ಸಿದ್ದರಾಮಯ್ಯ ವಿರುದ್ಧ ಘೋಷಣೆ: 06 ಕಾಂಗ್ರೆಸ್‌ ಕಾರ್ಯಕರ್ತರ ಉಚ್ಛಾಟನೆ!

ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಚುನಾವಣೆಯ ನಂತರ ಮೈಸೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಾಭಿಪ್ರಾಯಗಳ ಕಾವು ಹೊಗೆಯಾಡುತ್ತಿದ್ದು, ಶಾಸಕ ತನ್ವೀರ್‌ ಸೇಠ್‌ ವಿರುದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಸಿಟ್ಟಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ದ ಘೋಷಣೆ ಕೂಗಿದ್ದ ಆರು ಮಂದಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.

ಕಳೆದ ತಿಂಗಳು ನಡೆದ ಮೈಸೂರು ಪಾಲಿಕೆಯ ಮೇಯರ್‌ ಚುನಾವಣೆಯಲ್ಲಿ ತನ್ವೀರ್‌ ಸೇಠ್‌ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಮೇಯರ್ ಹುದ್ದೆಯನ್ನು ಜಿಡಿಎಸ್‌ ಬಿಟ್ಟುಕೊಟ್ಟಿದ್ದಾರೆ ಎಂದು ಹಲವು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷ ಅವರಿಗೆ ನೊಟೀಸ್ ಜಾರಿಮಾಡಬೇಕೆಂದು ಸಿದ್ದರಾಮಯ್ಯ ಹೇಳಿದ್ದರು.

ಇದಾದ ನಂತರ ಕಾಂಗ್ರೆಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದ್ದು, ತನ್ವೀರ್ ಸೇಠ್ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಸಿದ್ದರಾಮಯ್ಯ ಬೆಂಬಲಿಗರು  ಒತ್ತಾಯಿಸಿದ್ದರು. ಬಳಿಕ ಎಐಸಿಸಿ ವೀಕ್ಷಕರೊಬ್ಬರನ್ನು ಮೈಸೂರಿಗೆ ಪರಿಸ್ಥಿತಿ ಪರಾಮರ್ಶಿಸಲು ಕಳುಹಿಸಲಾಗಿತ್ತು. ತನ್ವೀರ್ ಸೇಠ್ ಅವರಿಗೆ ಸಹ ನೊಟೀಸ್ ಜಾರಿ ಮಾಡಲಾಗಿತ್ತು.

ಇದರಿಂದಾಗಿ ಸಿಟ್ಟಾದ ತನ್ವೀರ್‌ ಸೇಠ್‌ ಅವರ ಅಭಿಮಾನಿಗಳು ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ್ದರು. ಹೀಗಾಗಿ ಮೈಸೂರು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಆರ್ ಮೂರ್ತಿ ಅವರು ಕಾಂಗ್ರೆಸ್‌ ಕಾರ್ಯಕರ್ತರಾದ ಶಾಹಿದ್, ಎಂ ಎನ್ ಲೋಕೇಶ್ ಹಾಗೂ ಅಬೀಬ್ ಮತ್ತು ಅಬೀಬ್‌ ಅವರ ಇಬ್ಬರು ಪುತ್ರರನ್ನು ಪಕ್ಷದಿಂದ ಉಚ್ಛಾಟಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್‌ಗೆ ಮೇಯರ್‌ ಸ್ಥಾನ ನೀಡುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದು ತನ್ವೀರ್‌ ಬೆಂಬಲಿಗರು ಸಮರ್ಥನೆ ಮಾಡಿಕೊಂಡಿದ್ದರು.

ಇದನ್ನೂ ಓದಿ: ರಾಸಲೀಲೆ ಪ್ರಕರಣ: ವಿಡಿಯೋ ಮಾಡಿದ್ದೆಲ್ಲಿ? ಹಂಚಿದವರಾರು? ವಲಸಿಗರ ನಿಯಂತ್ರಣಕ್ಕೆ BJPಯದ್ದೇ ಕುತಂತ್ರ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights