ಐಎಂಎ ಪ್ರಕರಣ : ಬೆಳ್ಳಂಬೆಳಿಗ್ಗೆ ಮಾಜಿ ಸಚಿವ ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ!
ಇಂದು ಬೆಳ್ಳಂಬೆಳಿಗ್ಗೆ ಮಾಜಿ ಸಚಿವ ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದೆ. ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತನಿಖೆ ಚುರುಕುಗೊಳಿಸಿದ್ದು, ರೋಷನ್ ಬೇಗ್ ಬಂಧನ ನಂತರ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದೆ.
ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ರೋಷನ್ ಬೇಗ್ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ವಿಚಾರಣೆ ಬಳಿಕ ರೋಷನ್ ಬೇಗ್ ಅವರನ್ನು ಬಂಧಿಸಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆ ಮುಂದೆ ಹಾಜರು ಪಡಿಸಿದ್ದರು. ಬಳಿಕ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಸದ್ಯ ಪರಪ್ಪನ ಅಗ್ರಹಾರ ಜೈಲಿನ ಕ್ವಾರೆಂಟೈನ್ ಸೆಲ್‌ನಲ್ಲಿದ್ದಾರೆ. ಬಂಧನ ಆಗುತ್ತಿದ್ದಂತೆ ಇದೀಗ ಸಿಬಿಐ ದಾಳಿ ನಡೆದಿದೆ.
ಸಿಬಿಐ 7 ಅಧಿಕಾರಿಗಳ ತಂಡ ಕೋಲ್ಸ್ ಪಾರ್ಕ್ ನಲ್ಲಿರುವ ರೋಷನ್ ಬೇಗ್ ನಿವಾಸದ ಮೇಲೆ ದಾಳಿ ಮಾಡಿ ಮಹತ್ವದ ದಾಖಲಾತಿ ಪರಿಶೀಲನೆ ನಡೆಸುತ್ತಿದೆ. ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿ ಮನ್ಸೂರ್ ಖಾನ್ನಿಂದ ಸುಮಾರು 200 ಕೋಟಿ ರೂ. ಗೂ ಹೆಚ್ಚು ಹಣ ರೋಷನ್ ಬೇಗ್ ಪಡೆದಿದ್ದಾರೆ ಎಂಬ ಗುರುತರ ಆರೋಪ ಎದುರಿಸುತ್ತಿದ್ದಾರೆ. ಇದರ ಜೊತೆಗೆ ಐಷಾರಾಮಿ ಕಾರುಗಳೂ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ಉಡುಗೊರೆಗಳನ್ನೂ ರೋಷನ್ ಬೇಗ್ ಪಡೆದಿದ್ದಾರೆಂಬ ಆರೋಪವಿದೆ.
ಐಎಂಎ ಪ್ರಕರಣದಲ್ಲಿ ಬೇಗ್ ಹೆಸರು ಕೇಳಿ ಬರುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಯಾಗಿದ್ದರು. ಕಳೆದ ಉಪ ಚುನಾವಣೆ ವೇಳೆ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿದ್ದರು. ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವ ಉತ್ಸುಕತೆ ತೋರಿ, ಕೊನೆಗೆ ಚುನಾವಣಾ ಕಣದಿಂದ ದೂರ ಸರಿದಿದ್ದರು. ಐಎಂಎ ಬ್ಲೇಡ್ ಸ್ಕೀಮ್ ಗಳ ಮೂಲಕ ಬರೋಬ್ಬರಿ 4 ಸಾವಿರ ಕೋಟಿ ವಂಚನೆ ಮಾಡಿತ್ತು.

