ ಮಾಡಿಕೊಳ್ಳಬಹುದು ಎಂಬ ತಮ್ಮ ಕನಸನ್ನ ಗರಿ ಬಿಚ್ಚಿ ಹಾರಿಸಿದವರು ಸಾವಿರಾರು ಜನರು.

ಬಿಜೆಪಿ-ಜೆಡಿಎಸ್‌ ಮೈತ್ರಿ ಸರ್ಕಾರದಲ್ಲಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಘೋಷಿಸಿದ್ದ ಈ ಯೋಜನೆಗೆ ಅರ್ಜಿ ಸಲ್ಲಿಸಿ, ಸತತ 14 ವರ್ಷಗಳಿಂದ ರಾಮನಗರದಲ್ಲಿ ಕಾದು ಕುಳಿತಿರುವವರ ಸಂಖ್ಯೆ ಬರೋಬ್ಬರಿ 1,400 ಮಂದಿ. ಅವರೆಲ್ಲರ ಕನಸು ರಾಮನಗರದ ಅಂಚಿನಲ್ಲಿಯೇ ಕಾದು ಕುಳಿತಿದೆ.

2006ರಲ್ಲಿ ತಮ್ಮ ಸ್ವಕ್ಷೇತ್ರ ರಾಮನಗರದಲ್ಲಿ ಬಡವರಿಗೆ ಸೂರು ಒದಗಿಸಲು ಆರಂಭಿಸಿದ್ದ ಗೃಹ ಯೋಜನೆಯಲ್ಲಿ ಸುಮಾರು 240 ಫ್ಲಾಟ್‌ಗಳನ್ನು ನಿರ್ಮಿಸಿ, 1,430 ಜನರಿಗೆ ಫಲಾನುಭ ನೀಡಲು ಉದ್ದೇಶಿಸಿದ್ದರು. ಪ್ರತಿ ಫ್ಲಾಟ್‌ಗಳಿಗೂ 1,35,000 ನಿರ್ಮಾಣ ವೆಚ್ಚವನ್ನು ಅಂದಾಜಿಸಲಾಗಿದ್ದು, ಎಸ್‌.ಸಿ ಫಲಾನುಭವಿಗಳು ಒಂದು ಫ್ಲಾಟ್‌ಗಾಗಿ 13,000 ಹಾಗೂ ಒಬಿಸಿ ಫಲಾನುಭವಿಗಳು 15,000ವನ್ನು ಭರಿಸಬೇಕು. 5,100 ರೂಗಳ ಆರಂಭಿಕ ಠೇವಣಿಯನ್ನು ಕಟ್ಟಿಸಿಕೊಂಡು ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿತ್ತು.

ಇದಕ್ಕಾಗಿ ರಾಮನಗರ ಜಿಲ್ಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ಒಂದು ಕಿ.ಮೀ ದೂರದಲ್ಲಿರುವ ದೊಡ್ಡಮಣ್ಣಿನ ಗುಡ್ಡೆಯಲ್ಲಿ 8 ಎಕರೆ ಜಾಗವನ್ನು ಗುರುತಿಸಲಾಗಿತ್ತು. ಆ ಜಾಗವು ಜಾನಪದ ಲೋಕದ ಸಮೀಪದಲ್ಲಿದೆ. 20*20 ಚದರಡಿ ವಿಸ್ತೀರ್ಣದ 1ಬಿಎಚ್‌ಕೆ (ಒಂದು ಬೆಡ್‌ರೂಂ, ಹಾಲ್, ಕಿಚನ್) ಹಾಗೂ ಶೌಚಾಲಯವನ್ನು ಹೊಂದಿರುವ 240 ಫ್ಲಾಟ್‌ಗಳನ್ನು 20 ಬ್ಲಾಕ್‌ಗಳಲ್ಲಿ ನಿರ್ಮಿಸಲಾಗಿತ್ತು. ಪ್ರತಿ ಬ್ಲಾಕ್ ನಲ್ಲಿ 8 ಮನೆಗಳಿವೆ.ಈ ಪ್ರದೇಶದಕ್ಕೆ  ಸಂಪರ್ಕ ರಸ್ತೆಯ ಡಾಂಬರು ಮತ್ತು ಬೀದಿ ದೀಪಗಳನ್ನು ಮಾಡಿಕೊಡಲಾಗಿದೆ. ಆದರೆ, ಇನ್ನೂ ಮನೆಗಳ ಹಂಚಿಕೆಯಾಗಿಲ್ಲ.

ಅಲ್ಲದೆ, ಈ ಮನೆಗಳು ಕಳಪೆ ಕಾಮಗಾರಿಗೆ ಕನ್ನಡಿ ಹಿಡಿದಿದ್ದು, ಈಗಾಗಲೇ ಈ ಮನೆಗಳ ಕಿಟಕಿ ಬಾಗಿಲುಗಳು ಮುರಿದು ಹೋಗಿವೆ. ಗೋಡೆಗಳಲ್ಲಿ ಬಿರುಕು ಬಿಟ್ಟಿದೆ. ಛಾವಣಿ ಸೋರುವಂತಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಅವುಗಳಲ್ಲಿ ಧೂಳು ತುಂಬಿಕೊಂಡಿವೆ. ನೀರನ್ನು ಸಂಗ್ರಹಿಸುವ ಸಂಪ್‌ಗಳ ಮುಚ್ಚಳಗಳನ್ನು ಕದ್ದು ಹೊಯ್ಯಲಾಗಿದೆ. ಇದು ಅನೇಕ ಅಕ್ರಮ ಚಟುವಟಿಕೆಗಳ ತಾಣವಾಗಿದೆ.

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಗೃಹ ನಿರ್ಮಾಣದ ಉಸ್ತುವಾರಿಯನ್ನು  ಕಂದಾಯ ಇಲಾಖೆಗೆ ವಹಿಸಿದ್ದರು. ಮನೆ ನಿರ್ಮಾಣ ಕೆಲಸವನ್ನು ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಗೆ ವಹಿಸಲಾಗಿತ್ತು. ಆದರೆ, ಆ ಅರಣ್ಯ ಇಲಾಖೆಗೆ ಸೇರಿದ್ದು ಎಮದು ಅರಣ್ಯ ಇಲಾಖೆ ತಕರಾರು ಮಾಡಿದ್ದರಿಂದಾಗಿ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತುಹೋಗಿತ್ತು. ಇತ್ತೀಚೆಗೆ ಕಂದಾಯ ಇಲಾಖೆ ಬೇರೆ ಜಾಗವನ್ನು ಅರಣ್ಯ ಇಲಾಖೆಗೆ ನೀಡಲು ನಿರ್ಧರಿಸಿದ ನಂತರ ಕಾಮಗಾರಿ ಮುಂದುವರೆಯುತ್ತಿದೆ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

14 years on, crushed dreams, cracked houses- The New Indian Express

ರಾಮಾಯಣದ ಸೀತೆ 14 ವರ್ಷ ವನವಾಸ ಮಾಡಿದ್ದಂತೆ, ರಾಮನಗರದ ಜನರು 14 ವರ್ಷಗಳಿಂದ ಮನೆಗಳಿಗಾಗಿ ಕಾದು ಕುಳಿತಿದ್ದಾರೆ. ಆದರೆ, ಇನ್ನೂ ಮನೆಗಳು ಮಾತ್ರ ಜನರಿಗೆ ದೊರೆತಿಲ್ಲ.

ಜನರಿಗೆ ನೀಡದೇ ಉಳಿದಿರುವುದು ಅಂದರೆ ನಿರ್ಮಾಣವಾಗಿರುವುದು 240 ಮನೆಗಳು ಮಾತ್ರ. ಆದರೆ, ಅರ್ಜಿ ಸಲ್ಲಿಸಿರುವವರು 1,400 ಜನರು. ಹಾಗಾಗಿ ಫಲಾನುಭವಿಗಳನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಲಾಗುವುದು ಎಂದು ಹೇಳಾಗಿದೆ. ಪ್ರಸ್ತುವ ರಾಮನಗರದ ಶಾಸಕಿ ಅನಿತಾ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ.

ಲಾಟರಿ ಮೂಲಕ ಮನೆ ಸಿಗದವರಿಗೆ ಹಣ ಹಿಂತಿರುಗಿಸಲಾಗುತ್ತದೆಯೇ ಎಂದು ಕೇಳಿದಾಗ ಬೇರೆ ಯೋಜನೆಗಳ ಅಡಿಯಲ್ಲಿ ಮನೆ ನಿರ್ಮಿಸಲಾಗುವುದು, ಇಲ್ಲಿ ಸಿಗದವರಿಗೆ ಆ ಯೋಜನೆಯ ಅಡಿಯಲ್ಲಿ ಮನೆಗಳನ್ನು ಕೊಡಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಆದರೆ, ಸದ್ಯ ಯಾವುದೇ ಹೊಸ ಯೋಜನೆಗಳು ಕಾಣಸಿಗುತ್ತಿಲ್ಲ. ಘೋಷಣೆಯಾಗಿದ್ದ ಯೋಜನೆಯ ಅಡಿಯಲ್ಲಿ ಮನೆ ಪಡೆಯುವುದಕ್ಕಾಗಿಯೇ 14 ವರ್ಷ ಕಾದಿದ್ದ ಜನರು, ಮತ್ತಾವುದೋ ಯೋಜನೆಯ ಅಡಿಯಲ್ಲಿ ಮನೆ ಪಡೆಯಲು ಇನ್ನೂ ಎಷ್ಟು ವರ್ಷಗಳು ಕಾಯಬೇಕಾಗುತ್ತದೆಯೇ ಎಂಬುದೇ ಮುಂದಿರುವ ಚಿಂತೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights