ಪುದುಚೇರಿಯಲ್ಲೂ ಆಪರೇಷನ್ ಕಮಲ; ಕಾಂಗ್ರೆಸ್ ಸರ್ಕಾರ ಪತನ ಸಾಧ್ಯತೆ?
ಪುದುಚೇರಿಯಲ್ಲಿ ಕಾಂಗ್ರೆಸ್ನ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಪುದುಚೇರಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಅಗತ್ಯ ಬಹುಮತದ ಸಂಖ್ಯೆಗಿಂತ ಕುಸಿದಿದ್ದು, ಸರ್ಕಾರ ಉರುಳುವ ಸಾಧ್ಯತೆ ಹೆಚ್ಚಾಗಿದೆ. ಅದರೆ, ರಾಜೀನಾಮೆ ನೀಡಿರುವ ಇಬ್ಬರೂ ಶಾಸಕರನ್ನು ಮನವೊಲಿಸುತ್ತೇವೆ. ಸರ್ಕಾರ ಸ್ಥಿರವಾಗಿದೆ ಎಂದು ಮುಖ್ಯಮಂತ್ರಿ ವಿ ನಾರಾಯಣಸಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎರಡು ದಿನದಲ್ಲಿ ಒಬ್ಬರಾದ ನಂತರ ಒಬ್ಬರಂತೆ ಶಾಸಕ ಸ್ಥಾನ ತ್ಯಜಿಸಿರುವ ಮಲ್ಲಾಡಿ ಕೃಷ್ಣ ರಾವ್ ಮತ್ತು ಜಾನ್ ಕುಮಾರ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿಲ್ಲ. ಪುದುಚೇರಿಯಲ್ಲಿ ‘ಬಿಜೆಪಿಯ ಎಂಜಿನಿಯರಿಂಗ್ ಪಕ್ಷಾಂತರ ಮತ್ತು ಸರ್ಕಾರಗಳನ್ನು ಉರುಳಿಸುವ ತಂತ್ರ’ ಎಂಬ ಹೆಸರಿನಲ್ಲಿ ಬಿಜೆಪಿಯು ಆಪರೇಷನ್ ಕಮಲ ನಡೆಸಲು ಯೋಜಿಸುತ್ತಿದೆ ಎಂದು ಅವರು ಹೇಳಿರುವುದಾಗಿ ಎನ್ಡಿ ಟಿವಿ ವರದಿ ಮಾಡಿದೆ.
ಮೇ ವೇಳೆಗೆ ನಡೆಯಲಿರುವ ಪುದುಚೇರಿ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ಈ ಸಂದರ್ಭದಲ್ಲಿ ನಾಲ್ಕು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ. ನಮಶಿವಯಂ ಮತ್ತು ಇ.ಥೀಪೈಂಜನ್ ಅವರು ಜನವರಿ 25 ರಂದು ರಾಜೀನಾಮೆ ನೀಡಿದರು. ಮಲ್ಲಾಡಿ ಕೃಷ್ಣ ರಾವ್ ನಿನ್ನೆ ಮತ್ತು ಜಾನ್ ಕುಮಾರ್ ಮಂಗಳವಾರ ತಮ್ಮ ವಿಧಾನಸಭಾ ಸ್ಥಾನವನ್ನು ತ್ಯಜಿಸಿದ್ದಾರೆ.
ವಿಧಾನಸಭೆಯಲ್ಲಿ ಚುನಾಯಿತರಾದ 30 ಶಾಸಕರಲ್ಲಿ, ಕಾಂಗ್ರೆಸ್ 15 ಸದಸ್ಯರನ್ನು ಹೊಂದಿದ್ದು, ಡಿಎಂಕೆ ಪಕ್ಷದ ಮೂವರು ಮತ್ತು ಒಬ್ಬ ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಅಗತ್ಯ ಬಹುಮತ 16 ಕ್ಕಿಂತ ಹೆಚ್ಚು ಸಂಖ್ಯಾಬಲವನ್ನು ಕಾಂಗ್ರೆಸ್ ಸರ್ಕಾರ ಹೊಂದಿತ್ತು. ಆದರೆ, ಶಾಸಕರ ರಾಜೀನಾಮೆಯ ನಂತರ, ಸರ್ಕಾರ ಮತ್ತು ಪ್ರತಿಪಕ್ಷ ಇಬ್ಬರೂ ಕೂಡ 14 ನೇ ಸ್ಥಾನಗಳನ್ನು ಹೊಂದಿದ್ದು, ಸಮಬಲದಲ್ಲಿದ್ದಾರೆ.
ಇದೀಗ ರಾಜೀನಾಮೆ ಸಲ್ಲಿಸಿರುವ ನಾಲ್ವರಲ್ಲಿ ಇಬ್ಬರ ರಾಜೀನಾಮೆ ಕಳೆದ ತಿಂಗಳು ಅಂಗೀಕಾರವಾಗಿದ್ದು, ವಿಧಾನಸಭೆಯ ಶಾಸಕರ ಬಲ 28ಕ್ಕೆ ಇಳಿದಿದ್ದು, ಬಹುಮತ ಸಾಬೀತಿಗೆ 15 ಸ್ಥಾನಗಳ ಅಗತ್ಯವಿದೆ. ಅದರೆ, ಮತ್ತಿಬ್ಬರು ಶಾಸಕರ ರಾಜೀನಾಮೆಯೊಂದಿಗೆ ಕಾಂಗ್ರೆಸ್ 10 ಸದಸ್ಯರನ್ನು ಹೊಂದಿದ್ದು, ತನ್ನ ಸರ್ಕಾರವು ಬಹುಮತದ ಸಂಖ್ಯೆಗಿಂತ ಒಂದು ಸ್ಥಾನ ಕಡಿಮೆಯಾಗಿದೆ.
“ಶಾಸಕರನ್ನು ಬಿಜೆಪಿ ಬೇಟೆಯಾಡುತ್ತಿದೆ. ಅವರಿಗೆ ಬೆದರಿಕೆ ಹಾಕುತ್ತಿದೆ. ಅವರು ಶಾಸಕರಿಗೆ ಆಮಿಷ ಒಡ್ಡಲು ಸುಳ್ಳು ಭರವಸೆ ನೀಡುತ್ತಿದ್ದಾರೆ. ಜನರು ಇದರ ಬಗ್ಗೆ ಮಾತನಾಡುತ್ತಿದ್ದಾರೆ. ಈ ಶಾಸಕರು ಮತ್ತು ಸಚಿವರನ್ನು ಖರೀದಿಸಲಾಗಿದೆ” ಎಂದು ನಾರಾಯಣಸಾಮಿ ಹೇಳಿದ್ದಾರೆ.
“ಇದು ಬಿಜೆಪಿಯ ಕಾರ್ಯವೈಖರಿ. ಅವರು ಶಾಸಕರನ್ನು ಬೇಟೆಯಾಡುತ್ತಾರೆ ಮತ್ತು ಖರೀದಿಸುತ್ತಾರೆ. ಅವರು ಈಗಾಗಲೇ ಮಣಿಪುರ, ಅರುಣಾಚಲ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶದಲ್ಲಿ ಶಾಸರನ್ನು ಖರೀದಿ ಮಾಡಿದ್ದಾರೆ.. ಅವರು ಚುನಾಯಿತ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಇಂತಹ ನಾಚಿಕೆ ಇಲ್ಲದ ಕೆಲಸವನ್ನು ಮಾಡುತ್ತಿದ್ದಾರೆ. ಬಿಜೆಪಿಗೆ ನಾಚಿಕೆಯಿಲ್ಲ” ಎಂದು ಅವರು ಆಕ್ರೋಶ ವ್ಯಕ್ತಡಿಸಿದ್ದಾರೆ.
2016 ರ ಚುನಾವಣೆಯಲ್ಲಿ ಒಟ್ಟು 30 ಸ್ಥಾನಗಳ ಪೈಕಿ ಬಿಜೆಪಿ 18 ಸ್ಥಾನಗಳಲ್ಲಿ ಸ್ಪರ್ಧಿಸಿ ಎಲ್ಲವನ್ನು ಸೋತಿತ್ತು.
ಇದನ್ನೂ ಓದಿ: ಬಿಹಾರ ಬಿಜೆಪಿಯಲ್ಲಿ ಬಂಡಾಯ; ಪ್ರಧಾನಿ ಭೇಟಿಗೆ ಮುಂದಾದ ಶಾಸಕರು!

