ರಾಸಲೀಲೆ ಪ್ರಕರಣ: ವಿಡಿಯೋ ಮಾಡಿದ್ದೆಲ್ಲಿ? ಹಂಚಿದವರಾರು? ವಲಸಿಗರ ನಿಯಂತ್ರಣಕ್ಕೆ BJPಯದ್ದೇ ಕುತಂತ್ರ?

ಸದ್ಯ ರಾಜ್ಯ ರಾಜಕೀಯದಲ್ಲಿ ರಮೇಶ್‌ ಜಾರಕಿಹೊಳಿ ರಾಸಲೀಲೆ ವಿಡಿಯೋ ಬಗ್ಗೆಯೇ ಚರ್ಚೆಯಾಗುತ್ತಿದೆ. ಮಾಧ್ಯಮಗಳೂ ಜಾರಕಿಹೊಳಿ ವಿಡಿಯೋದಲ್ಲಿ ಮಾಡಿದ್ದೇನು? ಮಾತನಾಡಿದ್ದೇನು? ಎಂಬುದರ ಬಗ್ಗೆಯಷ್ಟೇ ಚರ್ಚೆ ಮಾಡುತ್ತಿವೆ. ಇತ್ತ ಐದಾರು ಸಚಿವರು ಜಾರಕಿಹೊಳಿ ವಿಡಿಯೋ ಬಗ್ಗೆ ಮಾಧ್ಯಮಗಳು ಸುದ್ದಿ ಮಾಡಬಾರದು ಎಂದು ತಡೆನೀಡುವಂತೆ ಕೋರಿ ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದೆಲ್ಲದರ ನಡುವೆ ಜಾರಕಿಹೊಳಿಯ ವಿಡಿಯೋ ಮಾಡಿದವರು ಯಾರು? ವಿಡಿಯೋ ಮಾಡಿದ್ದೆಲ್ಲಿ? ಮಾಡಿಸಿದವರು ಯಾರು? ಇದು ಕೇವಲ ರಮೇಶ್‌ ಜಾರಕಿಹೊಳಿಗಷ್ಟೇ ಸೀಮಿತವಾಗಿದೆಯಾ? ಆಥವಾ ಇಂತದ್ದೇ ವಿಡಿಯೋಗಳು ಉಳಿದ ಸಚಿವರು, ನಾಯಕದ್ದೂ ಇವೆಯಾ ಎಂದುದರ ಸುತ್ತ ಹಲವಾರು ಪ್ರಶ್ನೆಗಳು, ಚರ್ಚೆಗಳು, ಊಹಾಪೋಹಗಳು ಹರಿದಾಡುತ್ತಿವೆ.

ವಿಡಿಯೋ ಮಾಡಿದ್ದೆಲ್ಲಿ? 

ಸದ್ಯ ಮಾಧ್ಯಮಗಳಲ್ಲಿ-ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಮುಂಬೈನ ಹೋಟೆಲ್‌ವೊಂದರಲ್ಲಿ ಸೆರೆಹಿಡಿಯಲಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಪತನಗೊಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ರಮೇಶ್‌ ಜಾರಕಿಹೊಳಿ ಸೇರಿದಂತೆ 17 ಮಂದಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಪರಾರಿಯಾಗಿದ್ದರು. ಆ ವೇಳೆ ಇವರೆಲ್ಲರೂ ಬಿಜೆಪಿ ನಾಯಕರ ಭದ್ರಕೋಟೆಯಲ್ಲಿ ತಂಗಿದ್ದರು. ಇದೇ ವೇಳೆ ಈ ವಿಡಿಯೋವನ್ನು ಮಾಡಲಾಗಿದೆ. ಮೈತ್ರಿ ಸರ್ಕಾರವನ್ನೇ ಕಡೆವಿ, ಅಧಿಕಾರದ ಲಾಲಸೆಗಾಗಿ ಬಿಜೆಪಿ ಸೇರಿದವರು, ಬಿಜೆಪಿಯಲ್ಲಿಯೂ ಇಂತದ್ದೇ ಕುತಂತ್ರ ಮಾಡುತ್ತಾರೆ ಎಂದು ಅವರನ್ನು ನಿಯಂತ್ರಿಸಲು ಮುಂಬೈನ ಹೋಟೆಲ್‌ನಲ್ಲಿ ಈ ವಿಡಿಯೋ ಮಾಡಲಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ, ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವಿಡಿಯೋ ರಮೇಶ್‌ ಜಾರಕಿಹೊಳಿಗಷ್ಟೇ ಸೀಮಿತವೇ? 

ರಮೇಶ್‌ ಜಾರಕಿಹೊಳಿಯ ಸಿಡಿ ಬಿಡುಗಡೆಯಾಗುತ್ತಿದ್ದಂತೆ, ಉಳಿದ ಕೆಲವು ಸಚಿವರಲ್ಲಿ ಪೀಕಲಾಟ ಶುರುವಾಗಿದೆ. ಇತರ ಸಚಿವರು-ಶಾಸಕರ ವಿಡಿಯೋಗಳೂ ಇರಬಹುದಾ ಎಂದು ಅನುಮಾನಗಳು ಹುಟ್ಟುವುದಕ್ಕೂ ಮುನ್ನವೇ, ಹಲವು ಸಚಿವರು ನಮ್ಮ ವಿಡಿಯೋಗಳನ್ನು ಬಿಡುಗಡೆ ಮಾಡಬೇಡಿ ಎಂದು ಬೊಬ್ಬೆಹೊಡೆಯುತ್ತಿದ್ದಾರೆ. ಅಲ್ಲದೆ, ಇಂತಹ ಅಶ್ಲೀಲ ದೃಶ್ಯಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಬಾರದು ಎಂದು ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ನ ಮುಂದೆ ಹೋಗಿ ನಿಂತಿದ್ದಾರೆ. ಇದು ಮತ್ತಷ್ಟು ಅನುಮಾನಗಳನ್ನು ಹೆಚ್ಚಿಸಿದ್ದು, ಇನ್ನೂ ಕೆಲವು ಸಚಿವರ ಸಿಡಿಗಳು ರಿಲೀಸ್‌ ಆಗುವ ಸಾಧ್ಯತೆಗಳನ್ನು ತೋರಿಸುತ್ತಿವೆ.

ಬಾಂಬೆ ಟೀಂ ಎಂದು ಕರೆಸಿಕೊಳ್ಳುವ 17 ಜನರ ಗುಂಪಿನ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಕ್ರೀಡಾ ಸಚಿವ ಕೆ.ಸಿ ನಾರಾಯಣಗೌಡ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಕೃಷಿ ಸಚಿವ ಬಿಸಿ ಪಾಟೀಲ್ ಅವರು ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಮಾಧ್ಯಮಗಳು ವಿಡಿಯೋ-ಸುದ್ದಿ ಪ್ರಸಾರ ಮಾಡತಂದೆ ತಡೆಯೊಡ್ಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಯಾರದ್ದೋ ಸಿಡಿ ರಿಲೀಸ್‌ ಆದ್ರೆ, ಇವರಿಗೆಲ್ಲಾ ಯಾಕೆ ಇಂಥ ಪೀಕಲಾಟ ಎಂಬ ಸಂಶಯವನ್ನು ಹುಟ್ಟಿಸಿವೆ. ಅಲ್ಲದೆ, ಮುಂಬೈ ಹೋಟೆಲ್‌ನಲ್ಲಿ ಇವರೂ ಸೇರಿದಂತೆ ಇನ್ನೂ ಹಲವರ ರಾಸಲೀಲೆಗಳು ವಿಡಿಯೋದಲ್ಲಿ ಸೆರೆಯಾಗಿವೆಯೇ ಎಂಬುದಕ್ಕೆ ಹುಕುಂ ಕೊಡುತ್ತಿವೆ. ಬಹುಶಃ ಇವರುಗಳ ಸಿಡಿಗಳೂ ಕೂಡ ರಿಲೀಸ್‌ ಆಗುವುದನ್ನು ತಡೆದು ಒಂದಷ್ಟು ಮಾನ ಉಳಿಸಿಕೊಳ್ಳಲು ಬಂಡಾಯವೆದ್ದದ್ದ 17 ಮಂದಿ ಎಣಗಾಡುತ್ತಿದ್ದಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ.

ವಿಡಿಯೋ ಮಾಡಿದವರಾರು?

ಸಚಿವರ ರಾಸಲೀಲೆಗಳು ಮುಂಬೈನ ಹೋಟೆಲ್‌ನಲ್ಲಿ ಸೆರೆಯಾಗಿವೆ ಎಂದು ಹೇಳಾಗುತ್ತಿದೆ. ಹಾಗಿದ್ದರೆ, ಬಿಜೆಪಿಗರ ಬೆಂಗಾವಲಿನಲ್ಲಿದ್ದ ಆ ಹೋಟೆಲ್‌ನಲ್ಲಿ ವಿಡಿಯೋ ಮಾಡಿದವರು ಯಾರು? ಎಂಬುದು ಕುತೂಹಲ ಮೂಢಿಸಿದೆ. ಮೈತ್ರಿ ಸರ್ಕಾರಕ್ಕೆ ಕೈಕೊಟ್ಟು ಈ ಅತೃಪ್ತರು ಮುಂಬೈಗೆ ಪರಾರಿಯಾದಾಗ, ಅವರ ಮನವೊಲಿಸಿ ಕರೆತರಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಖುದ್ದಿ ಮುಂಬೈಗೆ ತೆರಳಿದ್ದರು. ಆದರೆ, ಡಿಕೆಶಿ ಅತೃಪ್ತರನ್ನು ಭೇಟಿ ಮಾಡುವುದಕ್ಕಾಗಲೀ ಅಥವಾ ಹೋಟೆಲ್‌ ಒಳಗೆ ಹೋಗುವುದಿಕ್ಕಾಗಲೀ‌ ಅಲ್ಲಿಯ ಬಿಜೆಪಿ ನಾಯಕರು ಮತ್ತು ಪೊಲೀಸರು ಅವರಿಗೆ ಅವಕಾಶ ಮಾಡಿಕೊಡಲಿಲ್ಲ. ಡಿಕೆಶಿ ಮುಂಬೈನಿಂದ ಹಿಂದಿರುಗಿ ಬಂದಿದ್ದರು.

ಇಂತಹ ಬಿಗಿ-ಬಂಧೋಬಸ್ತ್‌ ಇದ್ದ ಹೋಟೆಲ್‌ನಲ್ಲಿ ವಿಡಿಯೋ ಮಾಡಿದವರಾರು? ಬಿಜೆಪಿಗರೇ ವಿಡಿಯೋ ಮಾಡಿದ್ದಾರೆ ಎಂಬುದು ಸತ್ಯವೆಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿದೆ. ಈ 17 ಮಂದಿಯನ್ನು ಮುಂಬೈಗೆ ಕರೆದೊಯ್ದದ್ದು ಈಗಿನ ಎಂಎಲ್‌ಸಿ ಮತ್ತು ಸಚಿವ ಯೋಗೇಶ್ವರ್‌. ಮುಂಬೈನಲ್ಲಿ ಈ 17 ಜನರನ್ನು ಮೇಂಟೇನ್‌ ಮಾಡುವ ಜವಾಬ್ದಾರಿ ಯೋಗೇಶ್ವರ್‌ ಮತ್ತು ಮುಂಬೈನ ಮತ್ತೊಬ್ಬ ಬಿಜೆಪಿ ಮುಖಂಡನದ್ದಾಗಿತ್ತು. ಈ ಇಬ್ಬರೂ ಸೇರಿ ಈ ಎಲ್ಲರ ವಿಡಿಯೋಗಳನ್ನು ಮಾಡಿಸಿದ್ದಾರೆಯೇ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.

ಯೋಗೇಶ್ವರ್‌ ಮತ್ತು ಬಿಜೆಪಿ ಮುಂಖಡರು ಸೇರಿ ಕೆಲವು ಹುಡುಗಿಯರನ್ನು ಈ 17 ಮಂದಿ ತಂಗಿದ್ದ ಹೋಟೆಲ್‌ ಕಳುಹಿಸಿ ವಿಡಿಯೋ ಮಾಡಿಸಿದ್ದಾರೆ. ಯೋಗೇಶ್ವರ್‌ ಬಳಿ ವಿಡಿಯೋಗಳ ಸಿಡಿಇರುವ ಕಾರಣಕ್ಕಾಗಿಯೇ ತೀವ್ರ ವಿರೋಧದ ನಡುವೆಯೂ ಯೋಗೇಶ್ವರ್‌ ಅವರನ್ನು ಎಂಎಲ್‌ಸಿ ಮಾಡಿ, ಸಚಿವ ಸ್ಥಾನ ನೀಡಲಾಗಿದೆ ಎಂದೂ ಚರ್ಚೆಯಾಗುತ್ತಿದೆ. ಹಲವಾರು ರಾಜಕೀಯ ವಿಮರ್ಶರು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸಿಡಿ ಬಿಡುಗಡೆ ಮಾಡಿದವರು ಯಾರು? ರಿಲೀಸ್‌ ಮಾಡಿದ್ದೇಕೆ? 

ರಮೇಶ್‌ ಜಾರಕಿಹೊಳಿ ಅವರ ರಾಸಲೀಲೆ ವಿಡಿಯೋ ಮುಂಬೈನ ಹೋಟೆಲ್‌ನಲ್ಲಿ ಸೆರೆಹಿಡಿಯಲಾಗಿದೆ ಎಂದಾದರೆ, ಆ ವಿಡಿಯೋವನ್ನು ಯೋಗೇಶ್ವರ್‌ ಅವರೇ ಮಾಡಿಸಿರುತ್ತಾರೆ. ಹೀಗಾಗಿ ಸಿಡಿ ರಿಲೀಸ್‌ ಮಾಡಿಸಿದ್ದೂ ಅವರೇ ಎಂಬುದರಲ್ಲಿ ಅನುಮಾನವಿಲ್ಲ ಎಂದು ರಾಜಕೀಯ ಅಂಗಳದಲ್ಲಿ ಕೇಳಿಬರುತ್ತಿದೆ. ಮೈತ್ರಿ ಕೆಡವಿ, ಬಿಜೆಪಿಗೆ ಬಂದ 17 ಜನರ ಟೀಂ ಲೀಡರ್‌ ಆಗಿದ್ದ ರಮೇಶ್‌ ಜಾರಕಿಹೊಳಿ, ಯಾರ ನಿಯಂತ್ರಣಕ್ಕೂ ಸಿಗದೇ ತಾವೇ ಲೀಡರ್‌ ಎಂದು ಬೊಬ್ಬಿರಿಯುತ್ತಿದ್ದರು. ನಮ್ಮ ಮಾತಿಗೆ ಬಿಜೆಪಿ ನಾಯಕರು ಕಿಮತ್ತು ಕೊಡದಿದ್ದರೆ, ಇಲ್ಲಿಯೂ ಬಂಡಾಯ ಏಳುವುದಾಗಿ ಬೆದರಿಕೆಯನ್ನು ಹಾಕಿದ್ದರು ಎಂದು ಹೇಳಲಾಗುತ್ತಿದೆ.

ಹೀಗಾಗಿ ಸದ್ಯ ಇರುವ ಬಿಜೆಪಿ ಸರ್ಕಾರ ಪತನವಾಗುವುದಾರೇ ಅದು ವಲಸೆ ಬಂದಿರುವ ಈ 17 ಮಂದಿಯಿಂದಲೇ ಎಂಬಂತಾಗಿದೆ. ಅಲ್ಲದೆ, ಸದ್ಯ ಬೆಳಗಾವಿಯಲ್ಲಿ ಲೋಕಸಭಾ ಉಪಚುನಾವಣೆ ನಡೆಯಲಿದ್ದು, ಅಲ್ಲಿ ರಮೇಶ್‌ ಜಾರಕಿಹೊಳಿ ತಮ್ಮ ಹಿಡಿತ ಸಾಧಿಸಲು ಯತ್ನಿಸುತ್ತಿದ್ದಾರೆ. ಇದು ಮೂಲ ಬಿಜೆಪಿ ನಾಯಕರು ಆ ಜಿಲ್ಲೆಯಲ್ಲಿ ತನ್ನ ಪರಾಕಾಷ್ಟೆ ತೋರಿಸಲು ತಡೆಯಾಗುತ್ತದೆ ಎಂದು ಹೇಳಲಾಗುತ್ತಿತ್ತು. ಇದರಿಂದಾಗಿ ರಮೇಶ್‌ ಜಾರಕಿಹೊಳಿಯನ್ನು ತಮ್ಮ ನಿಯಂತ್ರಣಕ್ಕೆ ಪಡೆದುಕೊಳ್ಳುವ ಹಾಗೂ ಉಳಿದವರಿಗೆ ಎಚ್ಚರಿಕೆಯ ಸಂದೇಶ ನೀಡಿ, ಅವರನ್ನು ತಣ್ಣಗಾಗಿಸುವ ಉದ್ದೇಶದಿಂದ ಈ ಸಿಡಿ ರಿಲೀಸ್‌ ಮಾಡಲಾಗಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಎದ್ದಿದ್ದು, ಸಾಕಷ್ಟು ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ

ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿಡಿ ರಿಲೀಸ್‌ ಆದ ನಂತರ ಕೆಲವು ಸಚಿವರ ವರಸೆಗಳನ್ನು ಗಮನಿಸಿದರೆ, ಇನ್ನೂ ಕೆಲವು ಸಿಡಿಗಳು ರಿಲೀಸ್‌ ಆಗಬಹುದು ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.

ಇದನ್ನೂ ಓದಿ:ರಮೇಶ್ ರಾಸಲೀಲೆ ಪ್ರಕರಣ: ಮಿತ್ರ ಮಂಡಳಿ ಶಾಸಕರಿಗೆ ಆತಂಕ ಯಾಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights