ಜಮ್ಮು ಕಾಶ್ಮೀರದಲ್ಲಿ ಹಿಜ್ಬುಲ್ ಕಮಾಂಡರ್ ಹತ್ಯೆ; ಭಯೋತ್ಪಾದಕ ಮುಕ್ತ ದೋಡಾ ಜಿಲ್ಲೆ ಎಂದು ಘೋಷಿಸಿದ ಪೊಲೀಸರು!
ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಸೇರಿದಂತೆ ಮೂವರು ಭಯೋತ್ಪಾದಕರನ್ನು ಇಂದು (ಸೋಮವಾರ) ಬೆಳಿಗ್ಗೆ ಅನಂತ್‌ನಾಗ್ ಜಿಲ್ಲೆಯಲ್ಲಿ ಎನ್‌ಕೌಂಟರ್ ಮಾಡಲಾಗಿದೆ.
ದಕ್ಷಿಣ ಕಾಶ್ಮೀರ ಜಿಲ್ಲೆಯ ಖುಲ್‌ಚೋಹರ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಮಸೂದ್ ಅಹ್ಮದ್ ಭಟ್ ಹಾಗೂ ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಮಸೂದ್ ಸಾವಿನೊಂದಿಗೆ, ಜಮ್ಮು ಪ್ರದೇಶದ ಇಡೀ ದೋಡಾ ಜಿಲ್ಲೆಯು ಭಯೋತ್ಪಾದಕರಿಂದ ಸಂಪೂರ್ಣವಾಗಿ ಮುಕ್ತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಘೋಷಿಸಿದ್ದಾರೆ.
ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸಿಆರ್‌ಪಿಎಫ್ ಜಂಟಿಯಾಗಿ, ಕಾರ್ಯಚರಣೆ ನಡೆಸಿದ್ದವು. ಮೂವರು ಭಯೋತ್ಪಾದಕರನ್ನು ಕೊಂದ ನಂತರ, ಎನ್‌ಕೌಂಟರ್ ಮಾಡಿದ ಸ್ಥಳದಲ್ಲಿ ಒಂದು ಎಕೆ ರೈಫಲ್ ಮತ್ತು ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆಯು ತಿಳಿಸಿದೆ.
“ಇಂದಿನ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಕಮಾಂಡರ್ ಮಸೂದ್ ಮತ್ತು ಒಬ್ಬ ಜಿಲ್ಲಾ ಕಮಾಂಡರ್ ಸೇರಿದಂತೆ ಇಬ್ಬರು ಲಷ್ಕರ್-ಎ-ತೈಬಾ (ಎಲ್‌ಇಟಿ) ಭಯೋತ್ಪಾದಕರನ್ನು ನಿಗ್ರಹಿಸಲಾಗಿದೆ. ದೋಡಾ ಜಿಲ್ಲೆಯಲ್ಲಿದ್ದ ಕೊನೆಯ ಭಯೋತ್ಪಾದಕ ಮಸೂದ್‌ನನ್ನು ಹತ್ಯೆ ಮಾಡಲಾಗಿದ್ದು, ದೋಡಾ ಜಿಲ್ಲೆ ಸಂಪೂರ್ಣವಾಗಿ ಉಗ್ರಗಾಮಿ ಮುಕ್ತವಾಗಿದೆ” ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
With today’s operation at Khull Chohar by Anantnag Police along with 19 RR,CRPF in which 2 LET terrorists including one district commander & one HM commander Masood were neutralised, Doda district in Jammu Zone becomes totally militancy free
once again.@Sandeep_IPS_JKP pic.twitter.com/sCvioo2f3X— J&K Police (@JmuKmrPolice) June 29, 2020
“ದೋಡಾ ಪೊಲೀಸರು ದಾಖಲಿಸಿದ ಅತ್ಯಾಚಾರ ಪ್ರಕರಣದಲ್ಲಿ ಮಸೂದ್ ಭಾಗಿಯಾಗಿದ್ದು, ಅಂದಿನಿಂದಲೂ ಪರಾರಿಯಾಗಿದ್ದ. ನಂತರ ಅವನು ಹಿಜ್ಬುಲ್ ಮುಜಾಹಿದ್ದೀನ್ ಜೊತೆ ಸೇರಿ ತನ್ನ ಕಾರ್ಯಾಚರಣೆಯ ಪ್ರದೇಶವನ್ನು ಕಾಶ್ಮೀರಕ್ಕೆ ಸ್ಥಳಾಂತರಿಸಿದ್ದನು” ಎಂದು ಅವರು ಹೇಳಿದರು.
ದಕ್ಷಿಣ ಕಾಶ್ಮೀರದಲ್ಲಿ 29 ವಿದೇಶಿ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ.
ಪುಲ್ವಾಮಾ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದನ್ ಅವರನ್ನು “ಹತ್ಯೆ ಮಾಡಿದ್ದೇವೆ.” ಈ ಮೂಲಕ ಭದ್ರತಾ ಪಡೆಗಳು ಭಾರಿ ಯಶಸ್ಸನ್ನು ಗಳಿಸಿವೆ ಮತ್ತು ದಕ್ಷಿಣ ಕಾಶ್ಮೀರದಿಂದ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಗ್ರಹಿಸುವ ಗುರಿ ಹೊಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
“ಕಳೆದ ಐದಾರು ತಿಂಗಳುಗಳಲ್ಲಿ, 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ತಟಸ್ಥಗೊಳಿಸಲಾಗಿದೆ. ಅವರಲ್ಲಿ 50ಕ್ಕೂ ಹೆಚ್ಚು ಹಿಜ್ಬುಲ್ ಮುಜಾಹಿದ್ದೀನ್, 20 ರಷ್ಟು ಲಷ್ಕರ್-ಎ-ತೈಬಾ, 20 ಜೈಶ್-ಎ-ಮೊಹಮ್ಮದ್ ಮತ್ತು ಉಳಿದವು ಅಲ್-ಬದ್ರ್, ಅನ್ಸಾರ್ ಗಜ್ವಾತುಲ್ ಹಿಂದ್ ನಂತಹ ಸಣ್ಣ ಸಂಘಟನೆಗಳಲ್ಲಿದ್ದವರು” ಎಂದು ಸಿಂಗ್ ಹೇಳಿದ್ದಾರೆ.

