ಬಿಜೆಪಿ ಕಾರ್ಯಕರ್ತರ ಗುಂಡಾಗಿರಿ; ತ್ರಿಪುರಾದಲ್ಲಿ ಕೊರೊನಾ ನಿಯಮ ಉಲ್ಲಂಘನೆ ಆರೋಪದಲ್ಲಿ 12 ಟಿಎಂಸಿ ಕಾರ್ಯಕರ್ತರ ಬಂಧನ!
ಈಶಾನ್ಯದ ತ್ರಿಪುರಾದಲ್ಲಿ ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಟಿಎಂಸಿ ಪಕ್ಷದ 12 ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ನಿನ್ನೆ ತ್ರಿಪುರಾದ ಖೊವಾಯಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ದಾಳಿಯಲ್ಲಿ ಗಾಯಗೊಂಡ ಪಕ್ಷದ ಸದಸ್ಯರೂ ಇದ್ದಾರೆ. ಅವರನ್ನು ಬಿಗಿ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರನ್ನು ಭೇಟಿ ಮಾಡಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಟಿಎಂಸಿಯ ಉನ್ನತ ನಾಯಕರು ಅಗರ್ತಲಾಗೆ ತೆರಳಿದ್ದಾರೆ.
ರಾತ್ರಿ 7 ಗಂಟೆಯಿಂದ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ವೇಳೆ ಅವರು ಕೊರೊನಾ ನಿರ್ಬಂಧಗಳನ್ನು ಉಲ್ಲಂಘಿಸಿ ಪ್ರಯಾಣ ಮಾಡಿದ್ದಾರೆ. ಹೀಗಾಗಿ 12 ಟಿಎಂಸಿ ಸದಸ್ಯರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಬಾಂಗ್ಶು ಭಟ್ಟಾಚಾರ್ಯ, ತಾನಿಯಾ ಪೊದ್ದಾರ್, ಸುದೀಪ್ ರಹಾ ಮತ್ತು ಜಯ ದತ್ತಾ ಸೇರಿದಂತೆ ಪಕ್ಷದ ನಾಯಕರನ್ನು ಬಂಧಿಸಲಾಗಿದೆ ಎಂದು ತ್ರಿಪುರಾ ಟಿಎಂಸಿ ವಕ್ತಾರ ಆಶಿಶ್ ಲಾಲ್ ಸಿಂಗ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಸುವೇಂದು ಭೇಟಿ ಮಾಡಿದ ‘ತುಷಾರ್ ಮೆಹ್ತಾ’ರನ್ನು ಸಾಲಿಟರ್ ಜನರಲ್ ಹುದ್ದೆಯಿಂದ ವಜಾಗೊಳಿಸಿ: ಮೋದಿಗೆ ಟಿಎಂಸಿ ಪತ್ರ
ಶನಿವಾರ ದಲೈ ಜಿಲ್ಲೆಯ ಅಂಬಾಸಾದಲ್ಲಿ ಬಿಜೆಪಿ ಕಾರ್ಯಕರ್ತರು ತಮ್ಮ ವಾಹನದ ಮೇಲೆ ದಾಳಿ ಮಾಡಿದಾಗ ರಾಹಾ ಮತ್ತು ದತ್ತಾ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
“ದಾಳಿಯ ನಂತರ, ನಾವು ರಾಷ್ಟ್ರೀಯ ಹೆದ್ದಾರಿ 8 ರ ಮೂಲಕ ಅಗರ್ತಲಾಕ್ಕೆ ಹಿಂತಿರುಗುತ್ತಿದ್ದೆವು. ಈ ವೇಳೆ ಪೊಲೀಸರು ನಮ್ಮ ವಾಹನಗಳನ್ನು ಖೋವಾಯಿಯಲ್ಲಿ ತಡೆದರು. ‘ದುಷ್ಕರ್ಮಿಗಳಿಂದ’ ನಮ್ಮ ಮೇಲೆ ಮತ್ತೆ ದಾಳಿಗಳು ನಡೆಯಬಹುದು ಎಂದು ಹೇಳಿ ನಮ್ಮನ್ನು ವಶಕ್ಕೆ ತೆಗೆದುಕೊಂಡರು. ನಿಜವಾಗಿ, NH 8ರಲ್ಲಿ ನಮ್ಮ ಮೇಲೆ ದಾಳಿ ಮಾಡಲು ಬಿಜೆಪಿ ಕಾರ್ಯಕರ್ತರು ಹಲವಾರು ಸ್ಥಳಗಳಲ್ಲಿ ಜಮಾಯಿಸಿದ್ದರು” ಎಂದು ಸಿಂಗ್ ಹೇಳಿದ್ದಾರೆ.
ಆದಾಗ್ಯೂ, ಟಿಎಂಸಿ ಸದಸ್ಯರನ್ನು ಕೋವಿಡ್ ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಿಜೆಪಿಗರು ತಮ್ಮ ಪಕ್ಷದ ಮೇಲೆ ನಡೆಸಿರುವ ದಾಳಿಯನ್ನು ಟಿಎಂಸಿ ನಾಯಕರು ತೀವ್ರವಾಗಿ ಟೀಕಿಸಿದ್ದಾರೆ. ಈ ಘಟನೆಯು ತ್ರಿಪುರಾದಲ್ಲಿ “ಗೂಂಡಾ ರಾಜ್” (ಕಾನೂನುಬಾಹಿರತೆ) ಇದೆ ಎಂದು ಸಾಬೀತುಪಡಿಸಿದೆ. ಇದರ ಪರಿಣಾಮವನ್ನು 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಮೂಲಕ ಎದುರಿಸಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಅಭಿಷೇಕ್ ಬ್ಯಾನರ್ಜಿ ಕಾರಿನ ಮೇಲೆ ದಾಳಿ : ಬಿಜೆಪಿ ಕಾರ್ಯಕರ್ತರಿಗೆ ಟಿಎಂಸಿ ನಾಯಕ ಎಚ್ಚರಿಕೆ!

