ಬಿಹಾರ ಬಿಜೆಪಿಯಲ್ಲಿ ಬಂಡಾಯ; ಪ್ರಧಾನಿ ಭೇಟಿಗೆ ಮುಂದಾದ ಶಾಸಕರು!
ಬಿಹಾರ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯದ ಧ್ವನಿಗಳು ಜೋರಾಗಿ ಬರುತ್ತಿವೆ. ಇತ್ತೀಚೆಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಹಲವು ಹಿರಿಯ ಬಿಜೆಪಿ ನಾಯಕರನ್ನು ಹೊರಗಿಡಲಾಗಿದ್ದು, ಇದು ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಅಸಮಾಧಾನಗೊಂಡವರ ಬಣವು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಮುಂದಾಗಿದೆ.
ಅಸಮಾಧಾನಗೊಂಡಿರುವ ಬಿಜೆಪಿ ಶಾಸಕರ ಗುಂಪಿಗೆ ಶಾಸಕ ಜ್ಞಾನೇಂದ್ರ ಕುಮಾರ್ ಸಿಂಗ್ ಟೀಂ ಲೀಡರ್ ಆಗಿದ್ದು, ಪಕ್ಷದಲ್ಲಿ ಜಾತಿ ಆಧಾರಲ್ಲಿ ಲಾಬಿ ನಡೆಸಲಾಗುತ್ತಿದೆ. ಹೀಗಾಗಿ ಹಲವರನ್ನು ಸಂಪುಟದಿಂದ ಹೊರಗಿಡಲಾಗಿದೆ. ನಾನು ನಮ್ಮ ಪಕ್ಷದ ಇತರ 15 ಶಾಸಕರೊಂದಿಗೆ ಚರ್ಚಿಸುತ್ತೇನೆ. ಪಕ್ಷದ ನಾಯಕರ ಗುಂಪಿನಿಂದ ಪಕ್ಷವು ಹಾಳಾಗದಂತೆ ಉಳಿಸುವ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಜ್ಞಾನೇಂದ್ರ ಕುಮಾರ್ ಹೇಳಿದ್ದಾರೆ.
ರಾಜ್ಯ ಬಿಜೆಪಿ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಅವರ ಅನಿಯಂತ್ರಿತ ಕಾರ್ಯಚಟುವಟಿಕೆಗಳಿಂದ ನಮಗೆ ಬೇಸರವಾಗಿದೆ. ಹಾಗಾಗಿ ನಾನು ಮತ್ತು 15 ಶಾಸಕರು ಪಿಎಂ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚಿಸಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ತಾವು ಯಾವುದೇ ಪಕ್ಷಕ್ಕೆ ಪಕ್ಷಾಂತರವಾಗುವುದಿಲ್ಲ. ಪಕ್ಷದಲ್ಲಿ ದುಡಿಯುತ್ತೇವೆ. ಪಕ್ಷದ ಚಿತ್ರಣವನ್ನು ಹಾಳುಮಾಡವ ಕೃತ್ಯಗಳ ವಿರುದ್ಧ ದನಿ ಎತ್ತುತ್ತೇವೆ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 19ರಿಂದ ಬಿಹಾರ ವಿಧಾನಸಭಾ ಅಧಿವೇಶನ ನಡೆಯಲಿದ್ದು, ಅದಕ್ಕೂ ಮುಂಚೆಯೇ ಇತರ 15 ಬಿಜೆಪಿ ಶಾಸಕರೊಂದಿಗೆ ಅವರು ಸಭೆ ನಡೆಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ರಿಂಕು ಶರ್ಮಾ ಹತ್ಯೆ: BJP ಹಾದಿಯಲ್ಲೇ ಕೇಸರಿ ಪಡೆಯನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿದೆ AAP!