ಚುನಾವಣೆಗೂ ಮುನ್ನ ಕಾಂಗ್ರೆಸ್‌ ಸರ್ಕಾರ ಪತನ; ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿ!

ಚುನಾವಣೆಗೆ ಎರಡು-ಮೂರು ತಿಂಗಳುಗಳು ಬಾರಿ ಇರುವ ಹೊತ್ತಿನಲ್ಲಿ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿ ಸರ್ಕಾರ ಪತನಗೊಂಡಿದೆ. ಇದಕ್ಕೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್‌ ಆರೋಪಿಸಿದೆಯಾದರೂ, ಸರ್ಕಾರ ರಚಿಸಲು ಬಿಜೆಪಿ ಮುಂದಾಗದೇ ಇರುವ ಕಾರಣದಿಂದಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿದೆ.

ಕಾಂಗ್ರೆಸ್‌ನ ನಾಲ್ವರು ಶಾಸಕರು ರಾಜೀನಾಮೆ ನೀಡಿದ್ದರು. ಇದರಿಂದಾಗಿ ವಿಧಾನಸಭೆಯಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸಂಖ್ಯಾಬಲ 14 ಇದ್ದು, ಸಮಾನ ಸಂಖ್ಯೆಯನ್ನು ಹೊಂದಿದ್ದವು. ಸರ್ಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ವಿ ನಾರಾಯಣಸಾಮಿ ಅವರು ಬಹುಮತ ಸಾಬೀತು ಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು  ಫೆ. 22ರಂದು ರಾಜೀನಾಮೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪುದುಚೇರಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗಿದ್ದು, ಈ ಪ್ರಸ್ತಾವಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹಿ ಹಾಕಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಪತನದ ನಂತರ ಸರ್ಕಾರ ರಚಿಸುವ ಬಗ್ಗೆ ಪ್ರತಿಕ್ರಿಯಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ವಿ ಸಾಮಿನಾಥನ್, “ನಾವು ಈ ಹಂತದಲ್ಲಿ ಸರ್ಕಾರವನ್ನು ರಚಿಸಲು ಪ್ರಯತ್ನಿಸುವುದಿಲ್ಲ. ಮುಂಬರುವ ಚುನಾವಣೆಗಳಲ್ಲಿ ಜನರ ಆಶೀರ್ವಾದ ಮತ್ತು ಮೋದಿಯವರ ನಾಯಕತ್ವದೊಂದಿಗೆ, ಎನ್‌ಡಿಎ ಮೈತ್ರಿಯ ಭಾಗವಾಗಿರುವ ಎಐಎಡಿಎಂಕೆ ಜೊತೆ ಸರ್ಕಾರ ರಚಿಸಲಿದ್ದೇವೆ. ಇದು ಪುದುಚೇರಿಯ ಜನರಿಗೆ ಉಜ್ವಲ ಭವಿಷ್ಯವನ್ನು ನೀಡುತ್ತದೆ” ಎಂದು ಹೇಳಿದ್ದರು.

ಈ ಸರ್ಕಾರದ ಪತನದೊಂದಿಗೆ ಕೇಂದ್ರಾಡಳಿತ ಪ್ರದೇಶದ ಇತಿಹಾಸದಲ್ಲಿ ಕೆಟ್ಟ ಅಧ್ಯಾಯ ಕೊನೆಗೊಂಡಿದೆ ಎಂದು ಬಿಜೆಪಿ ಬಣ್ಣಿಸಿದೆ.

“ಕಳೆದ ಐದು ವರ್ಷಗಳಲ್ಲಿ ಕೇಂದ್ರಾಡಳಿತದ ಹಣಕಾಸನ್ನು ಲೂಟಿ ಮಾಡಲಾಗಿದೆ. ಉದ್ಯೋಗಗಳು, ಪಡಿತರ, ಆರೋಗ್ಯ ರಕ್ಷಣೆ, ರಸ್ತೆಗಳು ಮತ್ತು ಶಿಕ್ಷಣಕ್ಕಾಗಿ ಕೇಂದ್ರವು ಕಳುಹಿಸಿದ ಹಣವನ್ನು ದುರುಪಯೋಗಪಡಿಸಲಾಗಿದೆ” ಎಂದು ಸಾಮಿನಾಥನ್ ಆರೋಪಿಸಿದ್ದಾರೆ.

“ರಾಹುಲ್ ಗಾಂಧಿಯವರ ಭೇಟಿಯ ಸಮಯದಲ್ಲಿ ಬಡ ಮಹಿಳೆಯರು ಚಂಡಮಾರುತದ ಪರಿಣಾಮದಿಂದ ಬಳಲುತ್ತಿರುವ ಬಗ್ಗೆ ದೂರು ನೀಡಿರುವುದನ್ನು ನೀವು ಕಂಡಿದ್ದೀರಿ. ಭ್ರಷ್ಟಾಚಾರ ಮತ್ತು ಶೋಷಣೆಯ ಸಂಸ್ಕೃತಿಯನ್ನು ಮಾತ್ರ ಕಾಂಗ್ರೆಸ್ ಮತ್ತು ಡಿಎಂಕೆ ನೀಡಿದೆ. ಪುದುಚೇರಿಯ ಜನರು ಮುಂಬರುವ ಚುನಾವಣೆಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಮೋದಿ ಉದ್ಯೋಗ ಕೊಡಿ; ಇಲ್ಲ ಜಾಗ ಖಾಲಿ ಮಾಡಿ: ಕೇಂದ್ರ ಸರ್ಕಾರದ ವಿರುದ್ದ ಟ್ವಿಟರ್‌ ಅಭಿಯಾನ‌!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights