ನಮ್ಮ ಸಂವಿಧಾನದಲ್ಲೇ ಸೆಕ್ಯುಲರ್ ವಿರೋಧಿ ಮತ್ತು ಫೆಡರಲ್ ವಿರೋಧಿ ಅಂಶಗಳಿವೆಯೇ?

ಮೋದಿ ಸರ್ಕಾರ ಕಾರ್ಪೊರೇಟ್-ಹಿಂದುತ್ವವಾದಿ ರಾಷ್ಟ್ರವಾದದ ಆಕ್ರಮಣಕ್ಕೆ ಸಿಕ್ಕು ಭಾರತದ ಫೆಡರಲ್ ಸ್ವರೂಪ ಹಾಗು ಬಹುತ್ವ ಸಂಸ್ಕೃತಿಗಳೇ ಅಪಾಯದಲ್ಲಿವೆಯಷ್ಟೆ.

ಈ ಮನುವಾದಿಗಳು ತಮ್ಮ ಹಿಡೆನ್ ಅಜೆಂಡಾಗಳನ್ನು ಜಾರಿಗೆ ತರುವ ಭಾಗವಾಗಿ ಇತ್ತೀಚಿನವರೆಗೂ ಸಂವಿಧಾನದ ಮೇಲೆ ನೇರ ದಾಳಿಯನ್ನು ಮಾಡುತ್ತಿದ್ದರು.

ಹಾಗು ಅದನ್ನು ಅಮೂಲಾಗ್ರವಾಗಿ ಬದಲಾಯಿಸಬೇಕೆಂಬ ಇರಾದೆಗಳನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದರು. ಅಧಿಕಾರಕ್ಕೆ ಬಂದಮೇಲೂ ಆ ಅಜೆಂಡಾವನ್ನೇನು ಅವರು ಕೈಬಿಟ್ಟಿಲ್ಲ.

ಆದರೆ ಇತ್ತೀಚಿನ ದಿನಗಳಲ್ಲಿ, ಹಲವು ವಿದ್ವಾಂಸರು ಗಮನಿಸಿರುವಂತೆ, ಹಿಂದುತ್ವವಾದಿಗಳು ತಮ್ಮ ಫ್ಯಾಸಿಸ್ಟ್ ಅಜೆಂಡಾಗಳ ಬೆಂಬಲಕ್ಕೆ ಸಂವಿಧಾನವನ್ನು ಹಾಗು ಸಂವಿಧಾನ ರಚನಾ ಸಭೆಯಲ್ಲಿ ನಡೆದ ಚರ್ಚೆಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ನಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಸಂವಿಧಾನ ಸಭೆಯ 299 ಸದಸ್ಯರಲ್ಲಿ 229 ಸದಸ್ಯರನ್ನು ಆಯ್ಕೆ ಮಾಡಿದ್ದು ಬ್ರಿಟಿಷ ಪ್ರಾಂತ್ಯಗಳ ಉಳ್ಳವರು. ಏಕೆಂದರೆ ಆಗ ಆದಾಯ ತೆರಿಗೆ ಕಟ್ಟುತ್ತಿದ್ದವರು,ಪದವೀಧರರು..ಇತ್ಯಾದಿ…ಜನಸಂಖ್ಯೆಯ ಶೇ. 17ರಷ್ಟು ಜನ ಮಾತ್ರ ಮತದಾನ ಮಾಡಲು ಅರ್ಹರಾಗಿದ್ದರು. ಉಳಿದ 70 ಪ್ರತಿನಿಧಿಗಳನ್ನು ರಾಜಸಂಸ್ಥಾನಗಳು ನಾಮ ನಿರ್ದೇಶನ ಮಾಡಿದ್ದವು.

ಹೀಗಾಗಿ ಒಟ್ಟಾರೆಯಾಗಿ ನಮ್ಮ ಸಂವಿಧಾನ ರಚನಾ ಸಭೆಯಲ್ಲಿ ಪ್ರಧಾನವಾಗಿ ಅಂಬೇಡ್ಕರ್ ಮತ್ತು ಇನ್ನಿತರ ಕೆಲವರು ಮಾತ್ರ ದಮನಿತ ಹಿತಾಸಕ್ತಿಗಳ ಪ್ರತಿನಿಧಿಗಳಿದ್ದರು. ಉಳಿದ ಬಹುಪಾಲು ಪ್ರತಿನಿಧಿಗಳು ಉಳಿಗಮಾನ್ಯ ಹಿನ್ನೆಲೆಯಿಂದ ಬಂದವರು, ಮೇಲ್ಜಾತಿ ಧೋರಣೆಯುಳ್ಳವರು ಹಾಗು ದೇಶವಿಭಜನೆಯ ಹಿನ್ನೆಲೆಯಲ್ಲಿ ಭಾರತವು ಒಂದು ಪ್ರಬಲ ಕೇಂದ್ರೀಕೃತ ಪ್ರಭುತ್ವವುಳ್ಳ ಹಿಂದೂ ರಾಷ್ಟ್ರವಾಗಬೇಕೆಂಬ ಮಮಕಾರ ಉಳ್ಳವರು ಆಗಿದ್ದರು.

ಇದನ್ನೂ ಓದಿ: ಮೋದಿ ಸರ್ಕಾರದ Contract Farming ಮಸೂದೆ ಕೃಷಿ ಕಂಪನಿಗಳನ್ನು ಸಬಲೀಕರಿಸಿ ರೈತರನ್ನು ನೇಣಿಗೇರಿಸುವುದು ಹೀಗೆ . 

ಸಂವಿಧಾನ ಸಭೆಯಲ್ಲಿ ಬಹುಪಾಲು ಪ್ರಸ್ತಾಪಗಳು ಬಹುಮತದೊಂದಿಗೆ ಅಂಗೀಕಾರ ಅಥವಾ ತಿರಸ್ಕಾರ ವಾಗುತ್ತಿದ್ದವು. ಆದ್ದರಿಂದ ಸಂವಿಧಾನ ರಚನಾ ಸಭೆಯಲ್ಲಿ ಹಲವು ಪ್ರಗತಿಪರ ಪ್ರಸ್ತಾವಗಳು ಬಹುಮತವಿಲ್ಲದೆ ತಿರಸ್ಕಾರಗೊಂಡವು. ಭಾರತದ ಸಂವಿಧಾನದ ಮುನ್ನುಡಿಯ ಆಶಯಗಳಿಗೆ ಪೂರಕವಾಗಿರದ ಹಲವು ಪ್ರಸ್ತಾವಗಳು ಬಹುಮತದ ಕಾರಣದಿಂದ ಭಾರತದ ಸಂವಿಧಾನದಲ್ಲಿ ಅಡಕಗೊಂಡವು.

ಇವುಗಳಲ್ಲಿ ಸೆಕ್ಯುಲಾರ್ ಸಂವಿಧಾನ ಎಂದು ಕರೆಸಿಕೊಳ್ಳುವ ನಮ್ಮ ಸಂವಿಧಾನದಲ್ಲಿ ಅಂತರ್ಗತವಾಗಿ ಅಡಕವಾಗಿರುವ ಹಿಂದೂಪರತೆಯೂ ಬಹುಮುಖ್ಯವಾದದ್ದು ಎಂದು Oxford Brooks University ಯಲ್ಲಿ ಅಧ್ಯಾಪಕರಾಗಿರುವ ಪ್ರೀತಮ್ ಸಿಂಗ್ ಅವರು ತಮ್ಮ : ” Hindu Bias in India’s ‘Secular’ Constitution: probing flaws in the instruments of governance” ಲೇಖನದಲ್ಲಿ ವಿವರಿಸುತ್ತಾರೆ.

ಅದಕ್ಕಾಗಿ ನಮ್ಮ ಸಂವಿಧಾನದಲ್ಲಿರುವ ಈ ಕೆಳಗಿನ ಅಂಶಗಳನ್ನು ಉದಾಹರಿಸುತ್ತಾರೆ. ಹಾಗು ಅದು ಜಾರಿಯಾಗುವ ಮೊದಲು ಸಂವಿಧಾನ ಸಭೆಯಲ್ಲಿ ಆದ ಚರ್ಚೆಗಳನ್ನು ಹಿನ್ನೆಲೆಯಾಗಿ ಒದಗಿಸುತ್ತಾರೆ.

1. Article 1- India, that is Bharat, shall be a Union of States. (ಇಂಡಿಯಾ ಎಂಬ ಭಾರತವು ರಾಜ್ಯಗಳ ಒಕ್ಕೂಟವಾಗಿರುತ್ತದೆ )

– ಈ ಆರ್ಟಿಕಲ್ ಅನುಮೋದನೆ ಆಗುವ ಮುನ್ನ ಭಾರತ್ ಎನ್ನುವ ಪದವನ್ನು ಕಡ್ಡಾಯವಾಗಿ ಸೇರಿಸಬೇಕೆಂಬ ಬಗ್ಗೆ ಸಂವಿಧಾನ ಸಭೆಯಲ್ಲಿದ್ದ ಹಿಂದುರಾಷ್ಟ್ರವಾದಿಗಳು ಮಾಡಿದ ವಾದವನ್ನು ಸಿಂಗ್ ಅವರು ಉಲ್ಲೇಖಿಸುತ್ತಾರೆ.

ಸಾರಾಂಶದಲ್ಲಿ ಭಾರತ ಎಂಬ ಪದವು ಬ್ರಿಟಿಷ ಪೂರ್ವ ಮಾತ್ರವಲ್ಲ ಮುಸ್ಲಿಂ ಆಗಮನ ಪೂರ್ವದ ಹಿಂದೂ ಭರತ ವರ್ಷವನ್ನು ಸೂಚಿಸುತ್ತದಾದ್ದರಿಂದ ಭಾರತ ಎಂಬ ಪದ ಇರಲೇ ಬೇಕು ಎಂಬುದು ಅವರುಗಳ ವಾದದ ಸಾರವಾಗಿತ್ತು.

ಅರ್ಥಾತ್ ಭಾರತ ದೇಶವೆಂದರೆ ಮೂಲಭೂತವಾಗಿ ಹಿಂದೂ ವಂಶಜರದ್ದು ಎಂಬ ಇಂಗಿತ ಅವರ ಪ್ರತಿಪಾದನೆಗಳಲ್ಲಿತ್ತು.

1940 ರಿಂದ ಭಾರತದ ಸಂವಿಧಾನದ ಸ್ವರೂಪದ ಬಗ್ಗೆ ಬ್ರಿಟಿಷರು ಚರ್ಚೆ ಆರಂಭಿಸಿದ್ದರು.

ಮೂಲದಲ್ಲಿ ಭಾರತವು ಪ್ರಬಲ ರಾಜ್ಯಗಳು ಹಾಗು ಸಾಪೇಕ್ಷವಾಗಿ ಸೀಮಿತ ಅಧಿಕಾರವಿರುವ ಕೇಂದ್ರ ಸರ್ಕಾರವಿರುವ ಸಡಿಲ ಒಕ್ಕೂಟ ವಾಗಿರಬೇಕು ಎಂಬ ಪ್ರಸ್ತಾಪವಿತ್ತು.

ಅದರ ಹಿಂದೆ ಮುಸ್ಲಿಂ ಬಾಹುಳ್ಯವಿದ್ದ ಪೂರ್ವ ಪಂಜಾಬ್ ಹಾಗೂ ಬಂಗಾಳ ಪ್ರಾಂತ್ಯಗಳಿಗೆ ಈ ಬಗೆಯಲ್ಲಿ ಸ್ವಾಯತ್ತ ಪ್ರಾಂತ್ಯ ವ್ಯವಸ್ಥೆ ಮಾಡಿಕೊಟ್ಟು ದೇಶವಿಭಜನೆಯನ್ನು ತಡೆಯುವ ಉದ್ದೇಶವಿತ್ತು.

ಆದರೆ ಅದಕ್ಕೆ ಪ್ರಧಾನವಾಗಿ ಕಾಂಗ್ರೆಸ್ ಒಪ್ಪಲಿಲ್ಲ. ಮುಸ್ಲಿಂ ಲೀಗೂ ಒಪ್ಪಲಿಲ್ಲ.ದೇಶ ವಿಭಾಜನೆಯಾಯಿತು.

ದೇಶ ವಿಭಜನೆಯ ನಂತರ ಬಲವಾದ ರಾಷ್ಟ್ರ ಕಟ್ಟಬೇಕೆಂದರೆ ಬಲವಾದ ಕೇಂದ್ರ ಇರಬೇಕೆಂಬ ಪ್ರತಿಪಾದನೆಯನ್ನು ಸಂವಿಧಾನ ಸಭೆಯಲ್ಲಿದ್ದ ಹಿಂದೂ ರಾಷ್ಟ್ರವಾದಿಗಳು ಮುಂದಿಟ್ಟರು.

ಅಂಬೇಡ್ಕರ್ ಮತ್ತು ನೆಹರು ಅವರಿಗೂ ಬೇರೆಬೇರೆ ಕಾರಣಗಳಿಗಾಗಿ ಪ್ರಬಲ ಕೇಂದ್ರ ಅಗತ್ಯವೆನಿಸಿತ್ತು.

ಹೀಗಾಗಿ ಭಾರತವು ಹೆಚ್ಚು ಫೆಡರಲ್ ಆಗುವ ಬದಲು ಹೆಚ್ಚು “ಯೂನಿಯನ್ ” ಆಯಿತೆಂದು ಪ್ರೀತಮ್ ಪ್ರತಿಪಾದಿಸುತ್ತಾರೆ.

2. Article 25 (b) (2 )- Explanation II.: In sub-clause (b) of clause (2), the reference to Hindus shall be construed as including a reference to persons professing the Sikh, Jaina or Buddhist religion, and the reference to Hindu religious institutions shall be construed accordingly.

ಈ ಆರ್ಟಿಕಲ್ ನ ಉದ್ದೇಶ ಪ್ರಧಾನವಾಗಿ ಸಾರ್ವಜನಿಕ ಸ್ವರೂಪವುಳ್ಳ ಹಿಂದೂ ಧಾರ್ಮಿಕ ಸಂಸ್ಥೆಗಳನ್ನು ಹಿಂದೂ ಧರ್ಮದೊಳಗಿನ ಇತರ ಎಲ್ಲಾ ವರ್ಗಗಳಿಗೂ ತೆರೆಯುವುದಾಗಿದ್ದರೂ, ಹಿಂದೂ ಧರ್ಮದ ವ್ಯಾಖ್ಯಾನದಲ್ಲಿ ಬುದ್ಧ , ಸಿಖ್ , ಜೈನ ಇತ್ಯಾದಿ ಅವೈದಿಕ ಪಂಥಗಳನ್ನು ಬ್ರಾಹ್ಮಣಿಯ ಧೋರಣೆಯ ಹಿಂದೂ ಧರ್ಮದೊಳಗೆ ಸೇರಿಸಿರುವುದು ಭಾರತದ ಸಂವಿಧಾನದೊಳಗೇ ಅಡಕವಾಗಿರುವ ಬ್ರಾಹ್ಮಣಿಯ ಹಿಂದೂ ಧೋರಣೆಗೆ ಸಂಕೇತವಾಗಿದೆ ಎಂಬುದು ಸಿಂಗ್ ಅವರ ವಾದ .

3. Article 48: Organisation of agriculture and animal husbandry. The State shall endeavour to organise agriculture and animal husbandry on modern and scientific lines and shall, in particular, take steps for preserving and improving the breeds, and prohibiting the slaughter of cows and calves and other milch and draught cattle.

ಭಾರತದ ಪ್ರಭುತ್ವ ನಿರ್ದೇಶನಾ ತತ್ವಗಳಲ್ಲಿನ ಕೊನೆಯ ಅಂಶವಾಗಿ ಸೇರಿಸಿರುವ ಈ ಆರ್ಟಿಕಲ್ಲು ಪ್ರಧಾನವಾಗಿ ಕೃಷಿಯನ್ನು ವೈಜ್ಞಾನಿಕವಾಗಿ ಬೆಳೆಸಲು ಕೃಷಿ ಸಂಪನ್ಮೂಲಗಳನ್ನು ಬಳಸಿಕೊಳ್ಳಬೇಕೆಂಬ ಉದ್ದೇಶವನ್ನೇನೋ ಹೇಳುತ್ತದೆ.

ಆದರೆ, ಅದೇ ಸಮಯದಲ್ಲಿ, ಹಿಂದೂ ಧರ್ಮದೊಳಗಿನ ಬ್ರಾಹ್ಮಣಿಯ ಧೋರಣೆಯುಳ್ಳವರ ಧಾರ್ಮಿಕ ನೆಲೆಯ ಆಗ್ರಹವಾಗಿದ್ದ ಗೋ ಹತ್ಯೆ ನಿಷೇಧವನ್ನು ಒಳಗೊಂಡಿದೆ.

ಇದನ್ನೂ ಓದಿ: ಹಸಿವನ್ನು ಹೆಚ್ಚಿಸುತ್ತಿವೆ ಮೋದಿಯ ಹೊಸ ಕೃಷಿ ಕಾಯಿದೆಗಳು

ಆ ಮೂಲಕ ಭಾರತ ರಾಷ್ಟ್ರ ವೆಂದರೆ ಪ್ರಧಾನವಾಗಿ ಬ್ರಾಹ್ಮಣಿಯ ಸಂಸ್ಕೃತಿಗೆ ಆದ್ಯತೆ ಕೊಡುವ ರಾಷ್ಟ್ರವೆಂಬಂತೆ ನಿರ್ವಚನ ಮಾಡಲಾಗಿದೆ.

ಈ ಆರ್ಟಿಕಲ್ ಸೇರಿಸಲು ನಡೆದ ಸಂವಿಧಾನ ಸಭೆಯ ಚರ್ಚೆಗಳನ್ನು ಹಾಗು ಆ ನಂತರದಲ್ಲಿ ಗೋ ಹತ್ಯೆ ನಿಷೇಧದ ಸುತ್ತ ಹಿಂದೂತ್ವ ರಾಜಕಾರಣ ಇನ್ನಷ್ಟು ಸಾಂವಿಧಾನಿಕ ಮಾನ್ಯತೆ ಪಡೆದುಕೊಳ್ಳುವುದಕ್ಕೆ ಈ ಆರ್ಟಿಕಲ್ ಹೇಗೆ ಪೂರಕವಾಯಿತೆಂಬುದನ್ನು ಸಹ ಅವರು ವಿಶದೀಕರಿಸುತ್ತಾರೆ.

4. Article 343. Official language of the Union. (1) The official language of the Union shall be Hindi in Devanagari script. Article 351. Directive for development of the Hindi language

ಸ್ವತಂತ್ರ ಭಾರತದ ಪ್ರಭುತ್ದದ ಭಾಷಾ ನೀತಿಯ ಬಗೆಗಿನ ಮೇಲಿನ ಎರಡು ಆರ್ಟಿಕ್ಕಲ್ಲುಗಳು ಭಾರತದ ಸಂವಿಧಾನ ರಚನಾ ಸಭೆ ಹಾಗೂ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಬಲವಾಗಿದ್ದ ಬ್ರಾಹ್ಮಣಿಯ ಹಿಂದೂ ಕೋಮುವಾದಿ ಧೋರಣೆಗಳಿಗೆ ಮತ್ತೊಂದು ಉದಾಹರಣೆಯಾಗಿದೆ ಎನ್ನುವುದು ಪ್ರೀತಮ್ ಅವರ ವಾದವಾಗಿದೆ.

ಮೊದಲನೆಯದಾಗಿ ಉತ್ತರ ಭಾರತದ ಹಿಂದೂ ಮೇಲ್ಜಾತಿಗಳ ಭಾಷೆಯಾದ ಹಿಂದಿಯನ್ನು ಇಡೀ ದೇಶದ ಮೇಲೆ ಹೇರಿದ್ದು..

ಎರಡನೆಯದಾಗಿ ಹಿಂದುಸ್ಥಾನಿಯ ಬದಲಾಗಿ ಸಂಸ್ಕೃತಿಕರಣಗೊಂಡ ಹಿಂದಿಯನ್ನು ರಾಜಭಾಷೆಯನ್ನಾಗಿ ಹೇರಿದ್ದು…

ಮೂರನೆಯದಾಗಿ ಆಗ ಹಿಂದಿಯನ್ನು ಕಾಯತಿ, ಮಹಾಜನ್ ಲಿಪಿಗಳಲ್ಲಿ ಹೆಚ್ಚು ಬಳಸುತ್ತಿದ್ದರು ಕಡಿಮೆ ಬಳಕೆಯಲ್ಲಿದ್ದ ದೇವನಾಗರಿ ಅರ್ಥಾತ್ ಸಂಸ್ಕೃತ ಲಿಪಿಯನ್ನೇ ಬಳಸಬೇಕೆಂದು ಕಡ್ಡಾಯಗೊಳಿಸಿದ್ದು…

ಇವೆಲ್ಲವೂ ಭಾಷಾ ವಿಷಯದಲ್ಲಿನ ಹಿಂದುತ್ವವಾದಿ ರಾಜಕಾರಣವೇ ಆಗಿತ್ತು.

ಈ ಪ್ರತಿಪಾದನೆಗೆ ಪೂರಕವಾಗಿ ಹೇಗೆ ಸಂವಿಧಾ ಸಭೆಯಲ್ಲಿ ಹಿಂದಿ , ಸಂಸ್ಕೃತ ಹಾಗು ದೇವನಾಗರಿ ಲಿಪಿಯ ಪರವಾಗಿ ವಾದ ಮಾಡುತ್ತಿದ್ದ ಸಂವಿಧಾನ ರಚನಾ ಸಭೆಯ ಸದಸ್ಯರು ಹಿಂದೂ ಭಾರತದ ವೈಭವದ ಪುನರುತ್ಥಾನದ ಪ್ರತಿಪಾದಕರೂ ಆಗಿದ್ದರೆಂಬುದನ್ನು ಪ್ರೀತಮ್ ಸಿಂಗ್ ಉಲ್ಲೇಖಿಸುತ್ತಾರೆ.

ಹೀಗೆ ಸಂವಿಧಾನ ರಚನಾ ಸಭೆಯಲ್ಲಿದ್ದ ಪ್ರಬಲ ಹಿಂದು, ಹಿಂದಿ, ದೇವನಾಗರಿ ಮತ್ತು ಸಂಸ್ಕೃತ ಲಾಬಿಗಳು ಭಾರತದ ಸಂವಿಧಾನದ ಸೆಕ್ಯುಲಾರ್ ರಚನೆಗೆ ಬಲವಾದ ಹೊಡೆತ ಕೊಟ್ಟರು ಎಂಬುದನ್ನು ಪ್ರೊ. ಪ್ರೀತಂ ಸಿಂಗ್ ಕೂಲಂಕಷವಾಗಿ ತಮ್ಮ ಲೇಖನದಲ್ಲಿ ವಿವರಿಸುತ್ತಾರೆ.

ಭಾರತವು ಹೇಗೆ ವೇಗವಾಗಿ, ಸಾಂವಿಧಾನಿಕವಾಗಿ ಬ್ರಾಹ್ಮಣ್ಯವಾದಿ ಫ್ಯಾಸಿಸ್ಟರ ವಶವಾಗುತ್ತಿದೆ ಎಂಬ ಬಗ್ಗೆ ಆತಂಕ ಹಾಗು ಕುತೂಹಲ ಉಳ್ಳವರು ಮತ್ತು ಹಾಗಾಗದಂತೆ ತಡೆಯಬೇಕು ಎಂಬ ಸೆಕ್ಯುಲಾರ್ ಮತ್ತು ಫೆಡರಲ್ ಬದ್ಧತೆಯುಳ್ಳವರು ಬಿಡುವು ಮಾಡಿಕೊಂಡು ಈ ಲೇಖನವನ್ನು ಓದಬೇಕೆಂದು ಆಗ್ರಹಿಸುತ್ತೇನೆ.

– ಶಿವಸುಂದರ್


ಇದನ್ನೂ ಓದಿ: ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸದಿದ್ದರೆ ಜಾಮೀನು ಪಡೆಯಲು ಅವಕಾಶ: ಆದರೂ ಉಳಿದಿವೆ ಕೆಲವು ಪ್ರಶ್ನೆಗಳು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights