ಪ್ಯಾರಾಲಿಂಪಿಕ್ಸ್: ಬೆಳ್ಳಿ ಪದಕ ಗೆದ್ದ ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್!
ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಇಂದು ಕೊನೆಗೊಳ್ಳಲಿದೆ. ಭಾರತೀಯ ಕ್ರೀಡಾಪಟುಗಳುಕೊನೆಯ ದಿನವೂ ಗೆಲುವಿನ ಸಿಹಿ ನೀಡಿದ್ದು, ಕರ್ನಾಟಕ ಮೂಲದವರಾದ ಸುಹಾಸ್ ಯತಿರಾಜ್ ಅವರು ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.
ಸುಹಾಸ್ ಅವರು ಕರ್ನಾಟಕ ಮೂಲದ ಐಎಎಸ್ ಅಧಿಕಾರಿಯಾಗಿದ್ದಾರೆ. ಫೈನಲ್ ತಲುಪಿದ್ದ ಅವರು ಪುರುಷರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಫ್ರಾನ್ಸ್‌ನ ಲುಕಾಸ್ ಮಝೂರ್ ವಿರುದ್ಧ ಸೋಲುಂಡಿದ್ದು, ಬೆಳ್ಳಿ ಪದಕ ಗೆದ್ದಿದ್ದಾರೆ.
ಬ್ಯಾಡ್ಮಿಂಟನ್ ಎಸ್‌ಎಲ್4 ವಿಭಾಗದ ರೋಚಕ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ಫ್ರಾನ್ಸ್‌ನ ಲೂಕಸ್ ಮಜೂರ್ ವಿರುದ್ಧ ವಿಶ್ವದ ನಂಬರ್ 3 ಆಟಗಾರ ಸುಹಾಸ್ 1-2 ಸೆಟ್ಗಳ ಅಂತರದಲ್ಲಿ ಸೋಲುವ ಮೂಲಕ ಬೆಳ್ಳಿ ಪದಕ ಪಡೆದಿದ್ದಾರೆ.
ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಸುಹಾಸ್ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವನ್ ವಿರುದ್ಧ 21-9, 21-15ರ ಅಂತರದಲ್ಲಿ ಗೆದ್ದಿದ್ದರು.
ಸುಹಾಸ್ ಅವರು ಹಾಸನದವರಾಗಿದ್ದು, ಇಂಜಿನಿಯರ್ ಪದವಿಯನ್ನು ಪಡೆದಿದ್ದಾರೆ. ಐಎಎಸ್ ಮುಗಿಸಿ, ಮೃತ್ತಿ ಜೀವನಕ್ಕೆ ಕಾಲಿಟ್ಟಿದ್ದ ಅವರು ಪ್ರಯಾಗರಾಜ್, ಆಗ್ರಾ, ಅಝಮ್‌ಗಡ, ಜೌನ್‌ಪುರ, ಸೋನ್‌ಭದ್ರಾ ಜಿಲ್ಲೆಗಳ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್: ಚಿನ್ನ ಗೆದ್ದು ವಿಶ್ವ ದಾಖಲೆ ಬರೆದ ಸುಮಿತ್ ಆಂಟಿಲ್!