ಬಿಜಾಪುರ: ಕುಟುಂಬಸ್ಥರಿಂದಲೇ ದಲಿತ ಯುವಕ, ಮುಸ್ಲಿಂ ಬಾಲಕಿಯ ಕೊಲೆ!
ಅಂತರ್ಧರ್ಮೀಯ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಮುಸ್ಲಿಂ ಕುಟುಂಬವೊಂದು ತಮ್ಮ ಮಗಳು ಮತ್ತು ಆಕೆಯ ಪ್ರೇಮಿ ದಲಿತ ಯುವಕನನ್ನು ಕೊಲೆಗೈದಿರುವ ಮರ್ಯಾದೆಗೇಡು ಹತ್ಯೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಂದೆ ಮತ್ತು ಆಕೆಯ ಸಹೋದರ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಒಬ್ಬ ಪರಾರಿಯಾಗಿದ್ದಾನೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ವಿಜಯಪುರದ ದೇವರಾ ಹಿಪ್ಪರಗಿ ತಾಲ್ಲೂಕಿನ ಸಲಾಡಹಳ್ಳಿ ಗ್ರಾಮದಲ್ಲಿ ಮಂಗಳವಾರ ಈ ಘಟನೆ ನಡೆದಿದೆ. 19 ವರ್ಷದ ಬಸವರಾಜು ಮತ್ತು ಪ್ರೀತಿಯಲ್ಲಿದ್ದ 16 ವರ್ಷದ ದಾವಲಾಬಿ ಎಂಬ ಪ್ರೇಮಿಗಳನ್ನು ಬಾಲಕಿಯ ಕುಟುಂಬ ಹತ್ಯೆಗೈದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೇಮ ಸಂಬಂಧದ ವಿರುದ್ಧ ಮುಸ್ಲಿಂ ಕುಟುಂಬ ಯುವಕನಿಗೆ ಎಚ್ಚರಿಕೆ ನೀಡಿದ್ದರೂ ಅವರು ಆ ಬಗ್ಗೆ ತಲೆಕೆಡಿಸಿಕೊಳ್ಳದೆ, ತಮ್ಮ ಪ್ರೀತಿಯನ್ನು ಮುಂದುವರೆಸಿದ್ದರು. ಇದರಿಂದ ಕೋಪಗೊಂಡ ಬಾಲಕಿಯ ಕುಟುಂಬ ಅವರ ಮೇಲೆ ಹಲ್ಲೆ ನಡೆಸಿದೆ ಎಂದು ಹೇಳಲಾಗಿದೆ.
ಮಂಗಳವಾರ ಮಧ್ಯಾಹ್ನ ದಾವಲಾಬಿಯ ತಂದೆ ಮತ್ತು ಸಹೋದರ ಹಾಗೂ ಮೂವರೊಂದಿಗೆ ಬಂದು ಯುವಕ ಮತ್ತು ಬಾಲಕಿಯ ಮೇಲೆ ಕಲ್ಲು ಮತ್ತು ಕೋಲುಗಳಿಂದ ಹಲ್ಲೆ ನಡೆಸಿ ಅವರನ್ನು ಕೊಂದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪಡೆದ ಕೂಡಲೇ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಟಿ ಶವಗಳನ್ನು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಬುಧವಾರ ಇಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರನ್ನು ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

