ತಾಯಿ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ದುನಿಯಾ ವಿಜಯ್..!
ಕೊರೊನಾ ಸಂದರ್ಭದಲ್ಲಿ ವೃದ್ಧ ಪೋಷಕರನ್ನು ಯಾವ ರೀತಿ ಹಾರೈಕೆ ಮಾಡಬೇಕು ಎನ್ನುವ ಬಗ್ಗೆ ಕೊರೊನಾ ಗೆದ್ದ ಸ್ಪೂರ್ತಿದಾಯಕ ಕಥೆಯನ್ನ ದುನಿಯಾ ವಿಜಯ್ ಹೇಳಿಕೊಂಡಿದ್ದರು. ಇದೀಗ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಆರೋಗ್ಯ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್‌ವುಡ್‌ನ ಕರಿಚಿರತೆ, ಬ್ಲಾಕ್ ಕೋಬ್ರಾ ಸುನಿಯಾ ವಿಜಯ್ ಅವರ ತಂದೆ-ತಾಯಿಗೆ ಕೋವಿಡ್-19 ಪಾಸಿಟಿವ್ ಕಂಡುಬಂದಿತ್ತು. ಕಳೆದ ತಿಂಗಳು ದುನಿಯಾ ವಿಜಯ್ ಅವರ ತಂದೆ-ತಾಯಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ವೈದ್ಯರ ಸಲಹೆ ಹಾಗೂ ಮಾರ್ಗದರ್ಶನದಿಂದ ಮನೆಯಲ್ಲೇ ಚಿಕಿತ್ಸೆ ಪಡೆದುಕೊಂಡ ದುನಿಯಾ ವಿಜಯ್ ತಂದೆ ರುದ್ರಪ್ಪ ಹಾಗೂ ತಾಯಿ ನಾರಾಯಣಮ್ಮ ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
ಈ ವೇಳೆ ಕೊರೊನಾ ಸಂದರ್ಭದಲ್ಲಿ ಹೆತ್ತ ತಂದೆ-ತಾಯಿಯನ್ನ ದೂರು ಮಾಡಬೇಡಿ ಎಂದು ಅಭಿಮಾನಿಗಳಿಗೆ ಕೇಳಿಕೊಂಡಿದ್ದರು. ಇದೀಗ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಹೀಗಾಗಿ, ಕಳೆದ 20 ದಿನಗಳಿಂದ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಬ್ರೇನ್ ಸ್ಟ್ರೋಕ್ ಆದ ಕಾರಣ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು, ಪ್ರತಿದಿನ ಮನೆಗೆ ಬಂದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರಂತೆ. ಕೆಲ ದಿನಗಳ ಹಿಂದಷ್ಟೇ ಕೋವಿಡ್ನಿಂದ ಚೇತರಿಸಿಕೊಂಡಿದ್ದ ನನ್ನ ತಾಯಿಯ ಆರೋಗ್ಯ ಹದಗೆಟ್ಟಿದೆ ಎಂದು ವಿಜಯ್ ಭಾವುಕರಾಗಿ ತಿಳಿಸಿದ್ದಾರೆ.
ಪ್ರತಿದಿನ ಅವರ ಆರೋಗ್ಯ ಹದಗೆಡುತ್ತಿದೆ ಅಂತಾ ದುನಿಯಾ ವಿಜಯ್ ತಾಯಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

