BJP ಸರ್ಕಾರದ ಭೂಸುಧಾರಣಾ ಮಸೂದೆಗೆ JDS ಬೆಂಬಲ; ಪರಿಷತ್ನಲ್ಲಿ ಅಂಗೀಕಾರ!
ಲಾಕ್ಡೌನ್ ಸಮಯದಲ್ಲಿ ರಾಜ್ಯ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದ್ದ ಕರ್ನಟಕ ಭೂಸುಧಾರಣಾ ತಿದ್ದುಪಡಿ ಮಸೂದೆಗೆ ವಿಧಾನ ಪರಿಷತ್ನಲ್ಲಿ ಜೆಡಿಎಸ್ ಬೆಂಬಲ ನೀಡಿದ್ದು, ಮಸೂದೆ ಅಂಗೀಕಾರಗೊಂಡಿದೆ. ಕಳೆದ ಅಧಿವೇಶನದಲ್ಲಿ ಈ ಮಸೂದೆಗಳನ್ನು ವಿರೋಧಿಸಿದ್ದ ಜೆಡಿಎಸ್, ಇದೀಗ ಅದೇ ಮಸೂದೆ ಬೆಂಬಲ ಸೂಚಿಸಿರುವುದು ಆಶ್ಚರ್ಯವನ್ನೂ, ದಿಗ್ಭ್ರಮೆಯನ್ನೂ ಉಂಟುಮಾಡಿದೆ.
ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಮಸೂದೆಗೆ ಆಗಸ್ಟ್ ಅಂತ್ಯದಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಬಹುಮತವಿದ್ದ ಬಿಜೆಪಿ ಅಂಗೀಕರಿಸಿತ್ತು. ಆದರೆ ಅದೇ ಸಮಯದಲ್ಲಿ ವಿಧಾನಪರಿಷತ್ನಲ್ಲಿ ಆ ಮಸೂದೆಗೆ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಒಗ್ಗೂಡಿ ಮಸೂದೆಯನ್ನು ವಿರೋಧಿಸಿದ್ದವು.
ಆದರೆ, ಇಂದು ಕರ್ನಾಟಕ ಭೂ ಸುಧಾರಣೆ ಕಾಯ್ದೆ ಎರಡನೇ ತಿದ್ದುಪಡಿ ವಿಧೇಯಕವನ್ನು ಪರಿಷತ್ ನಲ್ಲಿ ಸಭಾಪತಿ ಮತಕ್ಕೆ ಹಾಕಿದರು. ಆಗ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಪರ ಜೆಡಿಎಸ್ ಸದಸ್ಯರು ಮತ ಚಲಾಯಿಸಿದ್ದಾರೆ. ಇದರಿಂದ ಹರ್ಷಗೊಂಡ ಬಿಜೆಪಿ ಸದಸ್ಯರು ಮೇಜು ಕಟ್ಟುವ ಮೂಲಕ ಸ್ವಾಗತಿಸಿದ್ದಾರೆ.
ಇದನ್ನೂ ಓದಿ: ರೈತ ಪ್ರತಿಭಟನೆಯನ್ನು ಮೋದಿ ಸರ್ಕಾರ ಮಣಿಸಲಾಗದು: 05 ಕಾರಣಗಳು
ವಿಧಾನ ಪರಿಷತ್ನಲ್ಲಿ ವಿಧೇಯಕದ ಪರವಾಗಿ 37 ಮತಗಳು ಹಾಗೂ ವಿಧೇಯಕದ ವಿರುದ್ದವಾಗಿ 21 ಮತಗಳು ಬಿದ್ದಿವೆ. ಹಾಗಾಗಿ ಕೊನೆಗೂ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ಅಂಗೀಕಾರವಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಪಕ್ಷವು ತನ್ನನ್ನು ಬಿಜೆಪಿಗೆ ಮಾರಿಕೊಂಡಿದೆ ಎಂದು ರೈತರು ಕಿಡಿಕಾರಿದ್ದಾರೆ. ಏಕಾಏಕಿ ಮೌರ್ಯ ಸರ್ಕಲ್ ನಲ್ಲಿ ಹೋರಾಟಗಾರರು ರಸ್ತೆತಡೆ ಆರಂಭಿಸಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ರಸ್ತೆ ತಡೆ ಪ್ರತಿಭಟನೆ ಮುಂದುವರೆಯುತ್ತಿದ್ದು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಭೂ ಸುಧಾರಣಾ ಕಾಯಿದೆಗೆ ಹೊಸ ತಿದ್ದುಪಡಿ ಪ್ರಕಾರ ಈಗ ಒಬ್ಬರು 450 ಎಕರೆಗೂ ಹೆಚ್ಚು ಕೃಷಿ ಭೂಮಿ ಹೊಂದಬಹುದು. ಇಂತಹ ಕರಾಳ ತಿದ್ದುಪಡಿ ತರಲು ಕಾರ್ಪೋರೇಟ್ ಗಳ ಜೊತೆ ಮಾರಿಕೊಂಡು ಶಾಮೀಲಾಗಿರುವ ಜೆಡಿಎಸ್, ಬಿಜೆಪಿಗೆ ಧಿಕ್ಕಾರ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ರೈತ ಹೋರಾಟಗಾರರಿಂದ ಪ್ರಧಾನಿಗೆ ಪತ್ರ: ರೈತರು ಪತ್ರದಲ್ಲಿ ಹೇಳಿದ್ದೇನು?

