ವಿಧಾನಪರಿಷತ್ ನಲ್ಲಿ ಗಲಾಟೆ : ಬಿಜೆಪಿ-ಕಾಂಗ್ರೆಸ್ ಸದಸ್ಯರಿಂದ ನೂಕಾಟ-ತಳ್ಳಾಟ…!
ವಿಧಾನಪರಿಷತ್ ನಲ್ಲಿ ಬಿಜೆಪಿ- ಕಾಂಗ್ರೆಸ್ ಸದಸ್ಯರಿಂದ ತಳ್ಳಾಟ-ನೂಕಾಟ ನಡೆದಿದ್ದು, ಕಲಾಪ ಮುಂದೂಡಿದರೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ಉಪಸಭಾಪತಿಯನ್ನು ಸದಸ್ಯರು ತಳ್ಳಾಡಿ ಎಳೆದಾಡಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ಚರ್ಚಿಸಲು ಇಂದು ವಿಧಾನ ಪರಿಷತ್ ಕಲಾಪ ನಡೆದಿತ್ತು. ಈ ವೇಳೆ ಸಭಾಪತಿಗಳನ್ನು ಪೀಠದಲ್ಲಿ ಕೂರಲು ಬಿಡದೆ ಬಿಜೆಪಿಯವರು ಗಲಾಟೆ ನಡೆಸಿದ್ದರಿಂದ ಹಾಗೂ ಕಲಾಪದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷದವರಿಂದ ಹೈಡ್ರಾಮಾ ನಡೆದಿದೆ. ಕಲಾಪ ಮುಂದೂಡಿದರೂ ಮೂರು ಪಕ್ಷದ ಸದಸ್ಯರೂ ಎಳೆದಾಟದ ಮೂಲಕ ಗಲಾಟೆ ಮಾಡಿದ್ದಾರೆ. ವಿಧಾನಪರಿಷತ್ ಸಭಾಪತಿ ಪೀಠದಲ್ಲಿ ಕೂಡದಂತೆ ಎಳೆದಾಡಲಾಗಿದೆ. ವಿಧಾನ ಪರಿಷತ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಇಂದು ಕೋಲಾಹಲ, ಸಭಾ ಪೀಠವನ್ನು ಧ್ವಂಸ ಮಾಡಲು ಪ್ರಯತ್ನ ಮಾಡಿದ ಘಟನೆಯೂ ನಡೆದಿದೆ. ಸಭಾಪೀಠಕ್ಕೆ ಹಾನಿ ಉಂಟು ಮಾಡಿದ ವಿಧಾನ ಪರಿಷತ್ ಸದಸ್ಯರು, ಗ್ಲಾಸ್ ಮೈಕ್ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಕೆಎಸ್ ಈಶ್ವರಪ್ಪ ಕಾಂಗ್ರೆಸ್ ನಡೆಯನ್ನು ಖಂಡಿಸಿದ್ದಾರೆ. ಇಂದಿನ ಕಲಾಪದಲ್ಲಿ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದೆ. ಇದಕ್ಕೆ ಜೆಡಿಎಸ್ ಕೂಡ ಬೆಂಬಲ ಸೂಚಿಸುವ ಮೂಲಕ ಕಾಂಗ್ರೆಸ್ಗೆ ಶಾಕ್ ನೀಡಿದೆ. ಗೋಹತ್ಯೆ ನಿಷೇಧ ಮಸೂದೆ ಮಂಡನೆಗೆ ಅವಕಾಶ ನೀಡದ ಸಭಾಪತಿ ವಿರುದ್ಧ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇಂದಿನ ಕಲಾಪದಲ್ಲಿ ಹೈಡ್ರಾಮಾ ನಡೆದಿದ್ದು, ಅವಿಶ್ವಾಸ ನಿರ್ಣಯ ಮಂಡನೆ ಆಗಿರುವುದರಿಂದ ಸಭಾಪತಿಗಳು ಪೀಠದಲ್ಲಿ ಕೂರುವಂತಿಲ್ಲ ಎಂದು ಬಿಜೆಪಿ ಪಟ್ಟು ಹಿಡಿದಿತ್ತು. ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಸರಿಯಾಗಿ ಕಲಾಪವನ್ನು ನಡೆಸಿಲ್ಲ ಎಂದು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಆರೋಪಿಸಿದ್ದರು. ಪರಿಷತ್ ಗೆ ವಿಶೇಷವಾದ ಗೌರವವಿದೆ. ಆದರೆ ಈ ರೀತಿಯ ಘಟನೆಯ ಹೊಣೆಯನ್ನು ಮೂರು ಪಕ್ಷಗಳು ಹೋರಬೇಕಾಗುತ್ತದೆ.

