ಹಳ್ಳಿಹಕ್ಕಿಗಿಲ್ಲ ಸಚಿವ ಸ್ಥಾನ; ಮಂತ್ರಿಗಿರಿಗೆ ವಿಶ್ವನಾಥ್‌ ಅನರ್ಹ: ಹೈಕೋರ್ಟ್‌ ತೀರ್ಪು

ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿಯಿಂದ ಎಂಎಲ್‌ಸಿ ಆಗಿ ಅಯ್ಕೆಯಾಗಿರುವ, ಸಚಿವ ಸ್ಥಾನದ ಆಕಾಂಕ್ಷಿ ಹಳ್ಳಿಹಕ್ಕಿ ಹೆಚ್‌ ವಿಶ್ವನಾಥ್‌ಗೆ ಮಂತ್ರಿ ಸ್ಥಾನ ನೀಡುವಂತಿಲ್ಲ. ಅವರು ಶಾಸಕರಾಗಿ ಅನರ್ಹಗೊಂಡಿದ್ದು, ಅವರ ಅನರ್ಹತೆ ಮುಂದುವರೆದಿದೆ ಎಂದು ಹೈಕೋರ್ಟ್  ಮಧ್ಯಂತರ ಆದೇಶ ನೀಡಿದೆ.

ವಿಶ್ವನಾಥ್, ಆರ್ ಶಂಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗಿಯ ಪೀಠ, ಯಾವುದೇ ಅನರ್ಹ ಶಾಸಕ ಅಮಾನತುಗೊಂಡ ಬಳಿಕ ಮರು ಆಯ್ಕೆಯಾಗುವವರೆಗೆ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬಾರದು ಎಂದು ಸಂವಿಧಾನದ ವಿಧಿ 164(1 ಬಿ) ಹಾಗೂ 361(ಬಿ) ಸ್ಪಷ್ಟವಾಗಿ ಹೇಳಿವೆ. ಎಚ್.ವಿಶ್ವನಾಥ್ ವಿಧಾನಸಭೆಗಾಗಲೀ, ಪರಿಷತ್ತಿಗಾಗಲೀ ಆಯ್ಕೆಯಾಗಿಲ್ಲ. ಬದಲಿಗೆ ನಾಮ ನಿರ್ದೇಶನಗೊಂಡಿದ್ದಾರೆ. ವಿಶ್ವನಾಥ್ ಅವರ ಅನರ್ಹತೆ ಮುಂದುವರಿದಿದ್ದು, ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸುವಂತಿಲ್ಲ. ಹೀಗಾಗಿ, ಸಚಿವ ಸ್ಥಾನಕ್ಕೆ ಹೆಸರುಗಳನ್ನು ಸೂಚಿಸುವಾಗ ಮುಖ್ಯಮಂತ್ರಿಗಳು ವಿಶ್ವನಾಥ್ ಅವರ ಅನರ್ಹತೆಯನ್ನು ಪರಿಗಣಿಸಬೇಕು ಎಂದು ಹೇಳಿದೆ.

ಮೇಲ್ಮನೆ ಸದಸ್ಯರಾದ ಆರ್.ಶಂಕರ್, ಎಂ.ಟಿ.ಬಿ ನಾಗರಾಜ್ ಅವರು ಚುನಾವಣೆಯಲ್ಲಿ ಆಯ್ಕೆಗೊಂಡು ಎಂ.ಎಲ್ ಸಿ ಆಗಿದ್ದಾರೆ. ಹೀಗಾಗಿ ಅವರಿಗೆ ಸಚಿವರಾಗಲು ಯಾವುದೇ ಅಡೆತಡೆಯಿಲ್ಲ ಎಂದು ತೀರ್ಪು ನೀಡಿದೆ.

ಸಂವಿಧಾನದ ವಿಧಿ 164(ಬಿ)ಯಲ್ಲಿ ಅನರ್ಹಗೊಂಡ ಶಾಸಕರು ಸಚಿವರಾಗುವುದಿದ್ದಲ್ಲಿ ಅವರು ವಿಧಾನಸಭೆ ಅಥವಾ ಪರಿಷತ್ತಿಗೆ ಮರು ಆಯ್ಕಯಾಗಿರಬೇಕು ಎಂದು ಹೇಳಿದೆ. ಅದರಂತೆ ನಾಗರಾಜ್ ಹಾಗೂ ಶಂಕರ್ ಪರಿಷತ್ತಿಗೆ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ. ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡದಂತೆ ಕೋರಿರುವ ಮನವಿಯನ್ನು ಪರಿಗಣಿಸಲು ಬರುವುದಿಲ್ಲ ಎಂದು ಹೇಳಿದೆ.

ಎಚ್.ವಿಶ್ವನಾಥ್, ಆರ್.ಶಂಕರ್, ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವುದನ್ನು ಪ್ರಶ್ನಿಸಿ ವಕೀಲ ಎ.ಎಸ್‌ ಹರೀಶ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ವಿಶ್ವನಾಥ್, ಆರ್.ಶಂಕರ್, ಎಂಟಿಬಿ ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡಬಾರದು. ಈ ಮೂವರು ಶಾಸಕರೂ ಜನರಿಂದ ನೇರವಾಗಿ ಆಯ್ಕೆಯಾಗಿಲ್ಲ. ಇವರು ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಅನರ್ಹರಾದವರು ಜನರಿಂದ ಮರು ಆಯ್ಕೆಯಾಗದೆ ಅವರು ಸಚಿವರಾಗುವಂತಿಲ್ಲ ಎಂದು ವಾದಿಸಿದರು.

ಆರ್ಟಿಕಲ್ 164 (1ಬಿ)ಯ ಪ್ರಕಾರ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದ ವ್ಯಕ್ತಿಯೊಬ್ಬರು ರಾಜ್ಯದ ವಿಧಾನಸಭೆ ಅಥವಾ ಪರಿಷತ್ ಸದಸ್ಯರಾಗಿರುವಾಗ 10ನೇ ಪರಿಚ್ಛೇದದ 2ನೇ ಕಲಂ ಅಡಿಯಲ್ಲಿ ಅನರ್ಹರಾದಲ್ಲಿ, ಅಂತಹ ಸದಸ್ಯರು, ಅವರು ಅನರ್ಹವಾದ ದಿನದಿಂದ ಸದಸ್ಯತ್ವ ಅವಧಿ ಮುಕ್ತಾಯವಾಗುವವರೆಗೆ ಅಥವಾ ವಿಧಾನಸಭೆ ಅಥವಾ ಪರಿಷತ್ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧಿಸಿ ಗೆಲುವು ಸಾಧಿಸುವವರೆಗೆ ಅವರು ಮತ್ತೆ ಸಚಿವರಾಗುವಂತಿಲ್ಲ. ಈ ಷರತ್ತುಗಳಲ್ಲಿ ಯಾವುದು ಮೊದಲು ಮುಕ್ತಾಯವಾಗುತ್ತದೋ ಅಂದಿನಿಂದ ಅವರು ಮತ್ತೆ ಸಚಿವರಾಗಬಹುದು.

ಎಚ್.ವಿಶ್ವನಾಥ್ ಚುನಾವಣೆಗೆ ಸ್ಪರ್ಧಿಸದೆ, ಸಾಹಿತಿ ಕೋಟಾದಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡು ವಿಧಾನ ಪರಿಷತ್ ಸದಸ್ಯರಾಗಿರುವುದರಿಂದ ಅವರಿಗೆ ಈ ಆರ್ಟಿಕಲ್ 164 (1ಬಿ) ಅಡಿಯಲಿ ಅನರ್ಹತೆ ಮುಂದುವರೆದಿದೆ.


ಇದನ್ನೂ ಓದಿ: ದಯವಿಟ್ಟು ಮೌನವಾಗಿರಿ: ಮೋದಿ ಸರ್ಕಾರ ತುಂಬಾ ಬ್ಯುಸಿಯಾಗಿದೆ! ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights