‘ಬಿಎಸ್ವೈ ಪುತ್ರ ಸಿಎಂ ಆಡಳಿತ ನಡೆಸುತ್ತಿದ್ದಾನೆ’ – ಶಾಸಕ ಯತ್ನಾಳ್ ಆರೋಪ!
‘ಬಿಎಸ್ವೈ ಪುತ್ರ ಸಿಎಂ ಆಡಳಿತ ನಡೆಸುತ್ತಿದ್ದಾನೆ’ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಮೈಸೂರಿನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, “ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ. ಸತ್ಯ ಒಂದು ದಿನ ಬೆಳಕಿಗೆ ಬರುತ್ತದೆ” ಎಂದಿದ್ದಾರೆ.
ಸಿಎಂ ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಸಭೆಗಳಿಗೂ ಅವರು ಭಾಗಿಯಾಗುತ್ತಿಲ್ಲ. ನೂರು ಫೈಲ್ ಗಳಿದ್ದರೆ ಅದರಲ್ಲಿ ಬಹುತೇಕ ಫೈಲ್ ಗಳಿಗೆ ಸಿಎಂ ಹಾಕಬೇಕಾದ ಸಹಿ ಜಾಗದಲ್ಲಿ ಅವರ ಪುತ್ರನ ಸಹಿ ಇರುತ್ತದೆ ಎಂದು ಆರೋಪಿಸಿದ್ದಾರೆ.
ಅವರ ವಯೋಮಿತಿ ಆಧಾರದ ಮೇಲೆ ಸಿಎಂ ಬದಲಾವಣೆ ಆಗೇ ಆಗುತ್ತದೆ. ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ ಆಗೇ ಆಗುತ್ತದೆ. ಇದನ್ನು ಕಾದು ನೋಡಿ ಎಂದು ಯತ್ನಾಳ್ ಹೇಳಿದ್ದಾರೆ.
ಇತ್ತ ಎಸ್ ಟಿ ಸೋಮಶೇಖರ್ ಹೇಳಿದ ಮಾತಿಗೂ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ. ‘ಸಿಎಂ ಧೂಳಿಗೆ ಸಮ ಇಲ್ಲದವರು ಮಾತನಾಡುತ್ತಾರೆ’ ಎಂದು ಎಸ್ ಟಿ ಸೋಮಶೇಖರ್ ಪರೋಕ್ಷವಾಗಿ ಯತ್ನಾಳ್ ಗೆ ಟಾಂಗ್ ಕೊಟ್ಟಿದ್ದರು. ಈ ಮಾತಿಗೆ ಯತ್ನಾಳ್ ತಿರುಗೇಟು ಕೊಟ್ಟಿದ್ದಾರೆ. ”ಯಾವು ಭ್ರಷ್ಟರ ಪಾದದ ಧೂಳಾಗಲು ಸಿದ್ದರಿಲ್ಲ. ಅಂಥವರ ಪಾದದ ಧೂಳು ಸೋಮಶೇಖರ್ ಆಗಲಿ. ನಾವು ಭಗವಂತನ ಪಾದದ ಧೂಳಾಗುತ್ತೇವೆ” ಎಂದು ಟಾಂಗ್ ಕೊಟ್ಟಿದ್ದಾರೆ.

