ಕಡಿಮೆ ಬೆಲೆಗೆ ಪೆಟ್ರೋಲ್‌ ಬೇಕಿದ್ದರೆ ಅಫ್ಘಾನ್‌ಗೆ ಹೋಗಿ ಎಂದ ಬಿಜೆಪಿ ಮುಖಂಡ!

ತಾಲಿಬಾನ್ ಆಡಳಿತವಿರುವ ಅಫ್ಗಾನಿಸ್ತಾನದಲ್ಲಿ ಪೆಟ್ರೋಲ್‌ ಬೆಲೆ ಕಡಿಮೆ ಇರುತ್ತದೆ. ನೀವು ಬೇಕಿದ್ದರೆ ಅಲ್ಲಿಗೆ ಹೋಗಿ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿರುವ ಮಧ್ಯಪ್ರದೇಶದ ಬಿಜೆಪಿ ಮುಖಂಡ ವಿವಾದಕ್ಕೀಡಾಗಿದ್ದಾರೆ.

ಮಧ್ಯಪ್ರದೇಶದ ಕಟ್ನಿಯ ಜಿಲ್ಲೆಯ ಬಿಜೆಪಿ ಘಟಕದ ಮುಖ್ಯಸ್ಥ ರಾಮ್‌ರತನ್ ಪಾಯಲ್ ಅವರನ್ನು ಪತ್ರಕರ್ತರು ಇಂಧನ ಬೆಲೆ ಏರಿಕೆ ಮತ್ತು ಹಣದುಬ್ಬರದ ಬಗ್ಗೆ ಪ್ರಶ್ನಿಸಿದ್ದು, ಅದಕ್ಕೆ ಉತ್ತರಿಸಿದ ಪಾಯಲ್‌, ಅಫ್ಗಾನಿಸ್ತಾನದಲ್ಲಿ 50 ರೂ.ಗೆ ಒಂದು ಲೀಟರ್‌ ಪೆಟ್ರೋಲ್‌ ಅನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲಿ ಪೆಟ್ರೋಲ್‌ ಬಳಸಲು ಈಗ ಯಾರೂ ಇಲ್ಲ. ನೀವೇ ಹೋಗಿ ಪೆಟ್ರೋಲ್‌ ತುಂಬಿಸಿಕೊಳ್ಳಿ  ಎಂದು ಹೇಳಿದ್ದಾರೆ.

ರಾಮ್‌ರತನ್‌ ಪಾಯಲ್‌ ಅವರು ತೈಲ ಬೆಲೆ ಕುರಿತು ಮಾತನಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ದೇವಾಲಯ ಕಟ್ಟಿದ ಬಿಜೆಪಿ ಕಾರ್ಯಕರ್ತ; ಟೀಕೆಯ ಬಳಿಕೆ ಮೋದಿ ಪ್ರತಿಮೆ ತೆರವು!

“ನೀವು ಪ್ರತಿಷ್ಠಿತ ಪತ್ರಕರ್ತರಾಗಿದ್ದೀರಿ. ದೇಶದ ಪರಿಸ್ಥಿತಿಯನ್ನು ನೀವು ತಿಳಿದುಕೊಂಡಿದ್ದೀರಾ? ಪ್ರಧಾನಿ ಮೋದಿ ಪರಿಸ್ಥಿತಿಯನ್ನು ನಿಯಂತ್ರಿಸುತ್ತಿದ್ದಾರೆ. ಇನ್ನೂ 80 ಕೋಟಿ ಜನರಿಗೆ ಉಚಿತ ಪಡಿತರವನ್ನು ಅವರು ನೀಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ಬಿಜೆಪಿಯ ಯುವ ಘಟಕ ಯುವ ಮೋರ್ಚಾ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಪಾಯಲ್‌ ಬುಧವಾರ ಈ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ಪೆಟ್ರೋಲ್ ಬೆಲೆ 100 ರೂ.ಗಳನ್ನು ಈಗಾಗಲೆ ದಾಟಿದ್ದು, ಡೀಸೆಲ್ ದರಗಳು ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ 90 ರೂ.ಗೆ ತಲುಪಿದೆ.

ಇದನ್ನೂ ಓದಿ: 500 ರೂ ಸಾಲ ಪಡೆದಿದ್ದಕ್ಕೆ ಮರುಕಳಿಸಿತು ಜೀತ ಪದ್ದತಿ; ಸಾಲ ಪಡೆದಾತನ ಸಾವಿನ ನಂತರ ಪ್ರಕರಣ ದಾಖಲು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights