500 ರೂ ಸಾಲ ಪಡೆದಿದ್ದಕ್ಕೆ ಮರುಕಳಿಸಿತು ಜೀತ ಪದ್ದತಿ; ಸಾಲ ಪಡೆದಾತನ ಸಾವಿನ ನಂತರ ಪ್ರಕರಣ ದಾಖಲು!

500 ರೂ ಸಾಲ ಪಡೆದಿದ್ದಕ್ಕಾಗಿ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರನ್ನು ಒತ್ತೆಯಾಳಾಗಿ ಇಟ್ಟುಕೊಂಡು ದುಡಿಸಿಕೊಳ್ಳುತ್ತಿದ್ದ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮೊಖಾಡದಲ್ಲಿ ಮೇಲ್ವರ್ಗದ ವ್ಯಕ್ತಿಯೊಬ್ಬನ ವಿರುದ್ದ ಪೊಲೀಸರು ದೂರು ದಾಖಲಿಸಿದ್ದಾರೆ.

ಪ್ರಕರಣದ ಸಂತ್ರಸ್ತ ಬುಡಕಟ್ಟು ಜನಾಂಗದ ಕಾಲು ಧರ್ಮ ಪವಾರ್ ಎಂಬಾತ ಈ ವರ್ಷ ಜುಲೈನಲ್ಲಿ ಸಾವನ್ನಪ್ಪಿದ್ದಾರೆ. ಸುಮಾರು 08 ತಿಂಗಳ (ನವೆಂಬರ್ 2020) ಹಿಂದೆ 8ನೇ ತರಗತಿ ಓದುತಿದ್ದ ಅವರ ಮಗ ತಮ್ಮ ಹಳ್ಳಿಯ ಬಳಿ ಶವವಾಗಿ ಪತ್ತೆಯಾಗಿದ್ದನು ಎಂದು ಪೊಲೀಸರು ಹೇಳಿದ್ದಾರೆ.

ತನ್ನ ಮಗನ ಅಂತಿಮ ಸಂಸ್ಕಾರ ಮಾಡಲು ಧರ್ಮ ಪವಾರ್ ಬಳಿ ಹಣವಿರಲಿಲ್ಲ. ಆ ಕಾರಣದಿಂದಾಗಿ ಆತ ಆರೋಪಿ ರಾಮದಾಸ್ ಅಂಬು ಕೊರ್ಡೆ ಅವರಿಂದ 500 ರೂಪಾಯಿ ಸಾಲ ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪವಾರ್ ಅವರ ಪತ್ನಿಇತ್ತೀಚೆಗೆ ನೀಡಿದ ದೂರಿನ ಆಧಾರದ ಮೇಲೆ ಕೋರ್ಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಆರೋಪಿಯನ್ನು ಇನ್ನೂ ಬಂಧಿಸಲಾಗಿಲ್ಲ. ಜವಹಾರ್ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಮೊಖಾಡ ಪೊಲೀಸ್ ಠಾಣೆಯ ಸಹಾಯಕ ಇನ್ಸ್‌ಪೆಕ್ಟರ್ ಸತೀಶ್ ಗವಾಯಿ ತಿಳಿಸಿದ್ದಾರೆ.

ತನ್ನ ದೂರಿನಲ್ಲಿ ಪವಾರ್ ಅವರ ಪತ್ನಿ ತನ್ನ ಪತಿ ಈ ವರ್ಷ ಜುಲೈ 29 ರಂದು ನಿಧನರಾದರು ಎಂದು ಹೇಳಿದ್ದಾರೆ.

ಅವರ ಸಾವಿಗೂ ಕೆಲವು ತಿಂಗಳುಗಳ ಮೊದಲು, ಅವರ ಮಗ ನಾಪತ್ತೆಯಾಗಿದ್ದ. ನಂತರ ಆತನ ಶವವು ಹಳ್ಳಿಯ ಸಮೀಪದ ಕಣಿವೆಯಲ್ಲಿ ಪತ್ತೆಯಾಗಿತ್ತು. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ, ಆಕಸ್ಮಿಕವಾಗಿ ಬಿದ್ದುಹೋದನೋ ಅಥವಾ ಯಾರಾದರು ಅವನನ್ನು ತಳ್ಳಿದರೋ ಎಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ: ಟಿಎಂಸಿ ನಾಯಕರ ಮೇಲೆ ‘ತಾಲಿಬಾನ್‌ ಶೈಲಿ’ಯಲ್ಲಿ ದಾಳಿ ನಡೆಸಿ; ಬಿಜೆಪಿಗರಿಗೆ ಕರೆ ನೀಡಿದ ಬಿಜೆಪಿ ಶಾಸಕ!

ಮಗನ ಅಂತಿಮ ಸಂಸ್ಕಾರಕ್ಕಾಗಿ ಆರೋಪಿ ರಾಮದಾಸ್ ಅಂಬು ಕೊರ್ಡೆ ಬಳಿ 500 ರೂ ಸಾಲ ಪಡೆಯಲಾಗಿತ್ತು. ಆರೋಪಿ ಹಣವನ್ನು ಮರುಪಾವತಿ ಮಾಡುವ ಬದಲು ತನ್ನ ಜಮೀನಿನಲ್ಲಿ ಕೆಲಸ ಮಾಡುವಂತೆ ಮತ್ತು ಜಾನುವಾರುಗಳನ್ನು ಮೇಯಿಸಲು ತನ್ನ ಮನೆಗೆ ಬರಬೇಕೆಂದು ಒತ್ತಾಯಿಸಿದ್ದನು ಎಂದು ಆಕೆ ತನ್ನ ದೂರಿನಲ್ಲಿ ವಿವರಿಸಿದ್ದಾರೆ.

ಆರೋಪಿಯ ಷರತ್ತಿನಂತೆ ಮಗನ ಅಂತಿಮ ವಿಧಿವಿಧಾನಗಳನ್ನು ಪೂರೈಸಿದ ನಂತರ, ಪವಾರ್ ಅವರು ಕೊರ್ಡೆ ಅವರ ಮನೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು, ಆದರೆ, ಆತನಿಗೆ ಕೂಲಿಯನ್ನು ನಿಗದಿಪಡಿಸಿರಲಿಲ್ಲ.

ಆರೋಪಿಯು ತನ್ನ ಪತಿಗೆ ಪ್ರತಿದಿನ ಬೆಳಿಗ್ಗೆ ಒಂದು ಭಕ್ರಿ (ಜೋಳ, ಬಜ್ರಾ ಅಥವಾ ಇತರ ಹಿಟ್ಟಿನಿಂದ ಮಾಡಿದ ಹುಳಿಯಿಲ್ಲದ ಬ್ರೆಡ್) ನೀಡುತ್ತಿದ್ದರು, ಮತ್ತು ನಂತರ ಅವನಿಗೆ ರಾತ್ರಿ ಊಟ ನೀಡಲಾಗುತ್ತಿತ್ತು. ಪವಾರ್ ವೇತನ ಕೇಳಿದಾಗಲೆಲ್ಲಾ, ಕೋರ್ಡೆ ಅವರನ್ನು ನಿಂದಿಸುತ್ತಿದ್ದ ಎಂದು ಆಕೆ ಆರೋಪಿಸಿದ್ದಾರೆ.

ದೂರಿನ ಆಧಾರದ ಮೇಲೆ ಮೊಖಾಡ ಪೊಲೀಸರು ಕಾರ್ಡೆ ವಿರುದ್ಧ ಬಂಧಿತ ಕಾರ್ಮಿಕ ವ್ಯವಸ್ಥೆ (ನಿರ್ಮೂಲನೆ) ಕಾಯ್ದೆಯ ಸೆಕ್ಷನ್ ಮತ್ತು ಐಪಿಸಿ ಸೆಕ್ಷನ್ 374 (ಕಾನೂನುಬಾಹಿರ ಕಡ್ಡಾಯ ಕಾರ್ಮಿಕ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಗವಾಯಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ದೇವಾಲಯ ಕಟ್ಟಿದ ಬಿಜೆಪಿ ಕಾರ್ಯಕರ್ತ; ಟೀಕೆಯ ಬಳಿಕೆ ಮೋದಿ ಪ್ರತಿಮೆ ತೆರವು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights