ಮೋದಿ ತವರು ಗುಜರಾತ್‌ನಲ್ಲಿ ಕೊರೊನಾ ಆಕ್ರಮಣ: ಒಂದೇ ದಿನ 8,920 ಪ್ರಕರಣ – 94 ಸಾವು!

ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್‌ನಲ್ಲಿ ಇದೂವರೆಗೂ ಕೊರೊನಾ ಪ್ರಕರಣಗಳ ಬಗ್ಗೆ ಸರಿಯಾದ ಮಾಹಿತಿ ದೊರೆತಿರಲಿಲ್ಲ. ಈ ವಿಚಾರವಾಗಿ ಕಳೆದ ಎರಡು ದಿನಗಳ ಹಿಂದೆ ಗುಜರಾತ್‌ ಹೈಕೋರ್ಟ್‌ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನಂತರ, ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಕೊರೊನಾ ಪ್ರಕರಣಗಳ ಬಗ್ಗೆ ನಿಖರ ಮಾಹಿತಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡುತ್ತಿದೆ.

ಇದರಂತೆ ಗುಜರಾತ್‌ನಲ್ಲಿ ಶುಕ್ರವಾರ 8,920 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. 94 ಮಂದಿ ಕೊರೊನಾ ರೋಗಿಗಳ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಇದೂವರೆಗೂ 3,84,688 ಸೋಂಕಿತ ಪ್ರಕರಣಗಳು ದಾಖಲಾಗಿದ್ದು, 5,170 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿಯಲ್ಲಿ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 3,387 ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದ್ದು, ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 3,29,781 ಕ್ಕೆ ತಲುಪಿದೆ ಎಂದು ಪ್ರಕಟಣೆ ತಿಳಿಸಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 49,737 ಆಗಿದ್ದು, ಅದರಲ್ಲಿ 283 ರೋಗಿಗಳು ವೆಂಟಿಲೇಟರ್‌ಗಳಲ್ಲಿದ್ದಾರೆ, 49,454 ಮಂದಿ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಅದು ಹೇಳಿದೆ.

ಕಳೆದ 24 ಗಂಟೆಗಳಲ್ಲಿ ಅಹಮದಾಬಾದ್ ಮತ್ತು ಸೂರತ್‌ನಲ್ಲಿ ತಲಾ 26 ಸಾವುಗಳಾಗಿವೆ. ರಾಜ್‌ಕೋಟ್‌ನಲ್ಲಿ 13, ವಡೋದರಾದಲ್ಲಿ 9, ಮೊರ್ಬಿ ಮತ್ತು ಜಮ್‌ನಗರದಲ್ಲಿ ತಲಾ 4, ಸುರೇಂದ್ರನಗರದಲ್ಲಿ 3, ಡಾಂಗ್ ಮತ್ತು ಸಬರ್‌ಕಂತದಲ್ಲಿ ತಲಾ 2 ಮತ್ತು ದೇವ್ಭೂಮಿ-ದ್ವಾರಕಾ, ಮಹಿಸಾಗರ್, ಮೆಹ್ಸಾನಾ, ಪಂಚಮಹಲ್ ಮತ್ತು ವಲ್ಸಾದ್‌ನಲ್ಲಿ ತಲಾ ಒಂದು ಸಾವು ಸಂಭವಿಸಿವೆ ಎಂದು ಪ್ರಕಟಣೆ ತಿಳಿಸಿದೆ.

ಅಹಮದಾಬಾದ್ ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 2,842 ಹೊಸ ಕೋವಿಡ್‌-19 ಪ್ರಕರಣಗಳು ದಾಖಲಾಗಿವೆ. ಸೂರತ್ ನಗರದಲ್ಲಿ 1,522 ಪ್ರಕರಣಗಳು, ರಾಜ್‌ಕೋಟ್ ನಗರದಲ್ಲಿ 707, ವಡೋದರಾ ನಗರದಲ್ಲಿ 429, ಸೂರತ್ ಜಿಲ್ಲೆಯಲ್ಲಿ 398, ಮೆಹ್ಸಾನಾದಲ್ಲಿ 330, ಜಮ್‌ನಗರ ನಗರದಲ್ಲಿ 192, ಭರೂಚ್‌ನಲ್ಲಿ 173, ವಡೋದರಾ ಜಿಲ್ಲೆಯಲ್ಲಿ 171 ಮತ್ತು ಪಟಾನ್‌ನಲ್ಲಿ 125 ಪ್ರಕರಣಗಳು ದಾಖಲಾಗಿವೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ 87.11 ಲಕ್ಷ ಜನರಿಗೆ ಮೊದಲ ಕೋವಿಡ್ -19 ಲಸಿಕೆಗಳನ್ನು ನೀಡಲಾಗಿದ್ದು, 13.02 ಲಕ್ಷ ಜನರು ಈವರೆಗೆ ಎರಡನೇ ಡೋಸ್ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಆದರೆ, ಇದೂವರೆಗೂ ಎಷ್ಟು ಜನರಿಗೆ ಕೊವಿಡ್‌ ಪರೀಕ್ಷೆ ನಡೆಸಲಾಗಿದೆ ಎಂದು ಮಾಹಿತಿಯಲ್ಲಿ ತಿಳಿಸಿಲ್ಲ.

ಇದನ್ನೂ ಓದಿ: ಹೊಸ ಕೊರೊನಾ ಪ್ರಕರಣಗಳಲ್ಲಿ ದಾಖಲೆ ಬರೆದ ಭಾರತ : ಒಂದೇ ದಿನ 2.34 ಲಕ್ಷ ಕೇಸ್!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights