ರೈತ ವಿರೋಧಿ ಮಸೂದೆಗಳಿಗೆ ವಿಧಾನ ಪರಿಷತ್‌ನಲ್ಲಿ ವಿರೋಧ: ತಿಸ್ಕಾರಗೊಳ್ಳುತ್ತವಾ ಮಸೂದೆಗಳು!
ರಾಜ್ಯದ ಬಿಜೆಪಿ ಸರ್ಕಾರ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿದ 40 ವಿದೇಯಕಗಳು ಮತ್ತು 19 ಮಸೂದೆಗಳು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿವೆ. ರಾಜ್ಯಾಂದ್ಯತ ರೈತರು ಮತ್ತು ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಭೂಸುಧಾರಣಾ ತಿದ್ದುಪಡಿ ಮಸೂದೆ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗಳು ಅಂಗೀಕಾರಗೊಂಡಿವೆ. ಆದರೆ, ವಿಧಾನ ಪರಿಷತ್‌ನಲ್ಲಿ ಈ ಎರಡೂ ಮಸೂದೆಗಳಿಗೆ ಅಂಗೀಕಾರದೊರೆತಿಲ್ಲ.
ವಿಧಾನ ಪರಿಷತ್ ಕಲಾಪವು ಶನಿವಾರ ತಡರಾತ್ರಿ ಅಂತ್ಯಗೊಂಡಿದ್ದು, ಮಸೂದೆಗಳನ್ನು ಪರಿಷತ್‌ನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ವಿರೋಧಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ ಅವರು ಭೂ ಸುಧಾರಣಾ ತಿದ್ದುಪಡಿ ಮಸೂದೆಯನ್ನು ಅಂಗೀಕಾರಕ್ಕಾಗಿ ಪರಿಷತ್‌ನಲ್ಲಿ ಶನಿವಾರ ರಾತ್ರಿ ಮಂಡಿಸಿದ್ದರು. ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಮತ್ತು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರು ಮಸೂದೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದರು.
ಶನಿವಾರ/ಭಾನುವಾರ ನಡುವಿನ ತಡರಾತ್ರಿ 1 ಗಂಟೆಯಾದರೂ ಚರ್ಚೆ ನಡೆದರೂ, ಅಂಗೀಕಾರಕ್ಕೆ ವಿಪಕ್ಷಗಳು ಅನುಮತಿ ನೀಡಿಲ್ಲ. ಹಾಗಾಗಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಸದನದ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದ್ದಾರೆ. ಹಾಗಾಗಿ ಮುಂದಿನ ಸದನ ಯಾವಾಗ ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಕೃಷಿಕರಲ್ಲದವರಿಗೂ ಕೃಷಿ ಜಮೀನು ಖರೀದಿಸಲು ಅವಕಾಶ ಕಲ್ಪಿಸುವ ಮತ್ತು ಕೃಷಿ ಜಮೀನು ಹಿಡುವಳಿಯ ಪ್ರಮಾಣದ ಮಿತಿ ಹೆಚ್ಚಿಸುವ ಮಸೂದೆ ಹಾಗೂ ಕೃಷಿ ಉತ್ಪನ್ನಗಳ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಎಪಿಎಂಸಿ ತಿದ್ದುಪಡಿ ಮಸೂದೆಗೂ ವಿಧಾನ ಪರಿಷತ್ ಅಂಗೀಕಾರ ದೊರೆಯಲಿಲ್ಲ. ಮುಂದಿನ ಕಲಾಪದಲ್ಲಿ ಈ ಎರಡೂ ಮಸೂದೆಗಳು ತಿರಸ್ಕಾರಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಮೆಜಾರಿಟಿ ಇಲ್ಲ, ಭೂಸುಧಾರಣೆ ಮಸೂದೆ ಮಂಡನೆಗೆ ಅವಕಾಶ ನೀಡುವುದಿಲ್ಲ: ಸಿದ್ದರಾಮಯ್ಯ

