ಬಡವರ ಭೂಮಿ ಕಿತ್ತುಕೊಳ್ಳಲು ಮುಂದಾಗಿರುವ ಸರ್ಕಾರ; ವಸತಿ ವಂಚಿತರನ್ನು ಬೀದಿ ಪಾಲು ಮಾಡುತ್ತಿದೆ: ಕುಮಾರ್ ಸಮತಳ
ರಾಜ್ಯದ ಬಡಜನರು, ಭೂಮಿ ಮತ್ತು ವಸತಿ ವಂಚಿತರು ಹಲವಾರು ಯೋಜನೆಗಳು ಮತ್ತು ಕಾಯ್ದೆಗಳ ಅಡಿಯಲ್ಲಿ ತಮ್ಮ ವಸತಿಯ ಹಕ್ಕು ಪತ್ರಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಿ ವರ್ಷಗಳೇ ಕಳೆಯುತ್ತಿವೆ. ಆದರೂ, ಸರ್ಕಾರ ಬಡವರಿಗೆ ಯಾವುದೇ ಹಕ್ಕು ಪತ್ರಗಳನ್ನು ನೀಡಿಲ್ಲ. ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕು ಎಂದು ಆಗ್ರಹಿಸಿ ಬಡವರು ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸದಸ್ಯರು ಬೆಂಗಳೂರಿನಲ್ಲಿ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ.
ದಶಕಗಳ ಕಾಲದಿಂದ ಬಡವರು ವಿವಿಧ ರೀತಿಯ ಸರ್ಕಾರಿ ಭೂಮಿಗಳಲ್ಲಿ ಮನೆ ಕಟ್ಟಿಕೊಂಡು ಹಾಗೂ ಬೇಸಾಯ ಮಾಡಿಕೊಂಡು ಬದುಕುತ್ತಿದ್ದಾರೆ. ಅವುಗಳ ಮಂಜೂರಾತಿಗಾಗಿ ಸರ್ಕಾರವು ನಿಗದಿಪಡಿಸಿದ ಫಾರಂ ನಂ 50, 53, 57ರಲ್ಲಿ ಸುಮಾರು 30 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. “ಅಕ್ರಮ-ಸಕ್ರಮ” ಯೋಜನೆಯಡಿ (94ಸಿ/94ಸಿಸಿ) ಮನೆ ನಿವೇಶನದ ಹಕ್ಕುಪತ್ರಕ್ಕಾಗಿಯೂ ಲಕ್ಷಾಂತರ ಅರ್ಜಿಗಳನ್ನು ಸರ್ಕಾರ ಸ್ವೀಕರಿಸಿದೆ. ಅರಣ್ಯ ಹಕ್ಕು ಕಾಯ್ದೆ 2006ರಡಿಯಲ್ಲೂ ಅಂದಾಜು ಎರಡು ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈವರೆಗೂ ಬಡವರ ಯಾವುದೇ ಅರ್ಜಿಗಳಿಗೆ ಹಕ್ಕುಪತ್ರಗಳನ್ನು ನೀಡಿಲ್ಲ ಎಂದು ಹೋರಾಟ ಸಮಿತಿಯ ಕುಮಾರ್ ಸಮತಳ ಆರೋಪಿಸಿದ್ದಾರೆ.
ಅಲ್ಲದೆ, ಇದೀಗ ಎಲ್ಲ “ಅರ್ಹವಲ್ಲದ” ಭೂ ಮಂಜೂರಾತಿ ಅರ್ಜಿಗಳನ್ನೂ ಕೂಡಲೇ ರದ್ದುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಒತ್ತುವರಿ/ ಕಬಳಿಕೆ ಆಗಿರುವ ಎಲ್ಲ ಭೂಮಿಯನ್ನೂ ತೆರವುಗೊಳಿಸಿ, ಹರಾಜು ಅಥವಾ ಮಾರಾಟ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ಮೂಲಕ, ಬಡವರ “ಅಕ್ರಮ” ಮನೆ-ಜಮೀನುಗಳನ್ನು ಭೂಮಿಗಳನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾಗಿದೆ. ಈ ಅಧಿಸೂಚನೆಯನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ವಸತಿ ಮತ್ತು ಭೂಮಿ ವಂಚಿತರಿಗೆ ಹಕ್ಕುಪತ್ರಗಳನ್ನು ನೀಡಬೇಕು ಎಂದು ಕಳೆದ ಐದು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಮನವಿಗಳನ್ನು ಸಲ್ಲಿಸಿ ಮೂರು ಬಾರಿ ಭೇಟಿ ಮಾಡಲಾಗಿದೆ. ಆದರೆ ‘ಉನ್ನತ ಮಟ್ಟದ ಸಭೆ ಕರೆದು ಎಲ್ಲ ಸಮಸ್ಯೆಗಳನ್ನು ಇತ್ಯರ್ಥಪಡಿಸುವುದಾಗಿ” ಅವರು ನೀಡಿದ್ದ ಆಶ್ವಾಸನೆ ಈಡೇರಿಸುವ ಬದಲು ಇದೀಗ “ಅನರ್ಹ” ಎಂಬ ಹೆಸರಿನಲ್ಲಿ ಎಲ್ಲ ಅರ್ಜಿಗಳನ್ನೂ ರದ್ದುಪಡಿಸಿ, ಲಕ್ಷಾಂತರ ಬಡ ಕುಟುಂಬಗಳನ್ನು ಶಾಶ್ವತವಾಗಿ ಭೂರಹಿತ-ವಸತಿ ರಹಿತರನ್ನಾಗಿಸಿ ಬೀದಿಪಾಲು ಮಾಡಲು ಹೊರಟಿದೆ ಎಂದು ಅವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಭೂಮಾಲೀಕರ ದರ್ಪ, ಭೂ ಹೀನ ದಲಿತರ ದೈನ್ಯತೆ ತೊಲಗಲು ಭೂಮಿ ರಾಷ್ಟ್ರೀಕರಣವಾಗಬೇಕು: ಅಂಬೇಡ್ಕರ್

