ನ್ಯಾಯಾಧೀಶರ ವಿರುದ್ದ ಅವಹೇಳನಕಾರಿ ಪೋಸ್ಟ್; ಈವರೆಗೆ ಐವರ ಬಂಧನ!
ನ್ಯಾಯಾಧೀಶರು ಬೆದರಿಕೆಗಳ ಬಗ್ಗೆ ದೂರು ನೀಡಿದಾಗ ತನಿಖಾ ಸಂಸ್ಥೆಗಳು ಸ್ಪಂದಿಸುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರು ಹೇಳಿದ ಕೆಲವು ದಿನಗಳ ನಂತರ, ಆಂಧ್ರಪ್ರದೇಶ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಮಾನಹಾನಿಕರ ಪೋಸ್ಟ್ ಮಾಡಿದ ಇಬ್ಬರನ್ನು ಸಿಬಿಐ ಬಂಧಿಸಿದೆ.
ಒಟ್ಟಾರೆಯಾಗಿ, ನ್ಯಾಯಾಧೀಶರನ್ನು ಅವಹೇಳನ ಮಾಡಿದ ಪ್ರಕರಣದಲ್ಲಿ ಇದುವರೆಗೂ ಐದು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಜುಲೈ 09 ರಂದು ಮೊದಲ ಬಾರಿಗೆ ಒಬ್ಬ ಆರೋಪಿಯನ್ನು ಸಿಬಿಐ ಬಂಧಿಸಿತ್ತು.
ಇದನ್ನೂ ಓದಿ: ನ್ಯಾಯಾಧೀಶರ ಬೆದರಿಕೆ ದೂರುಗಳಿಗೆ ಸಿಬಿಐ, ಏಜೆನ್ಸಿಗಳು “ಸ್ಪಂದಿಸುವುದಿಲ್ಲ”: ಮುಖ್ಯ ನ್ಯಾಯಮೂರ್ತಿ
ನ್ಯಾಯಾಧೀಶರನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ನ್ಯಾಯಾಧೀಶರು ಮತ್ತು ನ್ಯಾಯಾಂಗದ ವಿರುದ್ಧ ಅವಹೇಳನಕಾರಿ ಪೋಸ್ಟ್ಗಳನ್ನು ಆರೋಪಿಗಳು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದ ನೋಂದಣಿಯ ನಂತರ, ಸಿಬಿಐ ಎಫ್ಐಆರ್ನಲ್ಲಿ ಹೆಸರಿಸಲಾದ 16 ಆರೋಪಿಗಳ ಪೈಕಿ 13 ಆರೋಪಿಗಳನ್ನು ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಪತ್ತೆ ಮಾಡಿದೆ. ಉಳಿದ ಮೂವರು ವಿದೇಶದಲ್ಲಿರುವುದು ಪತ್ತೆಯಾಗಿದೆ. ಸಿಬಿಐ ಇದುವರೆಗೆ 13 ಆರೋಪಿಗಳಲ್ಲಿ 11 ಜನರನ್ನು ವಿಚಾರಣೆ ನಡೆದಿದ್ದು, ಅವರಲ್ಲಿ 5 ಜನರನ್ನು ಬಂಧಿಸಿದೆ.
ಇತ್ತೀಚೆಗೆ ಜಾರ್ಖಂಡ್ ಜಿಲ್ಲಾ ನ್ಯಾಯಾಧೀಶರ ಹತ್ಯೆ ಪ್ರಕರಣವನ್ನು ನ್ಯಾಯಾಲಯ ಸ್ವಯಂ ಕೈಗೆತ್ತಿಕೊಂಡಿದ್ದು, ಮುಖ್ಯ ನ್ಯಾಯಮೂರ್ತಿ ರಮಣ ಅವರು ಶುಕ್ರವಾರ ತನಿಖಾ ಸಂಸ್ಥೆಗಳ ವಿರುದ್ಧ ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: ಸಿಬಿಐ ಮುಖ್ಯಸ್ಥರ ಆಯ್ಕೆ: ಹಳೇ ತೀರ್ಪು ಉಲ್ಲೇಖಿಸಿದ ಸಿಜೆಐ ರಮಣ; ಹುದ್ದೆಯ ಅವಕಾಶ ಕಳೆದುಕೊಂಡ ಬಿಜೆಪಿ ಬೆಂಬಲಿಗರು!
“ಸಿಬಿಐ ಏನನ್ನೂ ಮಾಡಿಲ್ಲ. ನಾವು ಸಿಬಿಐ ಧೋರಣೆಯಲ್ಲಿ ಸ್ವಲ್ಪ ಬದಲಾವಣೆಯನ್ನು ನಿರೀಕ್ಷಿಸಿದ್ದೆವು ಆದರೆ ಯಾವುದೇ ಬದಲಾವಣೆಯಿಲ್ಲ. ಕ್ಷಮಿಸಿ, ಇದು ಪರಿಸ್ಥಿತಿ” ಎಂದು ರಮಣ ಅವರು ಹೇಳಿದ್ದರು.
ಜುಲೈ 28 ರಂದು ಜಾರ್ಖಂಡ್ ಜಿಲ್ಲಾ ನ್ಯಾಯಾಧೀಶ ಉತ್ತಮ್ ಆನಂದ್ (49) ಅವರು ಬೆಳಗಿನ ಜಾವ ಜಾಗಿಂಗ್ ಮಾಡುತ್ತಿದ್ದಾಗ ಆಟೋ ಡಿಕ್ಕಿ ಹೊಡೆದು ಕೊಲ್ಲಲ್ಪಟ್ಟರು. ಪ್ರಕರಣವು ಮೊದಲಿಗೆ ಹಿಟ್ ಅಂಡ್ ರನ್ ಎಂದು ಹೇಳಲಾಗಿತ್ತು, ಆದರೆ ಸಾಮಾಜಿಕ ಜಾಲತಾಣದಲ್ಲಿ ಘಟನೆಯ ಸಿಸಿ ಟಿವಿ ದೃಶ್ಯಾವಳಿಗಳು ವೈರಲ್ ಆದ ನಂತರ ಪ್ರಕರಣವು ಇನ್ನೊಂದು ಮಗ್ಗುಲಿಗೆ ಹೊರಳಿತು.
ಉತ್ತಮ್ ಆನಂದ್ ಅವರು ಧನ್ಬಾದ್ನ ಅನೇಕ ಮಾಫಿಯಾ ಹತ್ಯಾ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದ್ದರು, ಅದರಲ್ಲಿ ಅವರು ಇಬ್ಬರು ದರೋಡೆಕೋರರ ಜಾಮೀನು ಕೋರಿಕೆಯನ್ನು ತಿರಸ್ಕರಿಸಿದ್ದರು.
ಇದನ್ನೂ ಓದಿ:ಯೆಸ್ ಬ್ಯಾಂಕ್ಗೆ 466 ಕೋಟಿ ರೂ. ವಂಚನೆ; ಗೌತಮ್ ಥಾಪರ್ ಮನೆ, ಕಚೇರಿಗಳ ಮೇಲೆ ಸಿಬಿಐ ದಾಳಿ!

