ಭಾರತ v/s ಆಸ್ಟ್ರೇಲಿಯಾ: ಮೊದಲ ಟೆಸ್ಟ್ನಲ್ಲೇ ಹೀನಾಯ ಸೋಲುಂಡ ಭಾರತ ತಂಡ!
ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಮೊದಲನೇ ಟೆಸ್ಟ್ ಪಂದ್ಯದಲ್ಲಿ 08 ವಿಕೆಟ್ಗಳಿಂದ ಭಾರತ ತಂಡವನ್ನು ಅಸ್ಟ್ರೇಲಿಯಾ ತಂಡ ಮಣಿಸಿದೆ.
ಎರಡನೇ ದಿನವೂ ಮುಂದುವರೆದ ಮ್ಯಾಚ್ನಲ್ಲಿ ಕೊಹ್ಲಿ ಪಡೆ 21.2 ಓವರ್ಗಳಿಗೆ ಕೇವಲ 36 ರನ್ಗಳಿಗೆ 9 ವಿಕೆಟ್ಗಳನ್ನು ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡಕ್ಕೆ 90 ರನ್ ಗುರಿ ನೀಡಿತು.
ಮೊದಲನೇ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ್ದ ಭಾರತದ ಬ್ಯಾಟ್ಸ್ಮನ್ಗಳು, ದ್ವಿತೀಯ ಇನಿಂಗ್ಸ್ನಲ್ಲಿ ವಿಫಲರಾದರು. ಮಯಾಂಕ್ ಅಗರ್ವಾಲ್ 9 ರನ್, ವಿರಾಟ್ ಕೊಹ್ಲಿ 4 ರನ್, ಪೃಥ್ವಿ ಶಾ 4 ರನ್ ಗಳಿಸಿದರೆ, ಚೇತೇಶ್ವರ ಪೂಜಾರ ಹಾಗೂ ರಹಾನೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಹನುಮ ವಿಹಾರಿ 8 ಹಾಗೂ ವೃದ್ದಿಮಾನ್ ಸಹಾ 4 ರನ್ ಗಳಿಗೆ ಸೀಮಿತರಾದರು. ಆರಂಭದಿಂದಲೇ ಮಾರಕ ದಾಳಿ ನಡೆಸಿದ್ದ ಆಸ್ಟ್ರೇಲಿಯಾ ಬೌಲರ್ಗಳು ಭಾರತದ ಬ್ಯಾಟ್ಸ್ಮನ್ಗಳನ್ನು ನಿಯಮಿತವಾಗಿ ಪೆವಿಲಿಯನ್ಗೆ ಕಳುಹಿಸುವಲ್ಲಿ ಸಫಲರಾದರು.
ಮೊದಲನೇ ಇನಿಂಗ್ಸ್ನಲ್ಲಿ ಒಂದೇ ಒಂದು ವಿಕೆಟ್ ಪಡೆದಿದ್ದ ಜಾಶ್ ಹೇಝಲ್ವುಡ್ ದ್ವಿತೀಯ ಇನಿಂಗ್ಸ್ನಲ್ಲಿ ಭಾರತಕ್ಕೆ ಸಿಂಹ ಸ್ವಪ್ನರಾದರು. ಒಟ್ಟು ಐದು ಓವರ್ ಬೌಲಿಂಗ್ ಮಾಡಿದ ಹೇಝಲ್ವುಡ್, ಕೇವಲ 8 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್ ನೀಡಿದ ಪ್ಯಾಟ್ ಕಮಿನ್ಸ್ 10.2 ಓವರ್ಗಳಿಗೆ 21 ರನ್ ನೀಡಿ ನಾಲ್ಕು ವಿಕೆಟ್ಗಳನ್ನು ಸೇರಿಸಿಕೊಂಡರು.
ನಂತರ 90 ರನ್ ಗುರಿ ಹಿಂಬಾಲಿಸಿದ ಆಸ್ಟ್ರೇಲಿಯಾ ತಂಡ 21 ಓವರ್ಗಳಿಗೆ 2 ವಿಕೆಟ್ ನಷ್ಟಕ್ಕೆ 93 ರನ್ ಗಳಿಸಿ, 8 ವಿಕೆಟ್ಗಳ ಗೆಲುವಿನ ನಗೆ ಬೀರಿತು. ಮ್ಯಾಥ್ಯೂ ವೇಡ್ 33 ರನ್ ಗಳಿಸಿ ಔಟಾದರೆ, ಜೋ ಬರ್ನ್ಸ್ ಅಜೇಯ 51 ರನ್ ಗಳಿಸಿ ತಂಡವನ್ನು ಬಹುಬೇಗ ಗೆಲುವಿನ ದಡ ಸೇರಿಸಿದರು. ಭಾರತದ ಪರ ಆರ್ ಅಶ್ವಿನ್ ಒಂದೇ ಒಂದು ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ಭಾರತ v/s ಆಸ್ಟ್ರೇಲಿಯಾ ಟೆಸ್ಟ್: ಸಾಧಾರಣ ಪ್ರದರ್ಶನ ನೀಡಿದ ಭಾರತ ತಂಡ!

