ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ವಿರೋಧ; ಹೋರಾಟಗಾರರ ಬಂಧನ!

ರಾಜ್ಯದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿದ್ದ ಭೂಸುಧಾರಣಾ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ ಬೆಂಬಲ ನೀಡಿದ್ದು, ಎರಡೂ ಸದನಗಳಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರವಾಗಿದೆ. ರೈತರ ಭೂಮಿ ಕಸಿದುಕೊಳ್ಳುತ್ತದೆ ಎಂದು ಆರೋಪಿಸಲಾಗಿರುವ ಈ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯಕರ್ತರು ಮತ್ತು ಹಲವಾರು ಹೋರಾಟಗಾರರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಈ ಕುರಿತು ಹೋರಾಟಗಾರರ ಬಂಧನದ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸರೋವರ್ ಬೆಂಕಿಕೆರೆ, “ಭೂ ಸುಧಾರಣಾ (ಸ್ವಾಧೀನ) ಕಾಯಿದೆಗೆ ತಿದ್ದುಪಡಿ ಅಂಗಿಕಾರ ಮಾಡಿರುವುದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ನಮ್ಮೆಲ್ಲರ ಬಂಧನವಾಗಿದೆ” ಎಂದು ಬರೆದುಕೊಂಡಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿದ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಮಸೂದೆಗೆ ಈ ಮೊದಲು ವಿರೋಧಿಸಿದ್ದ ಜೆಡಿಎಸ್ ಪಕ್ಷ ಇಂದು ಅಚ್ಚರಿಯ ರೀತಿಯಲ್ಲಿ ಬಿಜೆಪಿ ಪರವಾಗಿ ವಿಧಾನ ಪರಿಷತ್‌ನಲ್ಲಿ ಮಸೂದೆ ಪರ ಮತ ಹಾಕಿದೆ. ಇದರಿಂದ ಮಸೂದೆಯು ಕಾಯ್ದೆಯಾಗಿ ಅಂಗೀಕಾರಗೊಂಡಿದೆ.

ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಮಸೂದೆಗೆ ಆಗಸ್ಟ್ ಅಂತ್ಯದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಬಹುಮತವಿದ್ದ ಬಿಜೆಪಿ ಅಂಗೀಕರಿಸಿತ್ತು. ಆದರೆ ಅದೇ ಸಮಯದಲ್ಲಿ ವಿಧಾನಪರಿಷತ್‌ನಲ್ಲಿ ಆ ಮಸೂದೆಗೆ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ.

ಇಂದು ಕರ್ನಾಟಕ ಭೂ ಸುಧಾರಣೆ ಕಾಯ್ದೆ ಎರಡನೇ ತಿದ್ದುಪಡಿ ವಿಧೇಯಕವನ್ನು ಪರಿಷತ್ ನಲ್ಲಿ ಸಭಾಪತಿ ಮತಕ್ಕೆ ಹಾಕಿದರು. ಆಗ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಪರ ಜೆಡಿಎಸ್ ಸದಸ್ಯರು ಮತ ಚಲಾಯಿಸಿದ್ದಾರೆ. ಇದರಿಂದ ಹರ್ಷಗೊಂಡ ಬಿಜೆಪಿ ಸದಸ್ಯರು ಮೇಜು ಕಟ್ಟುವ ಮೂಲಕ ಸ್ವಾಗತಿಸಿದ್ದಾರೆ.

ವಿಧಾನ ಪರಿಷತ್‌ನಲ್ಲಿ ವಿಧೇಯಕದ ಪರವಾಗಿ 37 ಮತಗಳು ಹಾಗೂ ವಿಧೇಯಕದ ವಿರುದ್ದವಾಗಿ 21 ಮತಗಳು ಬಿದ್ದಿವೆ. ಹಾಗಾಗಿ ಕೊನೆಗೂ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಅಂಗೀಕಾರವಾಗಿದೆ.


ಇದನ್ನೂ ಓದಿ: ಭಾರತ್‌ ಬಂದ್‌ಗೆ ಸೈನಿಕ ಬೆಂಬಲ; ಹುಬ್ಬಳ್ಳಿಯಲ್ಲಿ ಸೈನಿಕನನ್ನು ಬಂಧಿಸಿದ ಪೊಲೀಸರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights