ತಮ್ಮ ಸಿ.ಡಿ ರಿಲೀಸ್‌ ಮಾಡದಂತೆ ಕೋರ್ಟ್‌ ಮೊರೆಹೋದ ಸಚಿವರು; ಸ್ಪಷ್ಟನೆ ನೀಡಿದ ಸುಧಾಕರ್ ಹೇಳಿದ್ದೇನು?

ರಮೇಶ್ ಜಾರಕಿಹೊಳಿ ರಾಸಲೀಲೆ ಸಿ.ಡಿ ಬಿಡುಗಡೆಯಾಗುತ್ತಿದ್ದಂತೆ, ಉಳಿದ ಕೆಲವು ಸಚಿವರಲ್ಲಿ ಪೀಕಲಾಟ ಶುರುವಾಗಿದೆ. ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ಸೇರಿದಂತೆ 06 ಮಂದಿ ಸಚಿವರು ಇಂತಹ ಅಶ್ಲೀಲ ದೃಶ್ಯಗಳು ಮತ್ತು ಅವುಗಳಿಗೆ ಸಂಬಂಧಿಸಿದ ಸುದ್ದಿಗಳನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ತಡೆನೀಡಬೇಕು ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ ಮೊರೆಹೋಗಿದ್ದಾರೆ. ಕೋರ್ಟ್‌ ಸಚಿವರ ಮನವಿಯನ್ನು ಪರಿಗಣಿಸಿದ್ದು, ತಾತ್ಕಾಲಿಕ ತಡೆ ನೀಡಿದೆ.

ಸಚಿವರು ಕೋರ್ಟ್‌ ಮೊರೆ ಹೋಗುತ್ತಿದ್ದಂತೆ, ರಮೇಶ್‌ ಜಾರಕಿಹೊಳಿಯಂತೆಯೇ ಇನ್ನೂ ಹಲವು ಸಚಿವರ ವಿಡಿಯೋಗಳು ಇರಬಹುದು ಎಂಬ ಅನುಮಾನಗಳನ್ನು ಹುಟ್ಟುಹಾಕಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಡಾ. ಕೆ. ಸುಧಾಕರ್‌, “ರಾಜ್ಯದಲ್ಲಿ ದಕ್ಷತೆಯಿಂದ ಕಾರ್ಯ ನಿರ್ವಹಿಸಿ ಜನಮನ್ನಣೆ ಗಳಿಸುತ್ತಿರುವ ಸಚಿವರ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ತೇಜೋವಧೆ ಮಾಡುವ ರಾಜಕೀಯ ಷಡ್ಯಂತ್ರ ನಡೆಯುತ್ತಿರುವ ಗುಮಾನಿ ಇದೆ” ಎಂದು ಹೇಳಿದ್ದಾರೆ.

“ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಪರಿಸ್ಥಿತಿ ಇರುವುದು ಸುಳ್ಳಲ್ಲ. ಸತ್ಯ ಹೊಸಲು ದಾಟುವುದರೊಳಗೆ, ಸುಳ್ಳು ಊರೆಲ್ಲಾ ಸುತ್ತಾಡಿಕೊಂಡು ಬಂದಿರುತ್ತದೆ ಎಂಬಂತೆ, ಜೀವಮಾನವಿಡೀ ಗಳಿಸಿರುವ ಒಳ್ಳೆಯ ಹೆಸರು, ಯಾರದೋ ಷಡ್ಯಂತ್ರದಿಂದ ಕ್ಷಣಮಾತ್ರದಲ್ಲಿ ನಶಿಸಿ ಹೋಗುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆಯಿಂದ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೇವೆ” ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.

“ಸಾರ್ವಜನಿಕ ಜೀವನದಲ್ಲಿರುವವರಿಗೆ ಈ ರೀತಿಯ ಸವಾಲುಗಳು ಸಾಮಾನ್ಯ. ಆದರೆ ನಮ್ಮ ವಿರುದ್ಧ ಷಡ್ಯಂತ್ರಗಳು ನಡೆದಾಗ ಇಂತಹ ದುಷ್ಟ ಶಕ್ತಿಗಳನ್ನು ಎದುರಿಸುವುದೂ ಅನಿವಾರ್ಯ. ನಮ್ಮ ಆತ್ಮಸಾಕ್ಷಿ ಸರಿ ಇರುವವರೆಗೂ, ಜನರ ಆಶೀರ್ವಾದ ಇರುವವರೆಗೂ ಯಾವ ಷಡ್ಯಂತ್ರವೂ ಯಶಸ್ವಿಯಾಗುವುದಿಲ್ಲ. ನಮ್ಮ ನ್ಯಾಯವ್ಯವಸ್ಥೆ ಮೇಲೆ ಸಂಪೂರ್ಣ ವಿಶ್ವಾಸವಿದೆ” ಎಂದು ಸುಧಾಕರ್‌ ಹೇಳಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇರಿದಂತೆ ಪ್ರಸ್ತುತ ತಮ್ಮ ವಿರುದ್ದ ಸುದ್ದಿ ಪ್ರಕಟಿಸದಂತೆ ನ್ಯಾಯಾಲಯದ ಮೊರೆ ಹೋಗಿರುವ ಆರು ಸಚಿವರು ಕೂಡಾ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದ ಸಮಯದಲ್ಲಿ ರಾಜೀನಾಮೆ ನೀಡಿ ಸರ್ಕಾರ ಉರುಳಲು ಕಾರಣವಾಗಿದ್ದರು. ನಂತೆರ ಅವರೆಲ್ಲ ಬಿಜೆಪಿ ಸೇರಿ ಉಪಚುನಾವಣೆಯಲ್ಲಿ ಗೆದ್ದು ಸಚಿವರಾಗಿದ್ದಾರೆ. ಇದೀಗ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯಾಗುತ್ತಿದ್ದಂತೆ ಇವರು ಕೋರ್ಟ್ ಮೊರೆ ಹೋಗಿರುವುದು ಭಾರಿ ಚರ್ಚೆಗೀಡಾಗಿದೆ.

ಆಪರೇಷನ್ ಕಮಲದ ಸಮಯದಲ್ಲಿ ಈ ಎಲ್ಲಾ ಸಚಿವರು ಮುಂಬೈಯಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಇವರ ವಿರುದ್ದವು ಸಿಡಿಗಳು ತಯಾರಾಗಿದೆ, ಹಾಗಾಗಿ ತಮ್ಮ ವಿರುದ್ದ ಸುದ್ದಿಗಳು ಪ್ರಕಟಿಸಬಾರದು ಎಂದು ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ರಾಸಲೀಲೆ ಪ್ರಕರಣ: ವಿಡಿಯೋ ಮಾಡಿದ್ದೆಲ್ಲಿ? ಹಂಚಿದವರಾರು? ವಲಸಿಗರ ನಿಯಂತ್ರಣಕ್ಕೆ BJPಯದ್ದೇ ಕುತಂತ್ರ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights