‘ಚಾಮರಾಜನಗರ ದುರಂತಕ್ಕೆ ಆಕ್ಸಿಜನ್ ಕಾರಣವಾಗಿದ್ದರೆ ಸರ್ಕಾರವೇ ನೇರ ಹೊಣೆ’- ಸಿ ಟಿ ರವಿ
ಜಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಕೊರೋನಾ ಸೋಂಕಿತ ರೋಗಿಗಳು ಸೇರಿದಂತೆ ಒಟ್ಟು 24 ರೋಗಿಗಳು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವ ಘಟನೆ ಬಗ್ಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಇದೊಂದು ಘೋರ ಅನ್ಯಾಯ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ” ಜಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳು ಆಕ್ಸಿಜನ್ ಕೊರತೆಯಿಂದ ಸತ್ತಿದ್ರೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಆಗುತ್ತೆ. ಚಿಕಿತ್ಸೆ ವೈಫಲ್ಯದಿಂದ ಸತ್ತಿದ್ರೆ ಅದು ಉದ್ದೇಶಪೂರ್ವಕ ಆಲ್ಲ. ಉದ್ದೇಶಪೂರ್ವಕವಾಗಿ ಮಾಡಿದ್ರೆ, ಅದಕ್ಕೆ ಕಾರಣರಾದವರೇ ಹೊಣೆ ಹೊತ್ಕೋಬೇಕು. ಆಸ್ಪತ್ರೆಗಳಲ್ಲಿ ಹೆಲ್ತ್ ಎಮರ್ಜೆನ್ಸಿ, ಕೊವಿಡ್ ನಿರ್ವಹಣೆಗೇ ಆಧ್ಯತೆ ಕೊಡಬೇಕು” ಎಂದಿದ್ದಾರೆ.
‘ಹಲವು ರಾಜ್ಯಗಳಲ್ಲಿ ಕೊರೊನಾ ರೋಗಿಗಳಿಗೆ ಬೆಡ್ಗಳ ಕೊರತೆ ಹಿನ್ನಲೆ ಎಸ್ಬಿಐ ಬ್ಯಾಂಕ್ ನೆರವು ನೀಡಲು ಮುಂದಾಗಿದೆ. 71 ಕೋಟಿ ರೂ. ವೆಚ್ಚದಲ್ಲಿ ವಿವಿಧ ರಾಜ್ಯಗಳಿಗೆ ನೆರವು ನೀಡಲು ಮುಂದೆ ಬಂದಿದೆ. ಈ ಹಣದಲ್ಲಿ ಕೊರೊನಾ ಪೀಡಿತ ರಾಜ್ಯಗಳಲ್ಲಿ 1,000 ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆ, 250 ಐಸಿಯು ಬೆಡ್ ಗಳ ನಿರ್ಮಾಣ ಮತ್ತು ಐಸೂಲೇಷನ್ ಗಾಗಿ 1,000 ಬೆಡ್ಗಳ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು’ ಎಂದಿದ್ದಾರೆ.
‘ಚಾಮರಾಜನಗರ ದುರಂತ ಘೋರ ಅನ್ಯಾಯ. ದುರಂತಕ್ಕೆ ಯಾರೇ ಹೊಣೆಯಾದರೂ ಅವರ ಮೇಲೆ ಕ್ರಮ ಆಗಲೇಬೇಕು. ಬೇರೆ ರಾಜ್ಯಗಳಲ್ಲಿ ನಡೆಯುತ್ತಿದ್ದದ್ದು ನಮ್ಮ ರಾಜ್ಯದಲ್ಲಿ ನಡೆದಿದೆ. ದುರ್ದೈವದ ಸಂಗತಿ ಇದು. ಕಠಿಣ ಕ್ರಮ ಆದಾಗ ಮಾತ್ರ ಮರುಕಳಿಸುವುದಿಲ್ಲ. ತಕ್ಷಣ ತನಿಖೆ ಮಾಡಿ ಶಿಸ್ತು ಕ್ರಮ ಮಾಡಬೇಕು. ಘಟನೆ ಕುರಿತು ನಾನು ಸಿಎಂ ಭೇಟಿ ಮಾಡಿದೆ. ಬೇರೆ ಜಿಲ್ಲೆಗಳ ಆಕ್ಸಿಜನ್ ಕೊರತೆ ಬಗ್ಗೆ ಗಮನಕ್ಕೆ ತಂದಿದ್ದೇನೆ’ ಎಂದರು.
ಬೇರೆ ರಾಜ್ಯಗಳ ದುರ್ಘಟನೆಗಳು ನಮಗೆ ಪಾಠ ಆಗಬೇಕಿತ್ತು. ಈ ಘಟನೆ ಕ್ಷಮೆಗೆ ಅರ್ಹವಿಲ್ಲದ ಘಟನೆಯಲ್ಲ. ಬೇರೆ ರಾಜ್ಯ ನೋಡಿ ನಮ್ಮ ರಾಜ್ಯ ಎಚ್ಚೆತ್ತುಕೊಳ್ಳಬೇಕಿತ್ತು. ಸಚಿವರು ತಪ್ಪಿತಸ್ಥರಾಗಿದ್ದರೆ ಅವರೇ ಹೊಣೆ ಹೊತ್ತುಕೊಳ್ಳಬೇಕು. ಅಧಿಕಾರಿಗಳು ತಪ್ಪಿತಸ್ಥರಾಗಿದ್ದರೆ ಅವರೇ ಹೊಣೆ ಹೊತ್ತುಕೊಳ್ಳಬೇಕು. ಸರ್ಕಾರದ ಗಮನಕ್ಕೂ ಬಂದು ನಿರ್ಲಕ್ಷ್ಯ ವಹಿಸಿದರೆ ಸರ್ಕಾರವೇ ಹೊಣೆ ತೆಗೆದುಕೊಳ್ಳಬೇಕು ಎಂದರು.
ಈ ಹಿಂದೆ 10ಸಾವಿರ ಬೆಡ್ ಮಾಡಿದ್ದೂ ಹೌದು. ಅದು ಉಪಯೋಗವಾಗದಿದ್ದಾಗ ಅದನ್ನು ಡಿಸ್ಮೆಂಟಲ್ ಮಾಡಿದ್ದು ಹೌದು. ಪೂರ್ವಯೋಜಿತವಾಗಿ ಹಂತಹಂತವಾಗಿ ಕೇಸು ಹೆಚ್ಚಾಗಿಲ್ಲ. ಒಂದೇ ಸಲಕ್ಕೆ ಪ್ರಕರಣಗಳು ಹೆಚ್ಚಾದವು. ಹೀಗಾಗಿ ನಿಭಾಯಿಸುವಲ್ಲಿ ಸ್ವಲ್ಪ ಕಷ್ಟ ಆಗಿದೆ. ತುರ್ತುಪರಿಸ್ಥಿತಿ ಎಂದು ಘೋಷಿಸಿ, ಉಳಿದೆಲ್ಲ ಇಲಾಖೆ ಕೆಲಸ ಸ್ಥಗಿತ ಮಾಡಬೇಕು. ಆರೋಗ್ಯದ ಸಮಸ್ಯೆಗೆ ಮಾತ್ರ ಒತ್ತು ನೀಡಬೇಕು ಎಂದು ಸಿಟಿ ರವಿ ಮನವಿ ಮಾಡಿದ್ದಾರೆ.
ಸಿಎಂ ರಾಜೀನಾಮೆಯಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಸಮಸ್ಯೆ ಬಗೆಹರಿಯುತ್ತೆ ಎಂದರೆ ಅಧಿಕಾರ ದೊಡ್ಡದಲ್ಲ. ಬೇರೆ ರಾಜ್ಯಗಳಲ್ಲಿ ಸಿಎಂ ರಾಜೀನಾಮೆ ಕೇಳಿಲ್ಲ.ಇವರು ಕೇಳುತ್ತಿದ್ದಾರೆ, ಸಮಸ್ಯೆ ಪರಿಹಾರ ಆಗುತ್ತೆ ಎಂದರೆ ಅಧಿಕಾರ ದೊಡ್ಡದಲ್ಲ ಎಂದಿದ್ದಾರೆ.

