ಮಧ್ಯಪ್ರದೇಶ: ಕಾಂಗ್ರೆಸ್‌ಗೆ ಕೈಕೊಟ್ಟು ಮತ್ತೊಬ್ಬ ಶಾಸಕ; ಬಿಜೆಪಿ ಸೇರ್ಪಡೆ!
ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಇನ್ನೂ ನಿಂತಿಲ್ಲ. ಅಲ್ಲಿನ ಕಾಂಗ್ರೆಸ್ ಶಾಸಕ ಪಕ್ಷದ ಸದಸ್ಯತ್ವ ಮತ್ತು ಎಂಎಲ್‌ಎ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇಂದು (ಭಾನುವಾರ) ಬಿಜೆಪಿ ಸೇರಿದ್ದಾರೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ನೇತೃತ್ವದಲ್ಲಿ 25 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರ್ಪಡೆಯಾಗಿದ್ದರು. ಈಗ ಮತ್ತೊಬ್ಬ ಶಾಸಕ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು, ಕಳೆದ ಮಾರ್ಚ್ ನಿಂದ ಇದುವರೆಗೆ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ ಶಾಸಕರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ.
“ಲೋಧಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಇಂದು ಅಂಗೀಕರಿಸಲಾಗಿದೆ” ಎಂದು ವಿಧಾನಸಭೆ ಹಂಗಾಮಿ ಸ್ಪೀಕರ್ ರಾಮೇಶ್ವರ್ ಶರ್ಮಾ ಅವರು ತಿಳಿಸಿದ್ದಾರೆ.
“ಲೋಧಿ ಅವರು ಶುಕ್ರವಾರ ತಮ್ಮ ರಾಜೀನಾಮೆಯನ್ನು ನೀಡಿದ್ದರು. ಆದರೆ ಎರಡು ದಿನಗಳವರೆಗೆ ಅದರ ಬಗ್ಗೆ ಮರುಚಿಂತನೆ ಮಾಡಲು ನಾನು ಅವರನ್ನು ಕೇಳಿದೆ. ಅವರು ನಿನ್ನೆ ರಾತ್ರಿ ನನಗೆ ಕರೆ ಮಾಡಿ, ರಾಜೀನಾಮೆ ಬಗ್ಗೆ ದೃಢವಾಗಿದ್ದು, ರಾಜೀನಾಮೆಯನ್ನು ಇಂದು ಅಂಗೀಕರಿಸುವಂತೆ ಕೇಳಿಕೊಂಡಿದ್ದರು” ಎಂದು ಶರ್ಮಾ ಹೇಳಿದ್ದಾರೆ.
ಅಲ್ಲದೆ, ಮತ್ತೊಬ್ಬ ಕಾಂಗ್ರೆಸ್ ಶಾಸಕ ಸಹ ಪಕ್ಷವನ್ನು ತೊರೆಯಬಹುದು ಎಂಬ ಉಹಾಪೋಹಗಳಿವೆ. ನವೆಂಬರ್ 3 ರಂದು ರಾಜ್ಯದ 28 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕಿಂತಲೂ ಭವ್ಯ ಸೀತಾಮಂದಿರ ಕಟ್ಟುತ್ತೇನೆ: ಚಿರಾಗ್ ಪಾಸ್ವಾನ್

