ಜೈಲಿನ ಗೋಡೆ ಕುಸಿದು 22 ಕೈದಿಗಳಿಗೆ ಗಾಯ : ಓರ್ವನ ಸ್ಥಿತಿ ಗಂಭೀರ..!
ಮಧ್ಯಪ್ರದೇಶದ ಜೈಲಿನಲ್ಲಿ ಗೋಡೆ ಕುಸಿದ ಪರಿಣಾಮ 22 ಕೈದಿಗಳು ಗಾಯಗೊಂಡಿದ್ದಾರೆ. ಶನಿವಾರ ಬೆಳಗಿನ ಜಾವ 5.10 ರ ಸುಮಾರಿಗೆ ಮಧ್ಯಪ್ರದೇಶದ ಭಿಂದ್ ಜಿಲ್ಲಾ ಕಾರಾಗೃಹದ ಬ್ಯಾರಕ್ ಸಂಖ್ಯೆ 6 ರ ಗೋಡೆ ಕುಸಿದ ಪರಿಣಾಮ 22 ಕೈದಿಗಳು ಗಾಯಗೊಂಡಿದ್ದು ಓರ್ವನ ಸ್ಥಿತಿ ಗಂಭೀರವಾಗಿದೆ.
“ಘಟನೆಯ ಸಮಯದಲ್ಲಿ ಜೈಲಿನೊಳಗೆ 255 ಕೈದಿಗಳಿದ್ದು ಈ ಪೈಕಿ 22 ಕೈದಿಗಳು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಒಬ್ಬ ಕೈದಿಯನ್ನು ಉನ್ನತ ವೈದ್ಯಕೀಯ ಚಿಕಿತ್ಸೆಗಾಗಿ ಗ್ವಾಲಿಯರ್ಗೆ ರವಾನಿಸಲಾಗಿದ್ದು, ಇತರ ಗಾಯಗೊಂಡ ಕೈದಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ” ಎಂದು ಭಿಂಡ್ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
“ನಮಗೆ ಮಾಹಿತಿ ದೊರೆತ ತಕ್ಷಣ, ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಗಾಗಿ ಜೈಲಿಗೆ ಧಾವಿಸಿದರು” ಎಂದು ಸಿಂಗ್ ಹೇಳಿದರು.
ಜೈಲು ಕಟ್ಟಡ ಸಾಕಷ್ಟು ಹಳೆಯದಾಗಿದ್ದು, ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋಡೆ ಕುಸಿದಿರಬಹುದು ಎಂದು ಪೊಲೀಸರು ಊಹಿಸಿದ್ದಾರೆ.

