ಬಿಜೆಪಿ ಸರ್ಕಾರವು ಪತ್ರಿಕೋದ್ಯಮದ ಕೊಲೆ ಮಾಡುತ್ತಿದೆ: ರಾಹುಲ್ಗಾಂಧಿ
ಅಸ್ಸಾಂನಲ್ಲಿ ಹಿರಿಯ ಗ್ರಾಮೀಣ ಪತ್ರಕರ್ತ ಪರಾಗ್ ಭುಯಾನ್ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವು ಆಕಸ್ಮಿಕವಲ್ಲ ಹತ್ಯೆ ಎಂದು ಹೇಳಲಾಗಿದೆ. ಅವರ ಸಾವಿಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಕಿಡಿಕಾರಿದ್ದು, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟಾಚಾರ ಬಯಲಿಗೆಳೆಯುವ ಪತ್ರಕರ್ತರನ್ನು ಸಾವಿಗೆ ನೂಕುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ಬಿಜೆಪಿ ನಾಯಕರ ಭ್ರಷ್ಟಾಚಾರ ಬಯಲಿಗೆಳೆದ ಪತ್ರಕರ್ತರನ್ನು ಅನುಮಾನಾಸ್ಪದವಾಗಿ ಹತ್ಯೆ ಮಾಡಲಾಗಿದೆ. ಅವರ ಕುಟುಂಬಕ್ಕೆ ತನ್ನ ಸಂತಾಪಗಳು. ಇದು ಮಧ್ಯಪ್ರದೇಶ ಅಥವಾ ಉತ್ತರ ಪ್ರದೇಶವಿರಲಿ, ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಭ್ರಷ್ಟರನ್ನು ರಕ್ಷಿಸಲು ನೈಜ ಪತ್ರಕರ್ತರ ಕತ್ತು ಹಿಸುಕಲಾಗುತ್ತಿದೆ” ಎಂದಿದ್ದಾರೆ.
ಉತ್ತರ ಪ್ರದೇಶ ಪತ್ರಕರ್ತ ವಿನಯ್ ತಿವಾರಿ ಮೇಲೆ ಬಿಜೆಪಿ ಗೂಂಡಾಗಳು ತೀವ್ರ ಹಲ್ಲೆ ನಡೆಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಹಕ್ಕುಗಳು ಕೇವಲ ಆಯ್ದ ವ್ಯಕ್ತಿಗಳಿಗೆ ಮಾತ್ರ ಎಂದು ಎರಡು ದಿನಗಳ ಹಿಂದೆ ರಾಹುಲ್ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದರು.
ಮೂರು ದಿನಗಳ ಹಿಂದೆ ಅಪಘಾತಕ್ಕೀಡಾಗಿದ್ದ ಅಸ್ಸಾಂ ಪತ್ರಕರ್ತ ಪರಾಗ್ ಭುಯಾನ್ ಅವರು ನಿನ್ನೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ಪ್ರಕರಣವನ್ನು ಸಿಐಡಿ ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ: ಐಎಂಎ ಹಗರಣ: ಹಣ ವಾಪಸಾತಿಗೆ ನ.25 ರಿಂದ ಆನ್ಲೈನ್ ಅರ್ಜಿ ಆಹ್ವಾನ!

