ಕಾಂಗ್ರೆಸ್‌ ಆಂತರಿಕ ಬಿಕ್ಕಟ್ಟು: ಗೆಹ್ಲೋಟ್-ಆನಂದ್‌ ಶರ್ಮಾ ನಡುವೆ ವಾಕ್ಸಮರ?

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಬಿಕ್ಕಟ್ಟು ಸದ್ಯದಲ್ಲೇ ಶಮನವಾಗುವ ಯಾವುದೇ ಸೂಚನೆಗಳು ಕಾಣುತ್ತಿಲ್ಲ. ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ದ ಪಕ್ಷದ ಹಲವು ನಾಯಕರೇ ಅಸಮಾಧಾನಗೊಂಡಿದ್ದಾರೆ. ಇದು ಪದೇ ಪದೇ ಪುನರಾವರ್ತನೆಯಾಗುತ್ತಲೇ ಇದೆ. ಈ ನಡುವೆ ಶುಕ್ರವಾರ ನಡೆದ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಆನಂದ್‌ ಶರ್ಮಾ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಅಧ್ಯಕ್ಷೆಯ ವಿರುದ್ದ ಅಸಮಾಧಾನಗೊಂಡಿರುವ ಪ್ರಮುಖ ನಾಯಕರು ಪದಾಧಿಕಾರಿಗಳ ಆಯ್ಕೆಗೂ ಚುನಾವಣೆ ನಡೆಸಬೇಕು ಎಂದು ಪತ್ರ ಬರೆದಿದ್ದಾರೆ. ಅತ್ಯುನ್ನತ ನಿರ್ಣಯ ಕೈಗೊಳ್ಳುವ ಸಂಸ್ಥೆಗೆ ದಶಕಗಳಿಂದಲೂ ಚುನಾವಣೆ ಇರಲಿಲ್ಲ. ಆದರೆ, ಇದೀಗ ದಿಢೀರನೆ ಚುನಾವಣೆ ನಡೆಸಬೇಕು ಎಂದು ಪತ್ರ ಬರೆದಿರುವುದು ಸರಿಯಲ್ಲ ಎಂದು ಪತ್ರ ಬರೆದವರ ವಿರುದ್ದ ಗೆಹ್ಲೋಟ್‌ ವಾಗ್ದಾಳಿ ನಡೆಸಿದ್ದಾರೆ. ಗೆಹ್ಲೋಟ್‌ ಅವರ ನಡೆ ಪಕ್ಷದ ನಾಯಕರಿಗೆ ಅಗೌರವ ಉಂಟುಮಾಡುವಂತಿದೆ. ಇದು ಸರಿಯಲ್ಲ ಎಂದು ಆನಂದ್ ಶರ್ಮಾ ಪ್ರತಿದಾಳಿ ನಡೆಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ತಮಿಳು, ಬಂಗಾಳ ಚುನಾವಣೆಯ ನಂತರ ಕಾಂಗ್ರೆಸ್‌ಗೆ ಚುನಾಯಿತ ಅಧ್ಯಕ್ಷರು ಖಚಿತ: ವೇಣುಗೋಪಾಲ್

ಈ ಇಬ್ಬರು ನಾಯಕರ ಜಟಾಪಟಿಯ ಮಧ್ಯ ಪ್ರವೇಶಿಸಿದ ರಾಹುಲ್‌ಗಾಂಧಿ, ಇಬ್ಬರನ್ನೂ ಸಮಾಧಾನ ಪಡಿಸಿದ್ದು, ಚುನಾವಣೆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳೋಣ. ಸದ್ಯ, ರೈತರ ಹೋರಾಟದ ಬಗ್ಗೆ ಗಮನ ಕೊಡೋಣ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ರಂದೀಪ್ ಸುರ್ಜೇವಾಲ, ಸಭೆಯಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪದಾಧಿಕಾರಿಗಳ ಚುನಾವಣೆ ವಿಚಾರದಲ್ಲಿ ಯಾವುದೇ ವಿವಾದವಿಲ್ಲ. ಈ ವಿಚಾರದಲ್ಲಿ ಪಕ್ಷದ ಸಂವಿಧಾನವನ್ನು ಅಧ್ಯಯನ ಮಾಡಿ, ನಂತರ ಕ್ರಮ ಕೈಗೊಳ್ಳಲಾಗುವುದು. ಮೊದಲು ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯನ್ನು ನಡೆಯಲಿದ್ದು, ನಂತರ ಸಿಡಬ್ಲ್ಯೂಸಿ ಚುನಾವಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಬೇಕು ಹಿರಿಯ ನಾಯಕರಾದ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ ಮತ್ತು ಕಪಿಲ್ ಸಿಬಲ್ ಸೇರಿದಂತೆ ಹಲವು ನಾಯಕರು ಕೆಲವು ತಿಂಗಳುಗಳ ಹಿಂದೆ ಪತ್ರ ಬರೆದಿದ್ದರು.

ಇದನ್ನೂ ಓದಿ: ಬಂಗಾಳ ಚುನಾವಣೆ: ಕಾಂಗ್ರೆಸ್‌-ಸಿಪಿಎಂ ಮೈತ್ರಿ; BJP-TMCಗಳನ್ನು ಮೀರಿಸಿ ಅಧಿಕಾರ ಹಿಡಿಯುತ್ತಾ ಎಡರಂಗ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights