SSLC: ವಿರೋಧಗಳ ನಡುವೆಯೂ ನಡೆತ್ತಿದೆ ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತೆ!
ಕೊರೊನಾ ಹಿನ್ನಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ನಿರ್ವಿಘ್ನವಾಗಿ ನಡೆಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂಡಳಿ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಜೂ.25 ರಿಂದ ಜುಲೈ 4 ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಯುತಿದ್ದು, ಇದರಲ್ಲಿ 4,48,560 ಗಂಡು ಮಕ್ಕಳು ಹಾಗೂ 3,99,643 ಹೆಣ್ಣು ಮಕ್ಕಳು ಒಟ್ಟು 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ನಗರ ಪ್ರದೇಶದಲ್ಲಿ 3,78,337 ಮಂದಿ ವಿದ್ಯಾರ್ಥಿಗಳು, ಗ್ರಾಮೀಣ ಭಾಗದಲ್ಲಿ 4,69,866 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಂಡಳಿ ತಿಳಿಸಿದೆ.
ಒಟ್ಟು 2879 ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯುತ್ತಿದ್ದು, ಎಲ್ಲಾ ಕೊಠಡಿಗಳನ್ನು ಸ್ಯಾನಿಟೈಸರ್ನಿಂದ ಸ್ವಚ್ಛಗೊಳಿಸಲಾಗಿದೆ. ಜೊತೆಗೆ 330 ಪ್ರತ್ಯೇಕ ಬ್ಲಾಕ್ ಪರೀಕ್ಷಾ ಕೇಂದ್ರಗಳನ್ನು ರಚಿಸಿಲಾಗಿದ್ದು, ಒಟ್ಟು 43,720 ಕೊಠಡಿಗಳು ಪರೀಕ್ಷೆಗೆ ಸಜ್ಜುಗೊಂಡಿವೆ.
ಥರ್ಮಲ್ ಸ್ಕ್ಯಾನರ್: ಮಂಡಳಿಯ ವತಿಯಿಂದ ಒಟ್ಟು 7115 ಥಾರ್ಮಲ್ ಸ್ಕಾನರ್ಗಳನ್ನು ಒದಗಿಸಲಾಗಿದೆ. ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಒಂದೂವರೆ ಗಂಟೆ ಮುಂಚಿತವಾಗಿ ಆಗಮಿಸಿ ತಪಾಸಣೆಗೆ ಒಳಪಡಲು ಸೂಚಿಸಲಾಗಿದೆ.
ಸಹಾಯವಾಣಿ ಕೇಂದ್ರಗಳು: ವಿದ್ಯಾರ್ಥಿಗಳಲ್ಲಿರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ 34 ಹಾಗೂ ತಾಲ್ಲೂಕು ಮಟ್ಟದಲ್ಲಿ 204 ಕೇಂದ್ರಗಳನ್ನು ತೆರೆಯಲಾಗಿದೆ. ಜೊತೆಗೆ 3209 ಪರೀಕ್ಷಾ ಕೇಂದ್ರದಲ್ಲೂ ಸಹಾಯ ಕೇಂದ್ರಗಳನ್ನು ಆರಂಭಿಸಲಾಗಿದೆ.
ಸಿಬ್ಬಂದಿ: ಪರೀಕ್ಷಾ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಒಟ್ಟು 81265 ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯನಿರ್ವಹಿಸಲಿದ್ದಾರೆ. ಜೊತೆಗೆ ಇತರೆ ಇಲಾಖೆಗಳ ಒಟ್ಟು 19,222 ಮಂದಿ ಅಧಿಕಾರಿಗಳು ಕೆಲಸ ಮಾಡಲಿದ್ದಾರೆ.
ಆರೋಗ್ಯ ತಪಾಸಣಾ ಕೇಂದ್ರಗಳು: 3209 ಪರೀಕ್ಷಾ ಕೇಂದ್ರದಲ್ಲಿ ಒಟ್ಟು 5755 ಆರೋಗ್ಯ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ.
ಕರಪತ್ರಗಳ ಹಂಚಿಕೆ: ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಇಲಾಖೆಯು ಪರೀಕ್ಷಾ ಕೇಂದ್ರದಲ್ಲಿ ಏನೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪೋಷಕರಿಗೆ 9 ಲಕ್ಷ ಕರಪತ್ರಗಳನ್ನು ಹಾಗೂ ಮಕ್ಕಳ ಏನೆಲ್ಲಾ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದು 9 ಲಕ್ಷ ಕರಪತ್ರಗಳನ್ನು ಹಂಚಲಾಗಿದೆ. ಜೊತೆಗೆ ಪರೀಕ್ಷಾ ಸಿಬ್ಬಂದಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ 6500 ಕರಪತ್ರಗಳನ್ನು ವಿತರಿಸಲಾಗಿದೆ.
ಸ್ವಯಂ ಸೇವಕರು: ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರೋಗ್ಯ ತಪಾಸಣಾ ಸಹಾಯಕ್ಕೆಂದು ಇಬ್ಬರು ಸ್ವಯಂ ಸೇವಕರನ್ನಾಗಿ ಒಟ್ಟು 6418 ನೇಮಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಬಸ್ ವ್ಯವಸ್ಥೆ: ಯಾರು ಬಸ್ ವ್ಯವಸ್ಥೆ ಇಲ್ಲದೆ ಪರೀಕ್ಷೆಯಿಂದ ವಂಚಿತರಾಗಬಾರದು ಎಂದು ಎಲ್ಲಾ ಭಾಗದವರಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕೆಎಸ್ಆರ್ಟಿಸಿ ಹಾಗೂ ನಗರ ಭಾಗದ ವಿದ್ಯಾರ್ಥಿಗಳು ಬಿಎಂಟಿಸಿ ಬಸ್ನಲ್ಲಿ ಪ್ರವೇಶ ಪತ್ರ ತೋರಿಸಿ ಉಚಿತವಾಗಿ ಸಂಚಾರ ಮಾಡಬಹುದು ಎಂದು ತಿಳಿಸಿದೆ.
ಬೇರೆ ರಾಜ್ಯಗಳಿಂದ ಪರೀಕ್ಷೆ ಬರೆಯಲು ಬರುವ ಮಕ್ಕಳಿಗೆ ಆಯಾ ರಾಜ್ಯದ ಜಿಲ್ಲಾಡಳಿತದ ಜೊತೆ ಚರ್ಚಿಸಿ ವಸತಿ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮಂಡಳಿ ತಿಳಿಸಿದೆ.

