ಮಧ್ಯಪ್ರದೇಶದಲ್ಲಿ ಪ್ರವಾಹ: 1,171 ಗ್ರಾಮಗಳು ಜಲಾವೃತ; ಮರದ ಮೇಲೆ ದಿನ ಕಳೆದ ಜನರು!
ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಧ್ಯಪ್ರದೇಶದ ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿರುವ 1,171 ಗ್ರಾಮಗಳು ಜಲಾವೃತಗೊಂಡಿದ್ದು, ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹ ಪೀಡಿತ ಶಿವಪುರಿ ಜಿಲ್ಲೆಯಲ್ಲಿ ಮೂರು ಜನರು ಸುಮಾರು 24 ಗಂಟೆಗಳ ಕಾಲ ಮರದ ಮೇಲೆ ಸಿಲುಕಿಂಡಿದ್ದಾರೆ. ಅಲ್ಲದೆ, ಇತರ ಐವರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಿವಪುರಿ, ಶಿಯೋಪುರ್, ಗ್ವಾಲಿಯರ್ ಮತ್ತು ಡಾಟಿಯಾ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಸೇನೆಯನ್ನು ಕೇಳಲಾಗಿದೆ ಎಂದು ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್ ರಾಜೋರಾ ಅವರು ತಿಳಿಸಿದ್ದಾರೆ.
ಪ್ರವಾಹ ಪೀಡಿತ ಶಿವಪುರಿ ಜಿಲ್ಲೆಯ ಪಿಪ್ರೌಧ ಗ್ರಾಮದಲ್ಲಿ ಬೆಳಗ್ಗೆ 5 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದಲ್ಲದೆ, ಶಿವಪುರಿಯ ಬೀಚಿ ಗ್ರಾಮದಲ್ಲಿ ಮೂರು ಜನರು 24 ಗಂಟೆಗಳ ಕಾಲ ಮರದ ಮೇಲೆ ಸಿಲುಕಿಕೊಂಡಿದ್ದರು. ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್ಡಿಆರ್ಎಫ್)ಯ ತಂಡವು ಮಂಗಳವಾರ ದೋಣಿಗಳ ಸಹಾಯದಿಂದ ಅವರನ್ನು ರಕ್ಷಿಸಿತು ಎಂದು ರಾಜೋರಾ ಹೇಳಿದ್ದಾರೆ.
“ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ಒಟ್ಟು 1,171 ಹಳ್ಳಿಗಳು ಅತಿಯಾದ ಮಳೆಯಿಂದಾಗಿ ಹಾನಿಗೊಳಗಾವೆ. ವಿಶೇಷವಾಗಿ ಶಿವಪುರಿ ಮತ್ತು ಶಿಯೋಪುರ್ ಜಿಲ್ಲೆಗಳಲ್ಲಿ 800 ಮಿಮೀ ಮಳೆಯಾಗಿದ್ದು, ಇದು ಪ್ರವಾಹಕ್ಕೆ ಕಾರಣವಾಗಿದೆ” ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ.
ಇದನ್ನೂ ಓದಿ: ನಾನಾ ಬೇಡಿಕೆಗಳಿಗೆ ಆಗ್ರಹಿಸಿ ಮಧ್ಯಪ್ರದೇಶದಲ್ಲಿ 3,000 ವೈದ್ಯರ ರಾಜೀನಾಮೆ!
ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳ ಸಹಾಯದಿಂದ 1,600 ಜನರನ್ನು ರಕ್ಷಿಸಲಾಗಿದೆ. 200 ಹಳ್ಳಿಗಳಲ್ಲಿ ಇನ್ನೂ ಪ್ರವಾಹವಾಗುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ರಕ್ಷಿಸಲು ದೋಣಿಗಳನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
“ನಾನು ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ. ಜನರನ್ನು ರಕ್ಷಿಸಲು ಶಿಬಿರಗಳನ್ನು ಆರಂಭಿಸಲು ತಿಳಿಸಲಾಗಿದೆ. ರಕ್ಷಣಾ ಕಾರ್ಯ ಮತ್ತು ಪರಿಹಾರ ಕಾರ್ಯಗಳು ನಡೆಯುತ್ತಿವೆ” ಎಂದು ಅವರು ತಿಳಿಸಿದ್ದಾರೆ.
ಸೋಮವಾರ, ಶಿವಪುರಿಯಲ್ಲಿನ ಕೆಲವು ಪ್ರವಾಹ ಪೀಡಿತ ಗ್ರಾಮಗಳಲ್ಲಿ ಜನರನ್ನು ಸ್ಥಳಾಂತರಿಸಲು ವಿಮಾನಗಳನ್ನು ಕಳುಹಿಸಲಾಗಿತ್ತು. ಆದರೆ, ಮಂಗಳವಾರ ಮತ್ತಷ್ಟು ಮಳೆಯ ಅಬ್ಬರ ಹೆಚ್ಚಾಗಿದ್ದರಿಂದ ಮತ್ತು ಹವಾಮಾನ ವೈಪರಿತ್ಯದಿಂದಾಗಿ ವಿಮಾನಗಳು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ, ರಾಜ್ಯದ ಹೆಚ್ಚಿನ ಭಾಗಗಳಲ್ಲಿ, ವಿಶೇಷವಾಗಿ ಶಿವಪುರಿ ಮತ್ತು ಶಿಯೋಪುರ್ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹಕ್ಕೆ ಒಳಗಾದ ಮೂರು ಗ್ರಾಮಗಳ ಜನರನ್ನು ಸ್ಥಳಾಂತರಿಸಲು ನಾಲ್ಕು ಹೆಲಿಕಾಪ್ಟರ್ಗಳು ಶಿವಪುರಿ ಜಿಲ್ಲೆಯಲ್ಲಿ ಕಾರ್ಯಾಚರಣೆ ನಡೆಸುತ್ತಿವೆ ಎಂದು ಜಿಲ್ಲಾಧಿಕಾರಿ ಅಕ್ಷಯ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಿಎಂಎವೈ ಹಗರಣ: ಸರ್ಕಾರಿ ಕಚೇರಿಗೆ ನುಗ್ಗಿ ಬಿಜೆಪಿ ಕಾರ್ಯಕರ್ತರ ದಾಂದಲೆ!

