ಸಚಿವ ಬಿ.ಸಿ ಪಾಟೀಲ್‌ಗೆ ಚಳಿ ಬಿಡಿಸಿದ ಕೃಷಿಕರು; ರೈತರದ್ದು ವೀಕ್ ಮೈಂಡ್ ಎಂದ ಸಚಿವ!
ಕೃಷಿ ಸಚಿವ ಬಿ.ಸಿ. ಪಾಟೀಲ್‌ಗೆ ಯಾವ ಕಾಲದಲ್ಲಿ ಭತ್ತ ನಾಟಿ ಮಾಡುತ್ತಾರೆ ಎಂಬುದೇ ಗೊತ್ತಿಲ್ಲ. ಅಂತವರನ್ನು ತಂದು ಕೃಷಿ ಸಚಿವರನ್ನಾಗಿ ಮಾಡಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಮೈಸೂರಿಗೆ ತೆರಳಿದ್ದ ಬಿ.ಸಿ ಪಾಟೀಲ್ ಅವರನ್ನು ತರಾಟೆಗೆ ತೆಗದುಕೊಂಡ ರೈತರು, ಜಿಲ್ಲಾಡಳಿತವನ್ನು ಕೇಳಿದರೆ ಸರ್ಕಾರ ಆದೇಶ ಮಾಡಬೇಕು ಅನ್ನುತ್ತಾರೆ. ಆಡಳಿತ ನಡೆಸುವವರಿಗೆ ರೈತರ ಬಗ್ಗೆ ಸಾಮಾನ್ಯ ಅವರಿವೂ ಇಲ್ಲ. ಆಡಳಿತ ನಡೆಸಲು ಗೊತ್ತಿಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ರೈತರು ಕಿಡಿಕಾರಿದ್ದಾರೆ.
‘ರೈತರು ಬೆಳೆದ ಅನ್ನ ತಿಂದು ನೀವು ಮಜಾ ಮಾಡುತ್ತಿದ್ದೀರಿ. ಹಸಿರು ಶಾಲು ಹಾಕ್ಕೊಂಡು ರೈತರ ಮರ್ಯಾದೆ ಕಳೆಯುತ್ತಿದ್ದೀರಿ. ನಿಮ್ಮ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಕೃಷಿ ಸಚಿವರನ್ನು ಅಡ್ಡಗಟ್ಟಿ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರೈತರ ತರಾಟೆಗೆ ಕೆಲಕಾಲ ತಬ್ಬಿಬ್ಬಾದ ಬಿ.ಸಿ ಪಾಟೀಲ್, ನೀವು ಆ ರೀತಿ ಮಾತನಾಡಬಾರದು ಎಂದು ಹೇಳಿದ್ದು, ಮತ್ತಷ್ಟು ಸಿಟ್ಟಾದ ರೈತರು, ‘ನೀವು ಹೇಳಿದ್ದನ್ನೆಲ್ಲಾ ಕೇಳಿಕೊಂಡು ಕೈಮುಗಿದು ನಿಲ್ಲಬೇಕಾ? ನೀವೇನು ಆಕಾಶದಿಂದ ಧರೆಗಿಳಿದು ಬಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ.
ಮೈಸೂರಿನಲ್ಲಿ ರೈತ ಆತ್ಮಹತ್ಯೆಯ ಬಗ್ಗೆ ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ರೈತರ ಮೈಂಡ್ ವೀಕ್ ಆದಾಗ ಅವರು ಆತ್ಮಹತ್ಯೆ ನಿರ್ಧಾರ ಮಾಡುತ್ತಾರೆ. ಇದಕ್ಕೆ ಸರ್ಕಾರದ ನೀತಿಗಳು ಕಾರಣವಲ್ಲ. ಕೇವಲ ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳೊದಿಲ್ಲ. ಉದ್ಯಮಿಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಎಲ್ಲವನ್ನು ರೈತ ಆತ್ಮಹತ್ಯೆ ಅಂತ ಹೇಳಲು ಆಗುವುದಿಲ್ಲ ಎಂದು ಹೇಳಿದ್ದು, ಮತ್ತೆ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ: ಚುನಾವಣಾ ಸಮೀಕ್ಷೆ: ಬಂಗಾಳದಲ್ಲಿ ಮಮತಾ; ತಮಿಳಲ್ಲಿ ಸ್ಟ್ಯಾಲಿನ್‌ಗೆ ಅಧಿಕಾರ; BJPಗೆ ಮುಖಭಂಗ?

