ಆಂಧ್ರ ಪ್ರದೇಶ ಚುನಾವಣೆ: YSR ಕಾಂಗ್ರೆಸ್ ವಿರುದ್ದ ಖಾತೆ ತೆರೆಯುತ್ತಾ BJP?
ಆಂಧ್ರಪ್ರದೇಶದಲ್ಲಿ ಗ್ರಾಮ ಪಂಚಾಯತಿ ಚುನಾವಣಾ ಕಣ ರಂಗೇರಿದೆ. ಇಂದು (ಮಂಗಳವಾರ) ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, ಕೊನೆ ಹಂತದ ಚುನಾವಣೆ ಫೆ. 21ರಂದು ನಡೆಯಲಿದೆ. 2019ರಲ್ಲಿ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಶೂನ್ಯ ಸಂಪಾದನೆ ಮಾಡಿದ್ದು, YSR ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತ್ತು. ಇದೀಗ ಈ ಎರಡೂ ಪಕ್ಷಗಳಿಗೆ ಸ್ಥಳೀಯ ಚುನಾವಣೆಯಲ್ಲಿ ತಮ್ಮ ಪ್ರಬಲ್ಯ ಪರೀಕ್ಷೆ ಎದುರಾಗಿದ್ದು, ಗ್ರಾಮ ಪಂಚಾಯತಿಗಳಲ್ಲಾದರೂ ಗೆಲ್ಲುತ್ತೇವೆಯೇ ಎಂದು ಆತಂಕ-ಅನುಮಾನ ಎರಡೂ ಪಕ್ಷಗಳಲ್ಲಿದೆ.
ಆಂಧ್ರಪ್ರದೇಶದ ಒಟ್ಟು 20,157 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ ಇಂದು ಮೊಲದ ಹಂತದ ಚುನಾವಣೆಯಲ್ಲಿ 3,349 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇವರಲ್ಲಿ ಈಗಾಗಲೇ 525 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಸದ್ಯ, ಇಂದು 2,723 ಸ್ಥಾನಗಳಿಗೆ ಅಭ್ಯರ್ಥಿಗಳು ಚುನಾವಣೆಯನ್ನು ಎದುರಿಸುತ್ತಿದ್ದಾರೆ.
ಆಂಧ್ರ ಪ್ರದೇಶದ ಗ್ರಾಮ ಪಂಚಾಯತಿಗಳಿಗೆ 04 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಫೆಬ್ರವರಿ 21ರ ವರೆಗೆ ಚುನಾವಣೆಗಳು ನಡೆಯಲಿವೆ. ಎಲ್ಲಾ ಮತಗಟ್ಟೆಗಳಲ್ಲೂ ಬ್ಯಾಲಟ್ ಪೇಪರ್ ಗಳ ಮುಖಾಂತರ ಮತದಾನ ನಡೆಯುತ್ತಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಈ ಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಪಕ್ಷದ ಚಿನ್ಹೆಗಳನ್ನು ಬಳಸಲಾಗುತ್ತಿಲ್ಲವಾದರೂ, ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಗೆಲುವಿನ ಆಧಾರ ಮೇಲೆ ತಳಮಟ್ಟದಲ್ಲಿ ಪಕ್ಷಗಳ ವರ್ಚಸ್ಸು ನಿರ್ಧಾರವಾಗುತ್ತದೆ.
ಸದ್ಯ ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ಮೋಹನ ರೆಡ್ಡಿ ನೇತೃತ್ವದ YSR ಕಾಂಗ್ರೆಸ್ ಮತ್ತು ಚಂದ್ರಬಾಬುನಾಯ್ಡು ನೇತೃತ್ವದ TDP ಪಕ್ಷಗಳು ತೀವ್ರ ಪೈಪೋಟಿಯಲ್ಲಿವೆ.
ಇದನ್ನೂ ಓದಿ: ದೆಹಲಿ ಸಿಎಂ ಕೇಜ್ರಿವಾಲ್ ಪುತ್ರಿಗೆ ಇ-ಕಾಮರ್ಸ್ ಪ್ಲಾಟ್ಫಾರ್ಮ್ನಲ್ಲಿ 34,000 ರೂ ವಂಚನೆ!

