ಭಾರೀ ಮಳೆಗೆ ಒಡೆದ ಕೆರೆ : ಸಂಕಷ್ಟಕ್ಕೆ ಸಿಲುಕಿದ ನೂರಾರು ಕುಟುಂಬಗಳು…

ಭಾರೀ ಮಳೆಯ ಪರಿಣಾಮ ದೊಡ್ಡಬಿದರಕಲ್ಲು ಕೆರೆ ಒಡೆದು ನೂರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಮೊನ್ನೆ ರಾತ್ರಿ ಸುರಿದ ಮಳೆಯಿಂದಾಗಿ ದೊಡ್ಡಬಿದರಕಲ್ಲು ಕೆರೆ ಕಟ್ಟೆ ಒಡೆದು ನೀರು ನುಗ್ಗಿದ್ದರಿಂದ ಸುಮಾರು 30 ಕುಟುಂಬಗಳು ತೊಂದರೆ ಅನುಭವಿಸುವಂತಾಯಿತು.

ದೊಡ್ಡ ಬಿದರಕಲ್ಲು ಕೆರೆ ಕೋಡಿ ಒಡೆದು ನಾಲ್ಕು ಗ್ರಾಮಗಳು ಜಲಾವೃತಗೊಂಡು ಸುತ್ತಮುತ್ತಲ ನಿವಾಸಿಗಳು ರಾತ್ರಿ ಇಡೀ ಪರದಾಡುವಂತಾಯಿತು. ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದ ದೊಡ್ಡಬಿದರಕಲ್ಲು ಕೆರೆ ತುಂಬಿ ತುಳುಕುತ್ತಿದ್ದು , ಮೊನ್ನೆ ತಡರಾತ್ರಿ ಏಕಾಏಕಿ ಕೆರೆ ಏರಿ ಕುಸಿದು ಬಿದ್ದು ಸುತ್ತಮುತ್ತಲ ಗ್ರಾಮಗಳಾದ ಭವಾನಿನಗರ, ಅನ್ನಪೂರ್ಣೇಶ್ವರಿ ನಗರ, ಮುನೇಶ್ವರ ಬಡಾವಣೆ ಹಾಗೂ ಅಂದಾನಪ್ಪ ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಏರಿ ಕುಸಿತದಿಂದ ಇಡೀ ಕೆರೆ ನೀರು ಏಕ ಕಾಲಕ್ಕೆ ಸುತ್ತಮುತ್ತಲ ನಾಲ್ಕು ಗ್ರಾಮಗಳಿಗೆ ನುಗ್ಗಿದ್ದರಿಂದ ಜನ ತಡಬಡಾಯಿಸುವಂತಾಯಿತು. ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಸ್ತೆಗಳೆಲ್ಲಾ ಕೆರೆಗಳಂತಾಗಿ ವಾಹನ ಸಂಚಾರಕ್ಕೆ ಅಸಾಧ್ಯವಾಯಿತು. ಕಾರುಗಳು, ದ್ವಿಚಕ್ರ ವಾಹನಗಳು ನೀರಿನಲ್ಲಿ ಮುಳುಗಿ ಹೋದವು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿ ಇಡೀ ಕೆಲವರು ಜಾಗರಣೆ ನಡೆಸುವಂತಾಯಿತು.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಅಧಿಕಾರಿಗಳು 8 ಜೆಸಿಬಿಗಳ ಮೂಲಕ ಪರಿಹಾರ ಕಾರ್ಯ ಕೈಗೊಂಡರು. ಭಾರೀ ನೀರಿದ್ದ ಪರಿಣಾಮ ಏರಿ ಕುಸಿತ ಸ್ಥಳಕ್ಕೆ ತೆರಳಲು ಸಾಧ್ಯವಾಗಲಿಲ್ಲ. ಆದರೂ ರಾತ್ರಿ ಇಡೀ ಕಾರ್ಯಾಚರಣೆ ನಡೆಸಿದ ಬಿಬಿಎಂಪಿ ಸಿಬ್ಬಂದಿ ಪಂಪ್‍ಸೆಟ್‍ಗಳ ಮೂಲಕ ಮನೆಗಳಿಗೆ ನುಗ್ಗಿದ್ದ ನೀರನ್ನು ಹೊರ ಹಾಕಲು ಹರಸಾಹಸ ಪಟ್ಟರು. ಸುದ್ದಿ ತಿಳಿಯುತ್ತಿದ್ದಂತೆ ಮೇಯರ್ ಗೌತಮ್‍ಕುಮಾರ್, ಆಯುಕ್ತ ಅನಿಲ್‍ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights